Advertisement

ಕಿರಿಯ ವಯಸ್ಸಿಗೆ ಹಿರಿಯ ಸಾಧನೆ

11:14 AM Dec 26, 2019 | Suhan S |

ಬೆಳಗಾವಿ: ಕರ್ನಾಟಕ ಲೋಕ ಸೇವಾ ಆಯೋಗ ಪರೀಕ್ಷೆ ಬರೆದ ನೇಕಾರನ ಮಗಳು ಇಲ್ಲಿಯ ಖಾಸಬಾಗ ನಿವಾಸಿ ಕಲ್ಯಾಣಿ ಕಾಂಬಳೆ ಮೊದಲ ಪ್ರಯತ್ನದಲ್ಲಿಯೇ ತೇರ್ಗಡೆಯಾಗಿ ಉಪವಿಭಾಗಾಧಿಕಾರಿ ಹುದ್ದೆಗಿಟ್ಟಿಸಿದ್ದಾಳೆ.

Advertisement

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ 428 ಜನರ ಪೈಕಿ ಕಲ್ಯಾಣಿ ಕಾಂಬಳೆ ಅತಿ ಚಿಕ್ಕ ವಯಸ್ಸಿನ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದು, 23ನೇ ವಯಸ್ಸಿನಲ್ಲಿಯೇ ಉಪವಿಭಾಗಾಧಿಕಾರಿ ಹುದ್ದೆ ಅಲಂಕರಿಸಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಈಕೆಯ ಪಾಲಿಗೆ ದಕ್ಕಿದೆ. ನೇಕಾರ ತಂದೆ ವೆಂಕಟೇಶ ಕಾಂಬಳೆ ಹಾಗೂ ತಾಯಿ ಸುವರ್ಣಾ ದಂಪತಿಯ ಹಿರಿಯ ಮಗಳು ಕಲ್ಯಾಣಿ ಡಿವೈನ್‌ ಪ್ರಾವಿಡೆನ್ಸ್‌ ಕಾನ್ವೆಂಟ್‌ ಹೈಸ್ಕೂಲ್‌ ನಲ್ಲಿ ಶಾಲಾ ಅಭ್ಯಾಸ ಮಾಡಿದ್ದು, 2012-14ರಲ್ಲಿ ವಿಜ್ಞಾನ ವಿಭಾಗವನ್ನು ಬೆಂಗಳೂರಿನ ನಾರಾಯಣ ಪಿಯು ಕಾಲೇಜಿನಲ್ಲಿ ಓದಿದ್ದಾರೆ. ಹೈದ್ರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದ ಶ್ರೀಚೈತನ್ಯ ಡಿಗ್ರಿ ಕಾಲೇಜಿನಲ್ಲಿ 2014-17ರ ವರೆಗೆ ಪದವಿ ಮುಗಿಸಿದ್ದಾರೆ. ಪದವಿ ಓದುತ್ತಿದ್ದಾಗಲೇ ಸಿವಿಲ್‌ ಪರೀಕ್ಷೆಯ ತಯಾರಿ ನಡೆಸಿದ್ದರು.

ಸಹೋದರಿ ಅನುರಾಧಾ ಸಿವಿಲ್‌ ಇಂಜಿನಿಯರ್‌, ಸಹೋದರ ಓಂಕಾರ ಎಂಬಿಎ ಓದುತ್ತಿದ್ದು, ಇನ್ನೊಬ್ಬ ಸಹೋದರಿ ಮೃದುಲಾ 9ನೇ ತರಗತಿ ಓದುತ್ತಿದ್ದಾರೆ. ಪೋಷಕರ ಬೆಂಬಲದಿಂದಾಗಿ ಇಷ್ಟೆಲ್ಲ ಸಾಧನೆ ಸಾಧ್ಯವಾಗಿದೆ. ಇದು ನನ್ನ ಮೊದಲ ಹಂತದ ಸಾಧನೆ. ಯುಪಿಎಸ್‌ಸಿ ಪರೀಕ್ಷೆ ಬರೆದು ಸಮಾಜ ಸೇವೆ ಮಾಡಬೇಕೆಂಬ ಗುರಿ ಇಟ್ಟುಕೊಂಡಿರುವುದಾಗಿ ಕಲ್ಯಾಣಿ ಹೇಳುತ್ತಾರೆ.

