ಬೀದರ: ಆತ್ಮವಿಶ್ವಾಸದಿಂದ ಮಾತ್ರ ಜೀವನದಲ್ಲಿ ಉತ್ತುಂಗದ ಸಾಧನೆ ಮಾಡಲು ಸಾಧ್ಯವಿದೆ ಎಂದು ಜಿಲ್ಲೆಯವರೇ ಆದ ಮಿಸಸ್ ಕ್ವೀನ್ ಆಫ್ ಇಂಡಿಯಾ ಪ್ರಶಸ್ತಿ ಪುರಸ್ಕೃತೆ ಅರುಣಾ ಪಾಟೀಲ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಹಿಳೆಯರು ಯಾವುದರಲ್ಲೂ ಪುರುಷರಿಗಿಂತ ಕಡಿಮೆ ಇಲ್ಲ. ಕಾರಣ ಕೀಳರಿಮೆ ಬಿಡಬೇಕು. ದೃಢ ಸಂಕಲ್ಪ ಹಾಗೂ ಸತತ ಪ್ರಯತ್ನದಿಂದ ಗುರಿ ತಲುಪಬಹುದು ಎಂದರು.
ಕಾಲೇಜಿನ ಮಹಿಳಾ ಸಬಲೀಕರಣ ಮತ್ತು ಅಭಿವೃದ್ಧಿ ಘಟಕದ ಸಂಚಾಲಕಿ ಡಾ| ವಿದ್ಯಾ ಪಾಟೀಲ ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿಭೆಗಳಿಗೆ ಮಾರ್ಗದರ್ಶನ ಹಾಗೂ ಪ್ರೋತ್ಸಾಹದ ಅಗತ್ಯವಿದೆ. ಛಲವಿದ್ದರೆ ಸಾಧನೆ ಸುಲಭವಾಗಲಿದೆ ಎಂದು ತಿಳಿಸಿದರು.
ಅರುಣಾ ಪಾಟೀಲ ಮಿಸಸ್ ಕ್ವೀನ್ ಆಫ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ ದೇಶವೇ ಬೀದರನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಮಹಿಳೆಯರು, ಮನೆ ಹಾಗೂ ಕುಟುಂಬಕ್ಕೆ ಸೀಮಿತರಾಗಬಾರದು. ಏನಾದರೂ ಸಾಧಿಸಲು ಪ್ರಯತ್ನಿಸಬೇಕು ಎಂದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ಮನೋಜಕುಮಾರ ಅಧ್ಯಕ್ಷತೆ ವಹಿಸಿದ್ದರು. ಡಾ| ಉಮಾಕಾಂತ ಜಾಧವ ನಿರೂಪಿಸಿದರು. ಸಂಜೀವಕುಮಾರ ಅಪ್ಪೆ ವಂದಿಸಿದರು.