Advertisement

ಮಲ್ಲಿಗೆ ಬೆಳೆದು ಗೌರವ ಶಿಕ್ಷಕಿಯರಿಗೆ ವೇತನ!

10:09 AM Jun 16, 2019 | keerthan |

ಬಂಟ್ವಾಳ: ಮಲ್ಲಿಗೆ ಬೆಳೆದು ಜೀವನ ಸಾಗಿಸುವವರಿದ್ದಾರೆ. ಆದರೆ ಬಂಟ್ವಾಳ ತಾಲೂಕು ಕುಳ ಗ್ರಾಮದ ಓಜಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯು ಇದೇ ಆದಾಯ ಮೂಲ ದಿಂದ ಗೌರವ ಶಿಕ್ಷಕಿಯರಿಗೆ ವೇತನ ಪಾವತಿಸುವು ದಷ್ಟೇ ಅಲ್ಲದೆ ಶಾಲೆಯನ್ನು ಮಾದರಿ ಯಾಗಿ ಮುನ್ನಡೆಸುತ್ತಿದೆ.

Advertisement

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಹೊನ್ನಪ್ಪ ಗೌಡರು ಸ್ವತಃ ಗಿಡಕ್ಕೆ ನೀರು, ಗೊಬ್ಬರ ನೀಡಿ ಮನೆ ಮಲ್ಲಿಗೆಯಂತೆ ಬೆಳೆಸುತ್ತಾರೆ. ಶಿಕ್ಷಕ ವೃಂದ, ಎಸ್‌ಡಿಎಂಸಿಯ ಇತರ ಸದಸ್ಯರು, ವಿದ್ಯಾರ್ಥಿಗಳು ಸಹಕರಿಸುತ್ತಾರೆ. ಬಿಸಿಯೂಟ ಅಡುಗೆಯ ಆಯಾ ಮಲ್ಲಿಗೆ ಕೊಯ್ದು ಹೆಣೆದು ಸಿದ್ಧಪಡಿಸಿದರೆ, ನಿತ್ಯ ಕೂಲಿ ಕೆಲಸಕ್ಕೆ ಹೋಗುವ ಎಸ್‌ಡಿಎಂಸಿ ಅಧ್ಯಕ್ಷರು ಹೂವಿನ ಅಟ್ಟಿಯನ್ನು ಪುತ್ತೂರು ಬಳಿಯ ಕಬಕದಲ್ಲಿ ಮಾರಾಟಕ್ಕೆ ನೀಡುತ್ತಾರೆ. ಇದರಿಂದ ಸಿಗುವ ವಾರ್ಷಿಕ ಆದಾಯ ಸರಾಸರಿ 60ರಿಂದ 70 ಸಾವಿರ ರೂ. ಗೌರವ ಶಿಕ್ಷಕಿಯರಿಗೆ ಇದರಿಂದಲೇ ಪಗಾರ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಇತರ ಖರ್ಚುವೆಚ್ಚ ಭರಿಸುವುದಕ್ಕೂ ಉಪಯೋಗಿ. “ಇಡೀ ಕುಳ ಗ್ರಾಮಕ್ಕೆ ನಮ್ಮದು ಒಂದೇ ಸರಕಾರಿ ಶಾಲೆ. ಶಾಲೆಗೆ ಇರುವ 1.06 ಎಕ್ರೆ ಜಮೀನನ್ನು ಚೆನ್ನಾಗಿ ಬಳಕೆ ಮಾಡಿ ಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಗೌಡರು.

7ರಿಂದ 80ಕ್ಕೆ ನೆಗೆದ ಸಾಧನೆ
1968ರಲ್ಲಿ ಆರಂಭವಾದ ಸರಕಾರಿ ಶಾಲೆಯಿದು. 12 ವರ್ಷಗಳ ಹಿಂದೆ, 2007ರಲ್ಲಿ ಇಲ್ಲಿ ಇದ್ದದ್ದು ಕೇವಲ ಏಳು ವಿದ್ಯಾರ್ಥಿಗಳು. ಅಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಶಾಲೆಯನ್ನು ಮುಚ್ಚಲು ಶಿಫಾರಸಾ ಗಿತ್ತು. ಆದರೆ ಆಗಿನ ಎಸ್‌ಡಿಎಂಸಿ ಅಧ್ಯಕ್ಷರು, ಪದಾಧಿಕಾರಿಗಳು ನಿರಂತರ ಪ್ರಯತ್ನಿಸಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿಕೊಂಡರು.

