ಸಾವಯವ, ದೇಸೀ ಆಹಾರ ಇಂದು ಮಹಾನಗರದ ಆಕರ್ಷಣೆ. ಜಂಕ್‌ಫುಡ್‌ನಿಂದ ಆರೋಗ್ಯಕ್ಕೆ ಆಪತ್ತಿದೆ ಎಂಬುದನ್ನು ಅರಿತುಕೊಂಡವರೆಲ್ಲ, ಆರೋಗ್ಯಸ್ನೇಹಿ ಆಹಾರ ತಾಣಗಳನ್ನು ಹುಡುಕಿಕೊಂಡು ಹೋಗ್ತಾರೆ. ಅದರಲ್ಲೂ ರುಚಿಗೂ ಸೈ, ಶುಚಿಗೂ ಸೈ ಎನ್ನುವಂಥ ಹೋಟೆಲ್‌ಗಳಿದ್ದುಬಿಟ್ಟರೆ, ಆಹಾರಪ್ರಿಯರೆಲ್ಲ ಜಮಾಯಿಸುವುದು ಅಲ್ಲಿಯೇ!
ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ “ಸೌತ್ ರುಚೀಸ್’ನಲ್ಲಿ ಅಂಥದ್ದೇ ರಶ್ ಇರುತ್ತೆ. ಹಾಗೆಬಂದವರೆಲ್ಲ ತಾವು ತಿನ್ನುವ ಆಹಾರ ರುಚಿಕಟ್ಟಾಗಿರಬೇಕು, ದೇಸಿ ಶೈಲಿಯಲ್ಲಿಯೇ ಅದನ್ನು ಸಿದ್ಧಪಡಿಸಿರಬೇಕು ಎಂದು ಬಯಸುವವರು. ಗ್ರಾಹಕರ ಆ ನಿರೀಕ್ಷೆಗೆ ತಕ್ಕಂತೆ ಅಲ್ಲಿ ಖಾದ್ಯ ಸಿದ್ಧವಾಗುತ್ತೆ.
ಇಲ್ಲಿನ ಅಡುಗೆ ಮನೆಗೆ ಹೋದರೆ, ಅಲ್ಲಿ ಕಣ್ಣಿಗೆ ಬೀಳ್ಳೋದು ರಾಸಾಯನಿಕ ಮುಕ್ತ ತರಕಾರಿಗಳು; ಶುದ್ಧ ಸಾಂಬಾರ ಪದಾರ್ಥಗಳು, ದೇಸಿ ಹಾಲು- ತುಪ್ಪ, ಬೇಳೆಕಾಳು. ಮೂಲತಃ ಕುಂದಾಪುರದ ಕೋಟೇಶ್ವರ ಸಮೀಪದ ಗೋಪಾಡಿಯಾದ ಜಿ.ಪಿ. ರಾಘವೇಂದ್ರ ಈ ಹೋಟೆಲ್‌ನ ರೂವಾರಿ. ಈಗ ಇದನ್ನು ಅವರ ಮಗ ಪ್ರದೀಪ್ ಜಿ.ಎ. ಮುನ್ನಡೆಸುತ್ತಿದ್ದಾರೆ. ಕಾರ್ಯನಿರ್ವಾಹಕರಾಗಿ ರಘುನಾಥ್ ಶ್ರೀವತ್ಸ ಇಲ್ಲಿ ನಗುತ್ತಾ ನಿಮ್ಮನ್ನು ಸ್ವಾಗತಿಸುತ್ತಾರೆ.
ಸಾವಯವ ವಿಧಾನದ ಮೂಲಕ ಬೆಳೆದ ತರಕಾರಿ, ಸಾಂಬಾರ ಪದಾರ್ಥಗಳು, ಹಾಲು, ಸಿರಿಧಾನ್ಯಗಳು ಚಿಕ್ಕಮಗಳೂರು, ನೆಲಮಂಗಲ, ಸಕಲೇಶಪುರದಿಂದ ತರಿಸಿಕೊಳ್ಳುತ್ತಾರೆ. ಇದಕ್ಕೆ ಹೆಚ್ಚಿನ ವೆಚ್ಚವಾದರೂ, ಗ್ರಾಹಕರ ಮೇಲಿನ ಆರೋಗ್ಯ ಕಾಳಜಿಗೆ ಸೌತ್ ರುಚೀಸ್ ಅದ್ಯತೆ ಕೊಡುತ್ತೆ. ಈ ಹೋಟೆಲ್‌ನಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕ್ ಅನ್ನು ಬಳಸುವುದಿಲ್ಲ. ಸೇರಾಮಿಕ್ ಪ್ಲೇಟ್‌ಗಳಲ್ಲಿ ಆಹಾರ ನೀಡುತ್ತಾರೆ. ಮಂದವಾದ ಬೆಳಕಿನಲ್ಲಿ, ತಾಜಾ ವಾತಾವರಣದಲ್ಲಿ ಕುಳಿತ ಅನುಭವ ಗ್ರಾಹಕನಿಗೆ ಆಗುತ್ತೆ.
ಸ್ಪೆಷಲ್ ಏನಿದೆ?: ಇಡ್ಲಿ, ವಡೆ, ಕೇಸರಿಬಾತ್, ಖಾರಾಬಾತ್, ಸಿರಿಧಾನ್ಯ ಪೊಂಗಲ್, ಸಿರಿಧಾನ್ಯ ಖಾರಾಬಾತ್ ಹೋಳಿಗೆ… ಇವಿಷ್ಟು ಬೆಳಗ್ಗಿನ ಹೈಲೈಟ್. ಮಧ್ಯಾಹ್ನ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ತಿನಿಸುಗಳು, ಹಲವು ವೆರೈಟಿಯ ದೋಸೆಗಳು ಲಭ್ಯ. ತರಕಾರಿ ದೋಸೆ, ನೀರು ದೋಸೆ, ಪನ್ನೀರು ದೋಸೆ, ಈರುಳ್ಳಿ ಹೂವಿನ ದೋಸೆ, ಹಾಲುಬಾಯಿ, ಕಾಶಿ ಹಲ್ವಾ, ಬಾದಾಮಿ ಹಲ್ವಾ… ಇಲ್ಲಿನ ವಿಶೇಷತೆಗಳು. ಇಲ್ಲಿ ಮಾಡುವ ಮೊಘಲ್ ಬಿರಿಯಾನಿಗೆ ದೊಡ್ಡ ಫ್ಯಾನ್ಸ್ ಇದ್ದಾರೆ.
ಎಲ್ಲಿದೆ?: ಸೌತ್ ರುಚೀಸ್, ರೇಸ್‌ಕೋರ್ಸ್ ರಸ್ತೆ, ಶಿವಾನಂದ ವೃತ್ತದ ಬಳಿ
* ವಿ.ಎಸ್. ನಾಯಕ್