ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಅಭಯ ನೀಡಿರುವುದರಿಂದ ಅಡಿಕೆ ಬೆಳೆಗಾರರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಅಡಿಕೆ ಕಾರ್ಯಪಡೆ(ಟಾಸ್ಕ್ ಫೋರ್ಸ್) ಅಧ್ಯಕ್ಷ ಹಾಗೂ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಡಿಕೆ ಆತಂಕದ ಬೆಳೆಯೂ ಕೂಡ. ಇತ್ತೀಚೆಗೆ ಅಡಿಕೆಗೆ ಸಂಬಧಿಸಿದಂತೆ ವದಂತಿಗಳು ಹಬ್ಬುತ್ತಿವೆ. ಆದರೆ ಬೆಳೆಗಾರರು ಯಾವ ಆತಂಕ ಪಡಬೇಕಾಗಿಲ್ಲ. ಶಾಸಕರಾದ ಎಚ್.ಹಾಲಪ್ಪ, ರೇಣುಕಾಚಾರ್ಯ ಮತ್ತು ಅಡಿಕೆ ಸಂಸ್ಥೆಗಳ ಮುಖಂಡರ ಜೊತೆಗೂಡಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿದ್ದೇವೆ. ಅವರು ಅಡಿಕೆ ಬೆಳೆಗಾರರು ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ ಎಂದರು.
ವಿವಿ ತಜ್ಞರ ವರದಿ ಬರುವ ತನಕ ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಮುಂದಕ್ಕೆ ಹಾಕುವಂತೆ ಮನವಿ ಮಾಡಿದ್ದೇವೆ. ಸಮಿತಿ ನೀಡುವ ವರದಿ ಆಧಾರದಲ್ಲಿ ನ್ಯಾಯಾಲಯದಲ್ಲಿ ಕೇಸು ಮುಂದುವರೆಸಿ ಅಡಿಕೆ ಬೆಳೆ ಹಾನಿಕಾರಕ ಅಲ್ಲ ಎಂಬುದನ್ನು ಸಾಬೀತು ಪಡಿಸಿ ಬೆಳೆಗಾರರಿಗೆ ರಕ್ಷಣೆ ನೀಡುತ್ತೇವೆ. ಯಾವ ವದಂತಿಗಳಿಗೂ ಕಿವಿ ಗೊಡಬಾರದು. ಮುಖ್ಯಮಂತ್ರಿ ಅಡಿಕೆ ಬೆಳೆಗಾರರ ರಕ್ಷಕರಾಗಿದ್ದಾರೆ ಎಂದರು.
ಮಲೆನಾಡು ಭಾಗದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯಾಗದೇ ಆ ಭಾಗದ ಸುಮಾರು 166 ಗ್ರಾಮಗಳ ಜನರಿಗೆ ಸಂಕಷ್ಟ ಎದುರಾಗಲಿದೆ. ವರದಿಯಲ್ಲಿರುವಂತೆ ಸುಮಾರು 10 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಸೂಕ್ಷ್ಮ ಪ್ರದೇಶವೆಂದು ಕರೆಯಲಾಗುತ್ತದೆ. ಅಲ್ಲಿ ಯಾವ ಅಭಿವೃದ್ಧಿ ಕೆಲಸವೂ ಆಗುವುದಿಲ್ಲ. ಮನೆ ಕಟ್ಟುವ ಹಾಗಿಲ್ಲ. ಗದ್ದೆಗೆ ಔಷಧ ಹೊಡೆಯುವ ಹಾಗಿಲ್ಲ. ಕಲ್ಲು ಮರಳು ತೆಗೆಯುವ ಹಾಗಿಲ್ಲ. ಇದು ರೈತರಿಗೆ ಮರಣ ಶಾಸನವೇ ಆಗಲಿದೆ. ಹಾಗಾಗಿ ಇದನ್ನು ಯಾವಾಗಲೂ ವಿರೋಧಿ ಸುತ್ತಲೇ ಬಂದಿದ್ದೇವೆ ಎಂದರು. ಆದರೆ ಹಸಿರುಪೀಠ ಈ ವರದಿಯನ್ನು ಜಾರಿ ಮಾಡುವಂತೆ ನ್ಯಾಯಾಲಯದಲ್ಲಿ ಒತ್ತಡ ಹಾಕುತ್ತಿದೆ. ಜನರ ಮೇಲೆ ಕಸ್ತೂರಿ ರಂಗನ್ ವರದಿ ತೂಗುಕತ್ತಿ ಇದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕೇಂದ್ರ ಸಚಿವರೊಂದಿಗೆ ಮಾತನಾಡಿದ್ದಾರೆ.
