ಗ್ರೆಗೊರಿ ಪೆರೆಲ್ಮನ್ ರಷ್ಯದ ಗಣಿತ ಪ್ರತಿಭೆ.ಕ್ಲೇ ಗಣಿತ ಸಂಸ್ಥೆ ಜಗತ್ತಿನ ಮುಂದಿಟ್ಟಿದ್ದ ಏಳು ಸಮಸ್ಯೆಗಳ ಪೈಕಿ ಒಂದನ್ನು ಪೂರ್ತಿಯಾಗಿ ಪರಿಹರಿಸಿದವನು ಪೆರೆಲ್ಮನ್ (ಉಳಿದ ಆರು ಇನ್ನೂ ಬಿಡಿಸಲಾರದ ಬ್ರಹ್ಮಗಂಟಾಗಿಯೇ ನಿಂತಿವೆ!).
ಈ ಸಮಸ್ಯೆಗಳ ವಿಶೇಷವೇನೆಂದರೆ, ಪ್ರತಿ ಸಮಸ್ಯೆಯನ್ನು ಬಿಡಿಸಿದವರೂ ಹತ್ತು ಲಕ್ಷ ಡಾಲರುಗಳನ್ನು ಬಹುಮಾನವಾಗಿ ಪಡೆಯುತ್ತಾರೆ. ವಾಗ್ಧಾನದ ಪ್ರಕಾರ, ಕ್ಲೇ ಸಂಸ್ಥೆ ಪೆರೆಲ್ಮನ್‌ಗೆ ಬಹುಮಾನ ಕೊಡಲು ಮುಂದೆ ಬಂದಿತು. ಅಂತಾರಾಷ್ಟ್ರೀಯ ಗಣಿತ
ಸಮ್ಮೇಳನದಲ್ಲಿ ಅವನಿಗೆ ಗಣಿತದ ನೊಬೆಲ್ ಎಂದೇ ಖ್ಯಾತವಾದ ಫೀಲ್ಡ್ಸ್ ಪದಕವನ್ನುಕೊಡುವುದೆಂದೂ ತೀರ್ಮಾನಿಸಲಾಯಿತು. ಆದರೆ, ಇವೆಲ್ಲ ಪ್ರಸಿದ್ಧಿ-ಸಂಪತ್ತುಗಳಿಂದ ವಿಮುಖನಾದ ಪೆರೆಲ್ಮನ್, ನಾನು ಸಮಸ್ಯೆಗಳನ್ನು ಪರಿಹರಿಸುವುದು ಮನಃಸಂತೋಷಕ್ಕಾಗಿ. ದುಡ್ಡಿನ ಆಸೆ ನನಗಿಲ್ಲ ಎಂದು, ಯಾರನ್ನೂ ಒಳ ಬರಗೊಡದೆ, ಯಾರಿಗೂ ಸಂದರ್ಶನ ಮಾಡಲು ಅನುಮತಿ ಕೊಡದೆ, ಮನೆಯೊಳಗೆ ಉಳಿದುಕೊಂಡುಬಿಟ್ಟ! ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಮೂಲ ಹಣ. ಅದಿಲ್ಲದ ಪ್ರಪಂಚ ರೂಪುಗೊಳ್ಳಬೇಕು ಎನ್ನುವುದೇ ಪೆರೆಲ್ಮನ್ ನುಡಿ.ಕೈಯಲ್ಲಿಕೆಲಸವಿಲ್ಲದ ಸಮಯದಲ್ಲಿ ಒಮ್ಮೆ ಅವನಿಗೆ ಯಾವುದಾದರೂ ಉದ್ಯೋಗ ಹಿಡಿಯಬೇಕು ಅನ್ನಿಸಿತು. ಇನ್ನೊಂದು ಬೀದಿಯಲ್ಲಿರುವ ಬೇಕರಿಗೆ ಹೋಗಿ ಅದರ ಮಾಲೀಕನನ್ನು ಭೇಟಿಯಾಗಿ- ಏನಾದರೂ ಕೆಲಸಕೊಡಿ ಎಂದು ಕೇಳಿಕೊಂಡ.
ಸಂಬಳ ಎಷ್ಟುಕೊಡಬೇಕು? ಬೇಕರಿಯವನ ಪ್ರಶ್ನೆ. ಇಲ್ಲ, ಒಂದು ದುಗ್ಗಾಣಿಯೂ ಬೇಡ. ದುಡ್ಡಿಲ್ಲದ ಪ್ರಪಂಚದಲ್ಲಿ ಬದುಕಬೇಕೆಂದು ನನ್ನಅಪೇಕ್ಷೆ, ಪೆರೆಲ್ಮನ್ ಖಚಿತ ನುಡಿ. ಸರಿ ಹಾಗಾದರೆ! ಗಣಿತವೂ ಅಲ್ಪಸ್ವಲ್ಪ ಬರುತ್ತೆ ಅನ್ನುತ್ತೀಯ. ನಿನಗೆ ಕ್ಯಾಶಿಯರ್‌ಕೆಲಸಕೊಡುತ್ತೇನೆ ಎಂದು ಬೇಕರಿಯವನು ಅವನಿಗೆಕೆಲಸ ಕೊಟ್ಟ. ಆದರೆ ಸ್ವಲ್ಪ ಹೊತ್ತಲ್ಲೇ ಅವನಿಗೆ ತಾನೆಂಥ ಪ್ರಮಾದವೆಸಗಿದ್ದೇನೆಂದು ಗೊತ್ತಾಯಿತು. ಪೆರೆಲ್ಮನ್ ಗ್ರಾಹಕರಿಗೆ ಬೇಕಾದ ತಿಂಡಿ ತಿನಿಸುಗಳನ್ನು ಕೊಟ್ಟರೂ, ದುಡ್ಡು ಮಾತ್ರ ಪಡೆಯುತ್ತಿರಲಿಲ್ಲ. ತುಂಬ ಅನುನಯದಿಂದ ನಗುತ್ತ ದುಡ್ಡುಕೊಡಬೇಡಿ ಎಂದು ಹೇಳುತ್ತಿದ್ದ. ಬೇಕರಿ ಮಾಲೀಕ ಬಂದು ನೋಡಿದಾಗ,ಕ್ಯಾಶ್‌ಕೌಂಟರಿನ ಎದುರಲ್ಲಿ, ಆರ್ಡರ್ ಮಾಡಲು ಒಂದು ಉದ್ದನೆ ಸಾಲು ಆಗಲೇ ಸಿದ್ಧವಾಗಿ ನಿಂತಿತ್ತು!
-ರೋಹಿತ್ ಚಕ್ರತೀರ್ಥ