ಹೊನ್ನಪ್ಪ ಗೌಡರು ಎಸ್‌ಡಿಎಂಸಿ ಅಧ್ಯಕ್ಷ
ರಾದದ್ದು 2017-18ರಲ್ಲಿ. ಅದಕ್ಕೆ ಹಿಂದೆ ಅವರ ಸಹೋದರ ಸುಂದರ ಗೌಡರಿದ್ದರು. 2010ರ ಸುಮಾರಿಗೆ ಹೊನ್ನಪ್ಪ ಗೌಡರು ಧರ್ಮಸ್ಥಳ ಗ್ರಾ. ಯೋಜನೆಯ ಅಧ್ಯಕ್ಷರಾಗಿದ್ದಾಗ ಶಾಲೆಯಲ್ಲಿ ಮಲ್ಲಿಗೆ ಬೆಳೆ ಆರಂಭಿಸಿ ದರು. ಆಗ ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದ ರಮೇಶ್‌ ಭಟ್‌ ಸಾಥಿಯಾದರು.
ಈಗ ಶಾಲೆಯಲ್ಲಿ ಮೂವರು ಗೌರವ ಶಿಕ್ಷಕಿಯರಿದ್ದಾರೆ. ಸ್ಮಾರ್ಟ್‌ ಕ್ಲಾಸ್‌ ಸೌಕರ್ಯ ಇದೆ. ನೈಋತ್ಯ ರೈಲ್ವೇ ಮೈಸೂರು ವಿಭಾಗವು ಈ ಶಾಲೆಗೆ 2 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿಕೊಟ್ಟಿದೆ. ಶಾಲೆಗಾಗಿ ಊರವರು ಒಟ್ಟು ಸೇರಿ ಕೊಳವೆ ಬಾವಿ ಮಾಡಿಸಿದ್ದಾರೆ. ಇಂಗು ಗುಂಡಿ ರಚಿಸಿ ರುವುದರಿಂದ ವರ್ಷವಿಡೀ ಸಮೃದ್ಧ ನೀರು. ಶಾಲೆಗೆ ಪ್ರಸ್ತುತ ಸಾಲಿನಲ್ಲಿ 6ನೇ ತರಗತಿ ಮಂಜೂರಾಗಿದ್ದು, ಗುಣ ಮಟ್ಟದ ಶಿಕ್ಷಣದ ಕಾರಣ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಮುಂದಿನ ವರ್ಷ ಎಲ್‌ಕೆಜಿ ತರಗತಿ ಆರಂಭಿಸುವ ಬಗ್ಗೆ ಶಾಲಾಭಿ ವೃದ್ಧಿ ಸಮಿತಿ ಚಿಂತನೆ ನಡೆಸಿದೆ.

ಅರ್ಜಿ ಸಲ್ಲಿಸದೆ ಪ್ರಶಸ್ತಿ
ಶಾಲೆಗೆ ವಿಲ್ಮಾ ಸಿಕ್ವೇರಾ ಪ್ರಭಾರ ಮುಖ್ಯಶಿಕ್ಷಕಿ. ಶಾಲೆಯ ಅಭಿವೃದ್ಧಿಯ ವಿಚಾರ ಬಂದಾಗ ತನ್ನ ಮಾಸಿಕ ವೇತನವನ್ನು ವಿನಿಯೋಗಿಸಲು ಹಿಂದೆಮುಂದೆ ನೋಡುವುದಿಲ್ಲ. ಸ್ವತಃ ಕ್ಷೇತ್ರ ಶಿಕ್ಷಣಾಧಿಕಾರಿ ಶಿಫಾರಸು ಮಾಡಿ ಅವರಿಗೆ ಕಳೆದ ಸಾಲಿನಲ್ಲಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ದೊರಕಿಸಿ ಕೊಟ್ಟಿದ್ದಾರೆ. ಇವರಲ್ಲದೆ ಇನ್ನೊಬ್ಬರು ಖಾಯಂ ಶಿಕ್ಷಕರಿದ್ದಾರೆ.

