Advertisement

ದೂರು ನೀಡಲು ಬಂದ ಮಹಿಳೆ ಜತೆ ಎಸಿಪಿ ಅಸಭ್ಯ ವರ್ತನೆ?

12:19 PM Nov 28, 2017 | |

ಬೆಂಗಳೂರು: ಹಲ್ಲೆ ಪ್ರಕರಣವೊಂದರ ವಿಚಾರಣೆ ವೇಳೆ ಯಶವಂತಪುರ ಎಸಿಪಿ ರವಿಪ್ರಸಾದ್‌ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ.

Advertisement

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಂತ್ರಸ್ತೆ ಸೌಮ್ಯ, “ಹೆಸರುಘಟ್ಟ ನಿವಾಸಿಗಳಾದ ಹನುಮಂತರಾಯಪ್ಪ ಹಾಗೂ ರವಿ ಎಂಬುವರು ದೇವಾಲಯದ ಟ್ರಸ್ಟ್‌ನ ಸದಸ್ಯತ್ವ ವಿಚಾರದಲ್ಲಿ ನನ್ನ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ, ನನ್ನ ಗುಪ್ತಾಂಗ ಮುಟ್ಟಿ ಲೈಂಗಿಕವಾಗಿ ದೌರ್ಜನ್ಯವೆಸಗಿದ್ದರು.

ಈ ಸಂಬಂಧ ಸೋಲದೇವನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಆದರೆ, ಠಾಣಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿರಲಿಲ್ಲ. ನಂತರ ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದೆ. ಆಯುಕ್ತರ ಸೂಚನೆ ಮೇರೆಗೆ ಎಸಿಪಿ ರವಿಪ್ರಸಾದ್‌ ನನಗೆ ವಿಚಾರಣೆ ಹಾಜರಾಗುವಂತೆ ಸೂಚಿಸಿದ್ದರು.

“ವಿಚಾರಣೆ ಪ್ರಕ್ರಿಯೆ ಮುಗಿದ ಬಳಿಕ ಘಟನಾ ಸ್ಥಳಕ್ಕೆ ಬಂದ ಎಸಿಪಿ ರವಿಪ್ರಸಾದ್‌ ಹಾಗೂ ಇನ್ಸ್‌ಪೆಕ್ಟರ್‌ ವೆಂಕಟೇಶ್‌ಗೌಡ, ನನ್ನ ಪರ ಸಾಕ್ಷ್ಯ ಹೇಳುತ್ತಿದ್ದ ವ್ಯಕ್ತಿಗಳಿಗೆ ಬೆದರಿಕೆಯೊಡ್ಡಿದ್ದರು. ಇದರಿಂದ ಯಾರೂ ನನ್ನ ಪರ ಸಾಕ್ಷ್ಯ ಹೇಳುತ್ತಿಲ್ಲ.

ಹನುಮಂತರಾಯಪ್ಪ ಮತ್ತು ರವಿ ನನ್ನ ಮನೆ ಬಳಿ ಬಂದು ಪ್ರಕರಣ ವಾಪಸ್‌ ಪಡೆಯದಿದ್ದರೆ, ಅತ್ಯಾಚಾರ ಮಾಡಿ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಪದೇ ಪದೆ ಬೆದರಿಕೆಯ ಕರೆಗಳು ಬರುತ್ತಿವೆ. ಒಂದೊಮ್ಮೆ ನನ್ನ ಪ್ರಾಣಕ್ಕೆ ಕುತ್ತು ಬಂದರೆ ಹನುಮಂತರಾಯಪ್ಪ, ರವಿ ಮತ್ತು ಎಸಿಪಿ ರವಿಪ್ರಸಾದ್‌, ಇನ್ಸ್‌ಪೆಕ್ಟರ್‌ ವೆಂಕಟೇಗೌಡ ಅವರೇ ನೇರ ಹೊಣೆ,’ ಎಂದಿದ್ದಾರೆ.

Advertisement

ಬಟ್ಟೆ ತೆಗೆದು ತೋರಿಸು ಎಂದರು!: “ಆಯುಕ್ತರ ಸೂಚನೆ ಮೇರೆಗೆ ನ.18ರಂದು ವಿಚಾರಣೆಗೆ ಹಾಜರಾದಾಗ ಎಸಿಪಿ ರವಿಪ್ರಸಾದ್‌, ಏಕೆ ಹೊಡೆದರು, ಏನೆಲ್ಲ ಪದಗಳಿಂದ ನಿಂದಿಸಿದರು ಎಂದು ಪ್ರಶ್ನಿಸಿದರು. ಅದಕ್ಕೆಲ್ಲ ಸ್ಪಷ್ಟ ಉತ್ತರ ಕೊಟ್ಟೆ. ನಿನ್ನ ಗುಪ್ತಾಂಗ ಮಟ್ಟಿದರು ಎಂದು ಆರೋಪಿಸಿದ್ದಿಯಾ, ಹೇಗೆ ಮುಟ್ಟಿದರು, ಬೇರೆ ಎಲ್ಲಿಲ್ಲಿ ಕೈ ಹಾಕಿದರು ತೋರಿಸು ಎಂದು ಅಸಭ್ಯವಾಗಿ ಕೇಳಿದರು. ಹೇಗೆ ತೋರಿಸಲಿ ಎಂದು ನಾನು ಗಾಬರಿಯಿಂದ ಪ್ರಶ್ನಿಸಿದೆ.

ಅದಕ್ಕೆ ಅವರು ಬಟ್ಟೆಗಳನ್ನು ತೆಗೆದು ತೋರಿಸು ಎಂದು ಹೇಳಿದರು. ಇದಕ್ಕೆ ನಿರಾಕರಿಸಿದಾಗ ಅಲ್ಲಿಯೇ ಇದ್ದ ಇನ್ಸ್‌ಪೆಕ್ಟರ್‌ ವೆಂಕಟೇಶ್‌ಗೌಡ, ವಿಚಾರಣೆ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು ಹೇಳಿದಂತೆ ಕೇಳಬೇಕು ಎಂದು ಬೆದರಿಸಿದರು. ಜತೆಗೆ ಇಷ್ಟಕ್ಕೆಲ್ಲಾ ಹೆದರುವ ನೀನು ದೂರು ನೀಡಲು ಯಾಕೆ ಬಂದೆ ಎಂದು ಪ್ರಶ್ನಿಸಿದರು,’ ಎಂದು ಸೌಮ್ಯ ಆರೋಪಿಸಿದ್ದಾರೆ.

ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಈ ಹಿಂದೆ ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯ ದೇವಸ್ಥಾನದ ಗಲಾಟೆ ಬಗ್ಗೆ ದೂರು ದಾಖಲಾಗಿತ್ತು. ಈ ಸಂಬಂಧ ಎಸಿಪಿ ರವಿಪ್ರಸಾದ್‌ ತನಿಖೆ ನಡೆಸುತ್ತಿದ್ದಾರೆ. ಆದರೆ, ಇದೀಗ ಅದೇ ಎಸಿಪಿ ವಿರುದ್ಧ ಮಹಿಳೆ ದೂರು ನೀಡಿದ್ದಾರೆ. ಈ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಡಿಸಿಪಿ ಚೇತನ್‌ ಸಿಂಗ್‌ ರಾಥೋಡ್‌ ಅವರಿಗೆ ಸೂಚಿಸಿದ್ದೇನೆ.
-ಮಾಲಿನಿ ಕೃಷ್ಣಮೂರ್ತಿ, ಹೆಚ್ಚುವರಿ ಪೊಲೀಸ್‌ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next