ಮೈಸೂರು: ನಗರದ ಕೆಎಂಪಿಕೆ ಟ್ರಸ್ಟ್ ವತಿಯಿಂದ ವಿಶ್ವ ಸಂಗೀತ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಂಗೀತದಿಂದ ಆರೋಗ್ಯ ವಿಚಾರ ಮಂಥನ ಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅನೇಕರನ್ನು ಸನ್ಮಾನಿಸಲಾಯಿತು.
ಅಗ್ರಹಾರದ ರಾಮಾನುಜ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬ ಮಂದಿರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಆಕಾಶವಾಣಿ ಸಂಗೀತ ಸಂಯೋಜಕಿ ಪುಷ್ಪಲತಾ, ಗಮಕ ವಿದೂಷಿ ಜ್ಯೋತಿ, ಡಾ.ರಾಜಕುಮಾರ್ ಸಂಗೀತ ಸಂಜೆ ತಂಡದ ಡ್ರಮರ್ ರಾಘವೇಂದ್ರ ಪ್ರಸಾದ್, ಸುಗಮ ಸಂಗೀತ ಕಲಾವಿದ ಮಹಾಲಿಂಗು, ಎದೆ ತುಂಬಿ ಹಾಡುವೆನು ಖ್ಯಾತಿಯ ಕುಮಾರಿ ಹಂಸಿಣಿ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಸಮಾಜ ಸೇವಕ ಕೆ.ರಘುರಾಂ ಮಾತನಾಡಿ, ಸಾಂಸ್ಕೃತಿಕ ರಾಜಧಾನಿಯಾಗಿರುವ ಮೈಸೂರು ಕಲಾವಿದರ ತವರೂರು ಎಂಬುದಕ್ಕೆ ಸಂಗೀತದ ಶಕ್ತಿಯೇ ಕಾರಣವಾಗಿದೆ. ಸಂಗೀತದಿಂದ ಆರೋಗ್ಯ ವೃದ್ಧಿಯಾಗಲಿದ್ದು, ವೇದಮಂತ್ರ, ಜನಪದ ಸಂಗೀತ ಮುಂತಾದವು ಆರೋಗ್ಯ ವೃದ್ಧಿಗೆ ಸಹಕಾರಿಯಾಗಿವೆ. ಹಿಂದೂಸ್ತಾನಿ ಕರ್ನಾಟಕ ಸಂಗೀತಕ್ಕೆ ವಿದೇಶಗಳಲ್ಲಿ ಗೌರವವಿದ್ದು,
ಮಕ್ಕಳಿಗೆ ಬಾಲ್ಯದಿಂದಲೇ ಕಡ್ಡಾಯವಾಗಿ ಸಂಗೀತ ಶಾಲೆಗೆ ಸೇರಿಸಿ, ಅಭ್ಯಾಸ ಮಾಡಿಸಿದರೆ ಮುಂದಿನ ಭವಿಷ್ಯ ಉಜ್ವಲವಾಗಲಿದೆ. ಈ ಹಿಂದೆ ಆಕಾಶವಾಣಿ, ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಸಂಗೀತ ಕಾರ್ಯಕ್ರಮಗಳನ್ನು ಜನರು ಅವಲಂಬಿಸಿದ್ದರು. ಹೀಗಾಗಿ ಅವರ ಆರೋಗ್ಯ, ಮನಃಶಾಂತಿ ಹೆಚ್ಚಾಗಿತ್ತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಎಚ್.ಎನ್. ಶ್ರೀಧರಮೂರ್ತಿ, ರಾಜ್ಯ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಪಿ.ಮಂಜುನಾಥ್, ಪಾಲಿಕೆ ಸದಸ್ಯ ಮಾ.ವಿ.ರಾಂಪ್ರಸಾದ್, ಮಹರ್ಷಿ ಶಾಲೆ ಕಾರ್ಯದರ್ಶಿ ಭವಾನಿ ಶಂಕರ್, ಕಲಾವಿದ ಮೈಕ್ ಚಂದ್ರು, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಹಾಜರಿದ್ದರು.