Advertisement

ರೈತರ ಭೂಸ್ವಾಧೀನ ಸರ್ಕಾರದ ಸಾಧನೆ: ಶ್ರೀನಿವಾಸ್‌

05:44 PM Jul 28, 2022 | Team Udayavani |

ದೇವನಹಳ್ಳಿ: ಬಿಜೆಪಿ ಸಾಧನಾ ಸಮಾವೇಶ ಮಾಡುತ್ತಿದೆ. ಅನ್ನದಾತರ ಭೂಮಿ ಕಸಿದುಕೊಂಡು ರೈತರ ನಾಶ ಮಾಡುವುದು ಬಿಜೆಪಿ ಸರ್ಕಾರದ ಸಾಧನೆ ಆಗಿದೆ. ಸರ್ಕಾರದ ವಿರುದ್ಧ ರೈತರ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ. ಸರ್ಕಾರ ಶೀಘ್ರವೇ ರೈತರ ಸಮಸ್ಯೆ ಇತ್ಯರ್ಥಪಡಿಸ ಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ ವಾದ ರಾಜ್ಯ ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್‌ ಎಚ್ಚರಿಕೆ ನೀಡಿದರು.

Advertisement

ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಕೈಗಾರಿಕೆಗಳ ಹೆಸರಲ್ಲಿ ಜಿಲ್ಲೆಯ ದೇವ ನಹಳ್ಳಿ ಮತ್ತು ದೊಡ್ಡಬಳ್ಳಾಪುರ ತಾಲೂಕಿನ ಫ‌ಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಿರುವುದು ಸರ್ಕಾರದ ಸಾಧನೆಯೇ? ಎಂದು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಪ್ರಶ್ನಿಸಿದೆ. ದೇವನಹಳ್ಳಿ ತಾಲೂಕು, ಚನ್ನರಾಯಪಟ್ಟಣ ಹೋಬಳಿ 13 ಹಳ್ಳಿಗಳ 1,777 ಎಕರೆ ಫ‌ಲವತ್ತಾದ ಕೃಷಿ ಭೂಮಿ ಸ್ವಾಧೀನ ಪಡಿಸಿಕೊಳ್ಳುತ್ತಿರುವುದನ್ನು ವಿರೋಧಿಸಿ ನಾಡ ಕಚೇರಿಯ ಮುಂದೆ ಕಳೆದ 115 ದಿನಗಳಿಂದ ಧರಣಿ ನಡೆಸಿ ವಿವಿಧ ರೀತಿಯ ಪ್ರತಿಭಟನೆ ಮಾಡಿ ಮಂತ್ರಿ, ಮುಖ್ಯಮಂತ್ರಿ ಗಮನಕ್ಕೆ ತರಲಾಗಿದ್ದರೂ, ಈವರೆಗೂ ರೈತರ ಮನವಿಗೆ ಸ್ಪಂದಿಸಿಲ್ಲ ಎಂದು ಕಿಡಿ ಕಾರಿದರು.

ಕೆಲವು ಭೂ ದಲ್ಲಾಳಿಗಳ ಮೂಲಕ ರೈತರ ವಿರುದ್ಧ ರೈತರನ್ನೆ ಎತ್ತಿ ಕಟ್ಟಿ ಗ್ರಾಮಗಳಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಿ, ಬ್ರಿಟಿಷರ ರೀತಿಯ ಒಡೆದು ಆಳುವ ನೀತಿಯನ್ನು ಇಂದು ಸರ್ಕಾರವೇ ಮುಂದೆ ನಿಂತು ಮಾಡುತ್ತಿರುವುದು ಶೋಚನೀಯ ಸಂಗತಿ ಎಂದು ಹೇಳಿದರು.