Advertisement

10 ವರ್ಷಗಳಿಂದ ನಾವು ಶಾಲೆಯ ಶೈಕ್ಷಣಿಕ ಮಟ್ಟ ಸುಧಾರಿಸುತ್ತಾ ಬಂದುದರಿಂದ ಮಕ್ಕಳ ಸಂಖ್ಯೆಯೂ ಹೆಚ್ಚುತ್ತಾ ಬಂದಿದೆ. ಈ ವರ್ಷ 33 ಮಕ್ಕಳ ಸೇರ್ಪಡೆ ಯೊಂದಿಗೆ ಒಟ್ಟು ಸಂಖ್ಯೆ 80ಕ್ಕೆ ಏರಿಕೆಯಾಗಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ನೂರರ ಗಡಿ ದಾಟಿಸುವುದಕ್ಕಾಗಿ ಇಂಗ್ಲಿಷ್‌ ತರ
ಗತಿ ಆರಂಭಿಸುವ ಯೋಜನೆ ಇದೆ.
ಹೊನ್ನಪ್ಪ ಗೌಡ, ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ ಓಜಲ

ಗೌರವ ಶಿಕ್ಷಕಿಯರ ಸಂಭಾವನೆಗೆ ಮಲ್ಲಿಗೆ ಕೃಷಿಯ ಆದಾಯವಿದೆ. ಕಡಿಮೆ ಆದರೆ ನಾವು ಭರಿಸುತ್ತೇವೆ. ಬಿಸಿಯೂಟಕ್ಕೆ ಬೇಕಾದ ತರಕಾರಿ ಬೆಳೆಯುತ್ತೇವೆ. ಊರಿನ ಜನ ಸರ್ವ ಸಹಕಾರ ನೀಡುತ್ತಾರೆ. ಮುಂದಿನ ಶೈಕ್ಷಣಿಕ ವರ್ಷ ಮಕ್ಕಳ ಸಂಖ್ಯೆ ಹೆಚ್ಚುವುದರಿಂದ ನಮ ಗೊಂದು ಸುಸಜ್ಜಿತ ಕಟ್ಟಡ ಬೇಕು.
ವಿಲ್ಮಾ ಸಿಕ್ವೇರಾ, ಪ್ರಭಾರ ಮುಖ್ಯ ಶಿಕ್ಷಕಿ, ಓಜಲ ಶಾಲೆ

ಅತ್ಯಂತ ಕಡಿಮೆ ಗೈರುಹಾಜರಾತಿಯ ಶಾಲೆ ಎಂಬ ಕೀರ್ತಿ ಓಜಲ ಶಾಲೆಗಿದೆ. ಶಾಲಾಭಿವೃದ್ಧಿ ಸಮಿತಿ ಸದಸ್ಯರೆಲ್ಲ ಕೂಲಿ ಕಾರ್ಮಿಕರು; ಆದರೆ ಹೃದಯ ಶ್ರೀಮಂತರು. ಎಲ್ಲರೂ ಒಂದಲ್ಲ ಒಂದು ವೃತ್ತಿ ಪರಿಣಿತರಾಗಿದ್ದು, ಎಲ್ಲ ಅಭಿವೃದ್ಧಿ ಕೆಲಸಗಳಲ್ಲಿ ಶ್ರಮದಾನದ ಮೂಲಕವೂ ಕೈ ಜೋಡಿಸುತ್ತಾರೆ. ಶಾಲೆಗಾಗಿ ಅವಿಶ್ರಾಂತ ದುಡಿಯುವ ಮುಖ್ಯ ಶಿಕ್ಷಕಿಯ ಶ್ರಮ, ಸಾಧನೆಯನ್ನು ಕಂಡು ನಾವೇ ಕಳೆದ ಶೈಕ್ಷಣಿಕ ವರ್ಷದಲ್ಲಿ ಶಿಫಾರಸು ಮಾಡಿ ಪ್ರಶಸ್ತಿ ಕೊಡಿಸಿದ್ದೇವೆ.
ಎನ್‌. ಶಿವಪ್ರಕಾಶ್‌, ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ

ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next