ಶ್ರಮಕ್ಕೆ ತಕ್ಕ ಫಲ: ಸಮಾಜ ಸೇವೆ ಮಾಡಬೇಕೆಂಬ ಹಂಬಲದೊಂದಿಗೆ ನಾಗರಿಕ ಸೇವಾ ಪರೀಕ್ಷೆಯ ಸಿದ್ಧತೆ ನಡೆಸಿದ್ದ ಕಲ್ಯಾಣಿ ಅವರು ಡಿಗ್ರಿ ಮುಗಿಯುತ್ತಿದ್ದಂತೆ ಕೆಪಿಎಸ್‌ಸಿ ಪರೀಕ್ಷೆಗೆ ಹಾಜರಾದರು. 2017ರಲ್ಲಿ ಪರೀಕ್ಷೆ ಬರೆದು 2019ರಲ್ಲಿ ಮೌಖೀಕ ಪರೀಕ್ಷೆಯಲ್ಲಿಯೂ ತೇರ್ಗಡೆಯಾದರು. ಮೊದಲಿನಿಂದಲೂ ಸಿವಿಲ್‌ ಪರೀಕ್ಷೆಯ ಕನಸು ಕಾಣುತ್ತಿದ್ದ ಕಲ್ಯಾಣಿ ಪಟ್ಟ ಶ್ರಮಕ್ಕೆ ಈಗ ಫಲ ಸಿಕ್ಕಿದೆ. ಬೆಂಗಳೂರಿನಲ್ಲಿರುವ ಡಾ| ರಾಜಕುಮಾರ ಅಕಾಡೆಮಿಯಲ್ಲಿ ತರಬೇತಿ ಪಡೆದ ಬಳಿಕ ರಾಜ್ಯ ಸರ್ಕಾರದ ಸ್ಕಾಲರ್‌ಶಿಪ್‌ ಗೂ ಅರ್ಹರಾದರು. ದೆಹಲಿಯಲ್ಲಿ ಸುಮಾರು 6-7 ತಿಂಗಳುಗಳ ಕಾಲ ತರಬೇತಿ ಪಡೆದು ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಮತ್ತೆ ಕರ್ನಾಟಕಕ್ಕೆ ವಾಪಸ್ಸಾಗಿ ತಯಾರಿ ನಡೆಸಿದರು.

ಐಎಎಸ್‌ ಗುರಿ: ನಿತ್ಯ 10ರಿಂದ 12 ಗಂಟೆಗಳ ಕಾಲ ಸತತ ಅಧ್ಯಯನದ ಮೂಲಕ ಈ ಸಾಧನೆ ಸಾಧ್ಯವಾಗಿದೆ. ಮೊದಲಿನಿಂದಲೂ ನಾಗರಿಕ ಸೇವಾ ಪರೀಕ್ಷೆಯ ಬಗ್ಗೆ ಆಸಕ್ತಿ ಹಾಗೂ ಹಂಬಲ ಇತ್ತು. ಈಗ ಅದು ಒದಗಿ ಬಂದಿದೆ. ಏನಾದರೂ ಸಾಧನೆ ಮಾಡಬೇಕೆಂಬ ಕನಸು ಈಡೇರಿದಂತಾಗಿದೆ. ಐಎಎಸ್‌ ಪಾಸಾಗುವ ಗುರಿ ಇದೆ ಎಂದು ತಮ್ಮ ಕನಸನ್ನು ಉದಯವಾಣಿಯೊಂದಿಗೆ ಹಂಚಿಕೊಂಡರು.

