Advertisement

ವಿಕಲಚೇತನರಲ್ಲಿರಲಿ ಸಾಧನೆಯ ಹಂಬಲ: ಶರತ್‌

02:09 PM Dec 04, 2018 | Team Udayavani |

ರಾಯಚೂರು: ವಿಕಲತೆ ಎನ್ನುವುದು ದೇಹಕ್ಕೆ ಹೊರತು ಮನಸಿಗಲ್ಲ. ಅಂಗವೈಕಲ್ಯವನ್ನು ದೌರ್ಬಲ್ಯ ಎಂದು ಭಾವಿಸದೆ ನಿಮಗಿರುವ ವಿಶೇಷ ಶಕ್ತಿಯಿಂದ ಸಾಧನೆ ಮಾಡಿ ಎಂದು ಜಿಲ್ಲಾಧಿಕಾರಿ ಶರತ್‌.ಬಿ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ, ನಗರಸಭೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ನಗರದ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ವಿಶೇಷಚೇತನರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲರಿಗೂ ಒಂದಲ್ಲ ಒಂದು ನ್ಯೂನ್ಯತೆ ಇರುತ್ತದೆ. ಅದನ್ನು ಮೆಟ್ಟಿ ನಿಲ್ಲಬೇಕು. ವಿಶೇಷಚೇತನರು ಕೂಡ ನಾನು ಅಶಕ್ತ ಎಂಬ
ಖನ್ನತೆ ಬಿಟ್ಟು ಇತರರಂತೆ ಸಾಧಿ ಸುವ ಹಂಬಲ ಹೊಂದಬೇಕು. ದೈಹಿಕ ಶಕ್ತಿ ಇಲ್ಲದಿದ್ದರೇನಂತೆ ಬೌದ್ಧಿಕವಾಗಿ ಸಾಮಾನ್ಯರಿಗಿಂತ
ಹೆಚ್ಚು ಶಕ್ತಿ ನಿಮ್ಮಲ್ಲಿದೆ ಎನ್ನುವುದನ್ನು ಮನಗಾಣಬೇಕು ಎಂದರು.

ಇಲ್ಲಿ ಕೆಲವೆಡೆ ವಿಕಲಚೇತನರು ಎಂದು ನಮೂದಿಸಲಾಗಿದೆ. ಅದನ್ನು ವಿಶೇಷಚೇತನರು ಎಂದು ಬಳಸುವುದು ಸೂಕ್ತ. ಮುಂದೆ ಅದೇ ರೀತಿ ಬಳಸಿ. ಅಲ್ಲದೇ, ಯಾವುದೇ ಅಧಿಕಾರಿಗಳು ತಮ್ಮ ಕಚೇರಿಗೆ ಬರುವ ವಿಶೇಷಚೇತನರ ಬಳಿ ಖುದ್ದು ತೆರಳಿ ಸಮಸ್ಯೆ ಆಲಿಸಿ ಎಂದು ಸೂಚಿಸಿದರು. ಜಿಲ್ಲೆಯಲ್ಲಿ ವಿಕಲಚೇತನರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಸಂಬಂಧಿಸಿದ ಅಧಿಕಾರಿಗಳು,
ಸಂಘಟನೆಗಳ ಜತೆ ಚರ್ಚಿಸಿ ಪರಿಹಾರ ಕ್ರಮಗಳನ್ನು ಜರುಗಿಸಲಾಗುವುದು ಎಂದರು.

ದೇವದುರ್ಗದ ಮನೋಚೈತನ್ಯ ಸಂಸ್ಥೆ ಅಧ್ಯಕ್ಷ ಬಸನಗೌಡ ದೇಸಾಯಿ ಉಪನ್ಯಾಸ ನೀಡಿ, ಸರ್ಕಾರ ವಿಕಲಚೇತನರಿಗಾಗಿ
ನೀಡಿರುವ ಶೇ.5ರಷ್ಟು ಮೀಸಲಾತಿಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದರು.

Advertisement

ಭಂಡಾರಿ ಆಸ್ಪತ್ರೆಯ ವೈದ್ಯ ಡಾ| ರಿಯಾಜುದ್ದೀನ್‌, ರೋಟರಿ ಕ್ಲಬ್‌ ಅಧ್ಯಕ್ಷ ಶಿವಶಂಕರ ಮಾತನಾಡಿದರು. ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿಶೇಷಚೇತನರ ಒಳಿತಿಗಾಗಿ ಕೆಲಸ ಮಾಡಿದ ಸಂಘ-ಸಂಸ್ಥೆಗಳು ಮತ್ತು ಸ್ವಯಂ ಸೇವಕರನ್ನು ಸನ್ಮಾನಿಸಲಾಯಿತು.

ಜಿಪಂ ಸಿಇಒ ನಲಿನ್‌ ಅತುಲ್‌, ವಿಕಲಚೇತನ ಇಲಾಖೆ ಅಧಿಕಾರಿ ಶ್ರೀದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರ ಉಪನಿರ್ದೇಶಕ ವೀರನಗೌಡ, ವಿವಿಧ ಸಂಘಟನೆಗಳ ಮುಖಂಡರಾದ ಪವನ ಪಾಟೀಲ, ಅನಿಲ ಕುಮಾರ, ರಾಘವೇಂದ್ರ, ಮಹ್ಮದ್‌ ಅಲಿ, ಹುಸೇನ್‌ ಪಾಷಾ ಬನ್ನಿಗೋಳ, ಬಾಬುಮಿಯ್ಯ, ಲಿಂಗನಗೌಡ, ರμ, ಹೊನ್ನಪ್ಪ ಸೇರಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next