ಯಾವುದಕ್ಕೂ ನಮ್ಮ ಒಪ್ಪಿಗೆ ಇಲ್ಲದೇ ಜಾರಿಗೆ ತರಬಾರದು ಎಂದಿದ್ದಾರೆ ಮತ್ತು ಈ ವಿಷಯ ಕೂಡ ನ್ಯಾಯಾಲಯದಲ್ಲಿ ಇರುವುದರಿಂದ ಇದಕ್ಕೂ ಕೂಡ ವಕೀಲರನ್ನು ನೇಮಕ ಮಾಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದರು. ಆರ್.ಎಂ.ಮಂಜುನಾಥ ಗೌಡರ ಅನರ್ಹತೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಚುಟುಕಾಗಿ ಉತ್ತರಿಸಿದ ಅವರು, ನಿಯಮದಂತೆಯೇ ಅವರನ್ನು ಅನರ್ಹಗೊಳಿಸಲಾಗಿದೆ. ರೈತರ ಬ್ಯಾಂಕ್ ಸಶಕ್ತವಾಗಿ ಉಳಿಯಬೇಕೆಂಬುದು ನಮ್ಮ ಆಶಯವಷ್ಟೆ ಎಂದರು.
ಕ್ಯಾಂಪ್ಕೋ ಅಧ್ಯಕ್ಷ ಸತೀಶ್‌ಚಂದ್ರ, ಮಾಜಿ ಅಧ್ಯಕ್ಷ ಪದ್ಮನಾಭ್, ತುಮ್ಕೋಸ್ ಮಾಜಿ ಅಧ್ಯಕ್ಷ ಶಿವಕುಮಾರ್, ದಯಾನಂದ್ ಇದ್ದರು.
ಅಡಿಕೆಗೆ ಸಂಬಂಧಿ ಸಿದಂತೆ ಸಿಗರೇಟ್ ಕಂಪನಿಗಳು ಲಾಬಿ ಮಾಡುತ್ತಿರುವುದು ನಿಜ.ಇದರ ಜೊತೆಗೆ ಹಿಂದಿನ ಕೇಂದ್ರ ಸರ್ಕಾರ ಸುಪ್ರಿಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿಅಡಿಕೆ ಹಾನಿಕರ ಬೆಳೆ ಎಂದು ಹೇಳಿತ್ತು. ಈಗ ಅದು ನ್ಯಾಯಾಲಯದಲ್ಲಿದೆ. ಅದಕ್ಕಾಗಿ ನ್ಯಾಯಾಲಯಕ್ಕೆ ಹೋಗುವುದು ಅನಿವಾರ್ಯವಾಗಿದೆ. ಇದಕ್ಕಾಗಿಯೇ ತಜ್ಞರ ನೆರವು ಪಡೆದಿದ್ದೇವೆ. ರಾಮಯ್ಯ ವಿವಿ ಇದನ್ನು ಕೈಗೆತ್ತಿಕೊಂಡಿದೆ. ಅದಕ್ಕಾಗಿ ಹಣ ಕೂಡ ನೀಡಬೇಕು ಮತ್ತು ವಕೀಲರನ್ನು ನೇಮಕ ಮಾಡಬೇಕಾಗುತ್ತದೆ. ಇದಕ್ಕಾಗಿ 2 ಕೋಟಿ ರೂ. ಹಣ ಬೇಕಾಗಬಹುದು. ಮುಖ್ಯಮಂತ್ರಿಗಳು ನೀಡುವ ಭರವಸೆ ನೀಡಿದ್ದಾರೆ.
– ಆರಗ ಜ್ಞಾನೇಂದ್ರ, ಶಾಸಕರು