Advertisement

ಉಪವಿಭಾಗಾಧಿಕಾರಿಗಳು: ಬೆಳಗಾವಿ ನಗರದ ಖಾಸಬಾಗನ ಕಲ್ಯಾಣಿ ಕಾಂಬಳೆ, ಸದಾಶಿವ ನಗರದ ನಿವಾಸಿ ಶ್ರವಣ ನಾಯಿಕ, ಅಥಣಿ ತಾಲೂಕಿನ ಮೋಳೆ ಗ್ರಾಮದ ಜಗದೀಶ ಅಡಹಳ್ಳಿ, ಚಿಕ್ಕೋಡಿಯ ಶ್ವೇತಾ ಮೋಹನ ಬೀಡಿಕರ, ಡಿವೈಎಸ್ಪಿಯಾಗಿ ಬೆಳಗಾವಿ ರಾಣಿ ಚನ್ನಮ್ಮ ನಗರದ ನಿವಾಸಿ ಗಜಾನನ ವಾಮನ ಸುತಾರ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಯಾಗಿ ಹನುಮಾನ ನಗರದ ಗೋಪಾಲ ರಾಠೊಡ ಆಯ್ಕೆ ಆಗಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರು: ಶಕೀರ ಅಹ್ಮದ ತೊಂಡಿಖಾನ್‌, ಅಥಣಿ ತಾಲೂಕಿನ ಕವಟಗೊಪ್ಪ ದ ಪ್ರವೀಣ ಲಕ್ಕಪ್ಪ ಪಾಟೀಲ, ಬೆಳಗಾವಿ ತಾಲೂಕಿನ ಮಾರಿಹಾಳದ ಸಂತೋಷ ಕಿರೇಗಾರ, ರಾಯಬಾಗ ತಾಲೂಕಿನ ಹಿಡಕಲ್‌ದ ಮೋಹನಚಂದ ಹನುಮಂತ ಕಟಗಿ, ರಾಮದುರ್ಗ ತಾಲೂಕಿನ ತೋರಣಗಟ್ಟಿಯ ಯಲ್ಲಪ್ಪ ತಿಪ್ಪಣ್ಣವರ, ಗ್ರೇಡ್‌-2 ತಹಶೀಲ್ದಾರರಾಗಿ ಖಾನಾಪುರ ತಾಲೂಕಿನ ಹಿರೇಹಟ್ಟಿಹೊಳಿಯ ಸದಾಶಿವ ಮಕ್ಕೋಜಿ, ಬೆಳಗಾವಿ ತಾಲೂಕಿನ ಬಸವನಕುಡಚಿಯ ಅನಿಲ ಬಡಿಗೇರ, ಬೈಲಹೊಂಗಲ ತಾಲೂಕಿನ ಮಹೇಶ ಪತ್ರಿ, ರಾಯಬಾಗ ತಾಲೂಕಿನ ಯಬರಟ್ಟಿಯ‌ ಶಿವಕುಮಾರ ಬಿರಾದಾರ, ಅಥಣಿ ತಾಲೂಕಿನ ಸಿದ್ಧೇವಾಡಿಯ ಸುರೇಶ ಮುಂಜೆ, ಗೋಕಾಕ ತಾಲೂಕಿನ ಅರಭಾವಿಯ ಪರಶುರಾಮ ಸತ್ತಿಗೇರಿ, ರಾಯಬಾಗ ತಾಲೂಕಿನ ವಿಠಲ ಚೌಗಲಾ, ಅಥಣಿ ತಾಲೂಕಿನ ತೇವರಟ್ಟಿ ಗ್ರಾಮದ ಕಲಗೌಡ ಪಾಟೀಲ ಆಯ್ಕೆ ಆಗಿದ್ದಾರೆ.

ವಾಣಿಜ್ಯ ತೆರಿಗೆ ಅಧಿಕಾರಿಗಳು: ಅಥಣಿ ತಾಲೂಕಿನ ಕಲ್ಲೋಳಿಯ ವಿನಯ ಪ್ರಭುದೇವ ಮಠಪತಿ, ಬೆಳಗಾವಿ ತಾಲೂಕಿನ ಮಾಸ್ತಮರಡಿಯ ಆನಂದ ಅಂಬೋಜಿ, ಗೋಕಾಕ ತಾಲೂಕಿನ ನಾಗನೂರ ಗ್ರಾಮದ ಭರತ ಸಾಗರೆ, ಅಥಣಿ ತಾಲೂಕಿನ ಕತ್ರಾಳ ಗ್ರಾಮದ ರಾಜು ಅಣ್ಣಪ್ಪ ಮುದವಿ, ಬೆಳಗಾವಿ ಹಿಂದವಾಡಿಯ ಸ್ಫೂರ್ತಿ ದೊಡಮನಿ, ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಭೀಮಸೇನ ಘಾಟಗೆ, ಬೆಳಗಾವಿ ತಾಲೂಕಿನ ಮಹ್ಮದಗೌಸ್‌ ನಬೀಸಾಬ ಮುಲ್ಲಾ ಆಯ್ಕೆ ಆಗಿದ್ದಾರೆ.

ಮುಖ್ಯಾಧಿಕಾರಿಗಳು: ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಅಮಿತ ತಾರದಾಳೆ, ಬೆಳಗಾವಿ(ವಡಗಾಂವಿ) ಭಾಗ್ಯಶ್ರೀ ಹುಗ್ಗಿ, ಚಿಕ್ಕೋಡಿ ತಾಲೂಕಿನ ಬೋರಗಾಂವಾಡಿ ಗ್ರಾಮದ ವಿಶ್ವೇಶ್ವರ ಬಡಾರಗಾಡೆ, ಗೋಕಾಕ ವಿವೇಕಾನಂದ ನಗರ ನಿವಾಸಿ ವೆಂಕಟೇಶ ಮಾರುತಿ ನಾಗನೂರ, ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ರವೀಂದ್ರ ಪರಸಗೌಡ ಪಾಟೀಲ, ಅಥಣಿ ತಾಲೂಕಿನ ಸಿದ್ದೇವಾಡಿ ಗ್ರಾಮದ ಅಜೀತ ಶಿರಹಟ್ಟಿ ಉತ್ತೀರ್ಣರಾಗಿದ್ದಾರೆ.

 

-ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next