Advertisement

ಮಾಹಿತಿ ಪಸರಿಸಲು ಪ್ರದರ್ಶನ ಸಹಕಾರಿ

11:00 AM Jan 02, 2020 | Suhan S |

ಹುಬ್ಬಳ್ಳಿ: ಸರಕಾರದ ನೂರು ದಿನದ ಸಾಧನೆ ಮತ್ತು ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ಕೈಗೊಂಡ ಕ್ರಮಗಳನ್ನು ಪ್ರದರ್ಶಿಸುವ ಮೂಲಕ ಜನರಿಗೆ ಮಾಹಿತಿ ತಲುಪಿಸುತ್ತಿರುವ ಕಾರ್ಯ ಉತ್ತಮ ಪ್ರಯತ್ನವಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್‌. ಪಾಟೀಲ ಹೇಳಿದರು.

Advertisement

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಇಲ್ಲಿನ ಗೋಕುಲ ರಸ್ತೆಯ ಹೊಸ ಬಸ್‌ ನಿಲ್ದಾಣದಲ್ಲಿ ಆಯೋಜಿಸಿರುವ ರಾಜ್ಯ ಸರಕಾರದ ಕಳೆದ ನೂರು ದಿನಗಳ ಸಾಧನೆ ಮತ್ತು ಸರಕಾರದ ಜನಪರ ಯೋಜನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಸಂಭವಿಸಿದ 22 ಜಿಲ್ಲೆಗಳ 103 ತಾಲೂಕುಗಳ ಪ್ರವಾಹ ಪೀಡಿತ ಪ್ರದೇಶಕ್ಕೆ ಕೇಂದ್ರ ಸರಕಾರ 1,200 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿದೆ ಹಾಗೂ ರಾಜ್ಯ ಸರಕಾರದಿಂದ 6,450 ಕೋಟಿ ರೂ.ಗಳನ್ನು ಪರಿಹಾರ ಕಾರ್ಯಗಳಿಗೆ ಮಂಜೂರು ಮಾಡುವ ಮೂಲಕ ಪ್ರವಾಹ ಸಂತ್ರಸ್ತರ ನೋವಿಗೆ ಸರಕಾರ ಮಿಡಿದಿದೆ. ನೆರೆ ಮತ್ತು ಪ್ರವಾಹದಿಂದ ಸಂಪರ್ಕ ಕಳೆದುಕೊಂಡಿದ್ದ 178 ರಸ್ತೆ ಹಾಗೂ ಸೇತುವೆಗಳ ಪೈಕಿ 142 ರಸ್ತೆ ಸಂಚಾರ ಪುನರ್‌ ನಿರ್ಮಾಣ ಕೈಗೊಂಡಿದೆ. ಬೆಳೆ ನಷ್ಟ ಅನುಭವಿಸಿದ್ದ 1,38,725 ಫಲಾನುಭವಿಗಳಿಗೆ 282.53 ಕೋಟಿ ರೂ. ನೇರವಾಗಿ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ಹೊಸ ಆವಿಷ್ಕಾರಗಳಿಗೆ ಉತ್ತೇಜನ ನೀಡಲು ಕರ್ನಾಟಕ ಆವಿಷ್ಕಾರ ಪ್ರಾಧಿಕಾರ ರಚಿಸಿದೆ ಹಾಗೂ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ ಯೋಜನೆಯಡಿ ಕೇಂದ್ರ ಸರಕಾರದ ಜೊತೆಗೆ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಿದೆ. ಸಂಕಷ್ಟಕ್ಕೊಳಗಾದ ನೇಕಾರರ ಆರ್ಥಿಕ ಸಬಲೀಕರಣಕ್ಕಾಗಿ ಸಾಲಮನ್ನಾ ಮಾಡಿದೆ. ಹಾಗೆಯೇ ಮೀನುಗಾರರ ಸಾಲಮನ್ನಾ ಮಾಡಿ ವಿಶೇಷವಾಗಿ ಮಹಿಳಾ ಮೀನುಗಾರರಿಗೆ ಅನುಕೂಲ ಆಗುವಂತೆ ಸರಕಾರ ಕೈಜೋಡಿಸಿದೆ ಎಂದರು.

ಹೂಡಿಕೆದಾರರನ್ನು ಆಕರ್ಷಿಸಲು ಪೂರಕ ವಾತಾರಣ ಸೃಷ್ಟಿಸಿ ಕೈಗಾರಿಕೆಗೆ ಉತ್ತೇಜನ ಹಾಗೂ ಸುಸ್ಥಿರ ಮತ್ತು ರಚನಾತ್ಮಕ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರೋತ್ಸಾಹ, ಹೈದರಾಬಾದ್‌ ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕ ಪ್ರದೇಶವೆಂದು ಮರು ನಾಮಕರಣ ಮಾಡಿ, ಈ ಭಾಗದ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಗಳು, ಎಸ್‌ಸಿಪಿ, ಟಿಎಸ್‌ಪಿ ಅಡಿ 30,445 ಕೋಟಿ ರೂ. ಅನುದಾನ ಬಿಡುಗಡೆ, ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ 23 ಲಕ್ಷ ಜನರಿಗೆ ಆರೋಗ್ಯ ಕಾರ್ಡ್‌ ವಿತರಣೆ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಅಭಿವೃದ್ಧಿಗೆ ನೀಡಿರುವ ಆದ್ಯತೆ ಸೇರಿದಂತೆ ಈ ವಸ್ತು ಪ್ರದರ್ಶನದಲ್ಲಿ ಸರಕಾರದ ಹಲವು ಯೋಜನೆ ಮತ್ತು ಸಾಧನೆಗಳ ಬಗ್ಗೆ ಫಲಕಗಳನ್ನು ಅಳವಡಿಸಲಾಗಿದೆ ಎಂದರು.

Advertisement

ವಾಕರಸಾ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷ ಕುಮಾರ, ಮುಖ್ಯ ಭದ್ರತಾ ಜಾಗೃತಿ ಅಧಿಕಾರಿ ರಾಜೇಶ ಹುದ್ದಾರ, ನಿತಿನ್‌ ಹೆಗಡೆ, ಪಿ.ವೈ. ನಾಯಕ, ಜಯಕರ ಶೆಟ್ಟಿ, ನಾರಾಯಣಪ್ಪ, ಎಸ್‌.ಎಂ. ದೊಡ್ಡಲಿಂಗಣ್ಣವರ, ವಿಭಾಗೀಯ ನಿಯತ್ರಣಾಧಿಕಾರಿ ರಾಮನಗೌಡ್ರ, ಡಿ.ಬಿ. ಕೆಳಗೇರಿ, ನಿಯಂತ್ರಣಾಧಿಕಾರಿ ಅಶೋಕ ಪಾಟೀಲ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ ಪ್ರಕಾಶ ನಾಶಿ, ವಾರ್ತಾ ಇಲಾಖೆಯ ವಿನೋದಕುಮಾರ ಭಗವತಿ, ಸಿ.ಬಿ. ಭೋವಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next