ರೈತರ ಹೋರಾಟ ನಿರ್ಲಕ್ಷ್ಯ: ಗ್ರಾಪಂ ಸದಸ್ಯ ಮಾರೇಗೌಡ ಮಾತನಾಡಿ, ಮುಖ್ಯಮಂತ್ರಿಗಳು ಈ ಸಮಸ್ಯೆಯನ್ನು ಕೆಲವೇ ಗಂಟೆಗಳಲ್ಲಿ ಬಗೆಹರಿಸಬಹುದಿತ್ತು. ಆದರೆ, ಕಳೆದ 6 ತಿಂಗಳಿನಿಂದ ನಡೆಯುತ್ತಿರುವ ನಮ್ಮ ಹೋರಾಟ ನಿರ್ಲಕ್ಷಿಸಿ, ರೈತ ಹೋರಾಟ ಅಣಕಿಸುವ ರೀತಿಯಲ್ಲಿ ಇದೇ ಮಣ್ಣಿನಲ್ಲಿ ತಮ್ಮ ಸಾಧನ ಸಮಾವೇಶ ನಡೆಯುತ್ತಿದೆ. ಅವರಿಗೆ ಕಿಂಚಿತ್ತಾದರೂ ಮಾನವೀಯತೆ ಇದ್ದು, ಜನಪರ, ರೈತಪರವಾದ ಕಾಳಜಿ ಇನ್ನು ಅವರಲ್ಲಿ ಉಳಿದಿದ್ದರೆ ಈ ಸಮಾವೇಶದಲ್ಲಾದರೂ ನಮ್ಮ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿ ಕೊಳ್ಳುವುದಿಲ್ಲ ಎಂದು ಘೋಷಿಸಿ ಸಾರ್ಥಕತೆಯನ್ನು ಮೆರೆಯಿರಿ ಎಂದು ನಾವು ತಿಳಿಸಲು ಬಯಸುತ್ತೇವೆ ಎಂದರು.

ರೈತ ಮುಖಂಡ ನಂಜಪ್ಪ, ವೆಂಕಟರಮಣಪ್ಪ, ರಮೇಶ್‌, ಲೋಕೇಶ್‌, ಮುಕುಂದ್‌, ಸುರೇಶ್‌, ಮೋಹನ್‌, ಅಂಜನ್‌, ಬಾಬು, ರಾಮಾಂಜಿನಪ್ಪ, ಮೂರ್ತಿ, ಕರ್ನಾಟಕ ದಲಿದ ಸಂಘರ್ಷ ಸಮಿತಿ ಅಂಬೇಡ್ಕರ್‌ ವಾದ ಪ್ರಧಾನ ಸಂಚಾಲಕ ಅತ್ತಿಬೆಲೆ ನರಸಪ್ಪ, ರೈತಸಂಘದ ಜಿಲ್ಲಾಧ್ಯಕ್ಷ ಭುವನಹಳ್ಳಿ ವೆಂಕಟೇಶ್‌ ಹಾಗೂ ಮತ್ತಿತರರು ಇದ್ದರು.

Advertisement

ಸಾವಿರಾರು ಎಕರೆ ಭೂಮಿ ವಶ
ದೇಶದ ಅಭಿವೃದ್ಧಿಗೆ ಕೈಗಾರಿಕೆಗಳು ಬಹಳ ಮುಖ್ಯ. ನಾವು ಕೈಗಾರಿಕೆಗಳ ವಿರೋಧಿಗಳಲ್ಲ. ಕೈಗಾರಿಕೆ ಸ್ಥಾಪಿಸಲು ಇತರೆ ಅನುಪಯುಕ್ತ ಭೂಮಿ ಬಳಸಬಹುದು. ಆಲ್ಲದೆ, ಈಗಾಗಲೇ ವಿಮಾನ ನಿಲ್ದಾಣ, ಎಸ್‌ಇಝಡ್‌ ಮತ್ತು ಐಟಿಐಆರ್‌ಗಳಿಗೆ ಸಾವಿರಾರು ಎಕರೆ ಭೂಮಿ ವಶಪಡಿಸಿಕೊಂಡಿವೆ. ಇದರಿಂದ ಯಾವ ರೈತರಿಗೆ ಲಾಭವಾಗಿದೆ. ಯಾವ ರೈತ ಕುಟುಂಬಗಳು ಆರ್ಥಿಕವಾಗಿ ಬಲಿಷ್ಠವಾಗಿವೆ. ಯಾವ ರೈತರ ಮಕ್ಕಳಿಗೆ ಯಾವ ಉದ್ಯೋಗ ಸಿಕ್ಕಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಗ್ರಾಪಂ ಸದಸ್ಯ ಮಾರೇಗೌಡ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next