ಸವಣೂರು: ಮಹಿಳಾ ಶಕ್ತಿ ದೇಶದ ಶಕ್ತಿ. ಒಬ್ಬ ಹೆಣ್ಣು ಮಗಳ ವಿದ್ಯಾರ್ಜನೆ ನೂರು ಮಕ್ಕಳ ಶಿಕ್ಷಣಕ್ಕೆ ಸಮಾನ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗದೊಂದಿಗೆ ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪಟ್ಟಣದ ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸವಣೂರ, ಶಿಗ್ಗಾವಿ, ಬಂಕಾಪೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಜ್ಞಾನದೀಪ್ತಿ ಯೋಜನೆಯಲ್ಲಿ ಸರ್ಕಾರ ನೀಡಿದ ಲ್ಯಾಪ್‌ಟಾಪ್ ನ್ನು ಸಾಂಕೇತಿಕವಾಗಿ ವಿತರಿಸಿ ಅವರು ಮಾತನಾಡಿದರು.
ಶಿಕ್ಷಣ ಇಂದಿನ ದಿನಮಾನದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಈ ಹಿಂದೆ ಅಕ್ಷರ ಜ್ಞಾನ ಇತ್ತು. ನಂತರ, ತಂತ್ರಜ್ಞಾನ ಈಗ ತಂತ್ರಾಂಶ ಜ್ಞಾನ ಬಂದಿದೆ. ಆದ್ದರಿಂದ, ಅದನ್ನು ಅರಿತುಕೊಂಡು ವಿದ್ಯಾರ್ಥಿಗಳು ಸರ್ಕಾರ ನೀಡಿದ ಲ್ಯಾಪ್‌ಟಾಪ್‌ನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು. ಇಂದಿನ ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯೆಯಲ್ಲಿ ಮುಂದೆ ಬರಬೇಕಾದರೆ ಕೇವಲ ಪಠ್ಯವಲ್ಲದೆ, ವೈಯಕ್ತಿಕವಾಗಿ ಅಭಿವೃದ್ಧಿಯನ್ನು ಹೊಂದಬೇಕು. ವಿದ್ಯೆಯನ್ನು ವ್ಯಕ್ತಪಡಿಸಲು ವಿದ್ಯಾರ್ಥಿಗಳು ಧೈರ್ಯ, ಸ್ಥೈರ್ಯವನ್ನು ಇಟ್ಟುಕೊಂಡು ಮುನ್ನಡೆಯಬೇಕು. ವಿದ್ಯಾರ್ಥಿಗಳು ತರ್ಕಬದ್ಧವಾದ ಚಿಂತನೆಯನ್ನು ಹೊಂದಿರಬೇಕು. ಅಂದಾಗ ಜಗತ್ತಿನಲ್ಲಿ ಎಂತಹ ಸಮಸ್ಯೆಗಳು ಬಂದರೂ ಎದುರಿಸುವ ಶಕ್ತಿ ಪ್ರತಿಯೊಬ್ಬರಲ್ಲಿ ಬರುತ್ತದೆ. ವಿದ್ಯಾರ್ಜನೆ ನಿರಂತರವಾಗಿ ನಡೆದಾಗ ಬದುಕು ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ ಎಂದರು.
ಸಾಧಕನಿಗೆ ಸಾವು ಅಂತ್ಯವಲ್ಲ, ಸಾಧನೆ ಗುರಿಯಾಗಬೇಕು, ಯಶಸ್ಸು ಮೆಟ್ಟಿಲಾಗಬೇಕು, ಆದ್ದರಿಂದ ವಿದ್ಯಾರ್ಥಿಗಳು ಶ್ರದ್ಧೆಯಿಂದ ವಿದ್ಯಾರ್ಜನೆ ಮಾಡಿ ಉನ್ನತ ಮಟ್ಟಕ್ಕೆರಬೇಕು. ಕಾಲೇಜಿನ ಅಭಿವೃದ್ಧಿಗಾಗಿ ಸರ್ಕಾರದಿಂದ ಪ್ರತಿ ವರ್ಷ 2 ರಿಂದ 3 ಕೋಟಿ ರೂ. ಅನುದಾನ ನೀಡಿ ಅಭಿವೃದ್ಧಿಯನ್ನು ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಚಾರ್ಯ ಮೋತಿಲಾಲ ರಾಠೊಡ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮೀತಿ ಅಧ್ಯಕ್ಷ ರಮೇಶ ದುಗ್ಗತ್ತಿ, ಧಾರವಾಡ ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ವೈ. ಪಾಟೀಲ, ಬಿಜೆಪಿ ತಾಲೂಕಾಧ್ಯಕ್ಷ ಗಂಗಾಧರ ಬಾಣದ, ಶಿವಾನಂದ ಮ್ಯಾಗೇರಿ, ಯಮುನಾ ಕೋಣೆಸರ್, ಎಂ.ಬಿ.ನಾಗಲಾಪೂರ, ಕಾಲೇಜಿನ ಬೋಧಕರಾದ ಕೆ.ಎನ್.ರಾಶಿನಕರ, ಎ.ಸಿ.ಪಿಳ್ಳೆ, ಮಿರ್ಜಿ ಸೇರಿದಂತೆ ಬಂಕಾಪೂರ, ಶಿಗ್ಗಾವಿ ಪಟ್ಟಣಗಳ ಸರ್ಕಾರಿ ಪದವಿ ಕಾಲೇಜುಗಳ ಬೋಧಕರು, ವಿದ್ಯಾರ್ಥಿಗಳು ಇದ್ದರು.