ಇಲ್ಲಿಯವರಗೆ ಸಹ ಕಲಾವಿದನಾಗಿ ಪೋಷಕ ಪಾತ್ರಗಳಲ್ಲಿ, ಖಳನಟನ ಪಾತ್ರಗಳ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದ ನಟ ಅಚ್ಯುತ್ ಕುಮಾರ್, ಈಗ ಪೂರ್ಣ ಪ್ರಮಾಣದ ಹೀರೋ ಆಗಿ “ಪೋರ್ ವಾಲ್ಸ್’ ಸಿನಿಮಾದ ಮೂಲಕ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ಎಸ್. ಎಸ್ ಸಜ್ಜನ್ ನಿರ್ದೇಶನದಲ್ಲಿ ಮೂಡಿಬಂದಿರುವ “ಪೋರ್ ವಾಲ್ಸ್’ ಚಿತ್ರದಲ್ಲಿ ಅಚ್ಯುತ ಕುಮಾರ್ ಮೂರು ವಿಭಿನ್ನ ಶೇಡ್‌ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿನಿಮಾದಲ್ಲಿದೆ ಎನ್ನುವುದು ಚಿತ್ರತಂಡ ನೀಡುವ ಭರವಸೆ.
ಇನ್ನು “ಪೋರ್ ವಾಲ್ಸ್’ ಚಿತ್ರಕ್ಕೆ “ಟು ನೈಟಿಸ್’ ಎಂಬ ಅಡಿಬರಹವಿದೆ. ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ನಿರ್ದೇಶಕ ಎಸ್. ಎಸ್ ಸಜ್ಜನ್, “ಇಡೀ ಚಿತ್ರ ಭಾವನೆಗಳ ಸರಳಪಳಿಯಾಗಿದ್ದು, ನಾಲ್ಕು ಗೋಡೆಗಳು ಒಂದೊಂದರ ಪ್ರತಿನಿಧಿಯಾಗಿದೆ. ಒಂದು ಹುಟ್ಟಿನ ಗೊಡೆ, ಸಾವಿನ ಗೋಡೆ, ನಗುವಿನ ಗೋಡೆ ಹಾಗೂ ಅಳುವಿನ ಗೋಡೆಯಾಗಿದೆ. “ಪೋರ್ ವಾಲ್ಸ್’ ಒಂದು ಪಕ್ಕಾ ಫ್ಯಾಮಿಲಿ ಎಂಟ್‌ರ್‌ಟೈನ್ಮೆಂಟ್ ಚಿತ್ರವಾಗಿದ್ದು, ನೋಡುಗರಿಗೆ ಹತ್ತಿರವಾಗಲಿದೆ’ ಎಂದು ವಿವರಣೆ ಕೊಡುತ್ತಾರೆ.
ಕಮರ್ಷಿಯಲ್ ಸಿನಿಮಾ ಮಾಡುವುದು ಸಾಮಾನ್ಯ ಆದರೆ ಕಮರ್ಷಿಯಲ್ ಜೊತೆಗೆ ಒಂದು ಕಂಟೆಂಟ್ ಕೂಡಾ ಇರುವ ಸಿನಿಮಾ ಮಾಡಬೇಕು ಅನ್ನುವ ಯೋಚನೆಯೊಂದಿಗೆ ಚಿತ್ರಕ್ಕೆ ಟಿ.ವಿಶ್ವನಾಥ್ ನಾಯಕ್ ಬಂಡವಾಳ ಹೂಡಿದ್ದಾರೆ. ಅಚ್ಯುತ್ ಕುಮಾರ್ ಜೊತೆ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದ್ದು ಹಿರಿಯ ನಟ ದತ್ತಣ್ಣ, ಸುಜಯ್ ಶಾಸ್ತ್ರಿ, ಡಾ. ಪವಿತ್ರ, ಡಾ. ಜಾನ್ಹವಿ ಜ್ಯೋತಿ, ಭಾಸ್ಕರ್ ನೀನಾಸಂ, ಶ್ರೇಯಾ ಶೆಟ್ಟಿ, ಆ್ಯನ್‌ಷಲ್, ರಚನಾ ದಶರಥ್, “ಕಿರಿಕ್ ಪಾರ್ಟಿ’ ಖ್ಯಾತಿಯ ಶಂಕರ ಮೂರ್ತಿ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿ ಸಿದ್ದಾರೆ. ಚಿತ್ರಕ್ಕೆ ತೆಲುಗಿನ “ರುದ್ರಮ ದೇವಿ’ ಖ್ಯಾತಿಯ ಸಹ ಛಾಯಾಗ್ರಾಹಕರಾಗಿದ್ದ ವಡ್ಡೆ ದೇವೇಂದ್ರ ರೆಡ್ಡಿ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಆನಂದ ರಾಜ್ ವಿಕ್ರಂ ಸಂಗಿತ ಸಂಯೋಜಿಸಿದ್ದಾರೆ.