Advertisement
ಮಾರ್ಚ್ 27, 2019. ಮುಂಜಾನೆ 9ರ ಹೊತ್ತಿಗೆಲ್ಲ ನಮ್ಮ ದೇಶದ ಪ್ರಧಾನಿ, ಇಂದು 11:45ರಿಂದ 12ಗಂಟೆಯ ನಡುವೆ ದೇಶವನ್ನುದ್ದೇಶಿಸಿ ಮಾತಾಡಲಿದ್ದೇನೆ; ಅತಿ ಮಹತ್ವದ ಸಂಗತಿಯೊಂದನ್ನು ಹೇಳಲಿಕ್ಕಿದೆ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಾಗ ಜನರಿಗೆ ನೆನಪಾದದ್ದು ನವೆಂಬರ್ 8! ಮತ್ತೆ ಯಾವ ಗಂಡಾಂತರ ಕಾದಿದೆಯೋ ಎಂದು ದೇಶದ ಕಾಳಧನಿಕರೆಲ್ಲ ಕೌಂಟ್‌ಡೌನ್ ಮಾಡತೊಡಗಿದರು. ಹೇಳಿದ ಸಮಯಕ್ಕೆ ಸರಿಯಾಗಿ ದೇಶದ ಜನತೆಯ ಮುಂದೆ ಕಾಣಿಸಿಕೊಂಡ ಪ್ರಧಾನಿಗಳು, ನಾವೀಗ ಉಪಗ್ರಹ ನಿಗ್ರಹ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದ್ದೇವೆ; ಅಂಥ ತಂತ್ರಜ್ಞಾನವಿರುವ ಅಮೆರಿಕ, ರಷ್ಯ, ಚೀನಗಳ ಜೊತೆಗೆ ನಾಲ್ಕನೇ ದೇಶವಾಗಿ ನಾವೂ ಸೇರಿದ್ದೇವೆ ಎಂದು ಹೇಳಿದರು. ಇದು ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡಬೇಕಾದ ಸಂಗತಿ ಎಂಬ ಮಾತನ್ನು ಸೇರಿಸಲು ಮರೆಯಲಿಲ್ಲ.
Related Articles
Advertisement
(ಕು)ತಂತ್ರನಿಸ್ಸೀಮ ಚೀನ: ಕಾಲ ಕಳೆದಂತೆ ಪ್ರತಿ ದೇಶವೂ ಉಪಗ್ರಹಗಳನ್ನು ಹೆಚ್ಚುಹೆಚ್ಚಾಗಿ ನೆಚ್ಚಿಕೊಂಡಿದೆ. ಇಂದು ನಮ್ಮ ಕೋಟ್ಯಂತರ ಮೊಬೈಲ್ ಫೋನ್‌ಗಳು ಕೆಲಸ ಮಾಡಲು ಕೃತಕ ಉಪಗ್ರಹಗಳ ನೆರವು ಬೇಕು. ರಕ್ಷಣೆ, ಕೃಷಿ, ನಿಕ್ಷೇಪ ಪತ್ತೆ, ಜಲಮೂಲ ಪತ್ತೆ, ಆರೋಗ್ಯ, ವಾಯು-ರೈಲು-ಬಸ್ಸು-ಕ್ಯಾಬುಗಳ ಸಂಚಾರ, ಅಂತರ್ಜಾಲ, ಹವಾಮಾನ ಮುನ್ಸೂಚನೆ ಮುಂತಾದ ಪ್ರತಿ ಕ್ಷೇತ್ರದಲ್ಲೂ ಉಪಗ್ರಹಗಳದ್ದು ಅವಿನಾಭಾವ ಸಂಬಂಧ. ಅವುಗಳಿಲ್ಲದೆ ಆಧುನಿಕ ಜಗತ್ತು ಒಂದಂಗುಲ ಚಲಿಸುವುದಕ್ಕೂ ಸಾಧ್ಯವಿಲ್ಲವೆಂಬ ಸ್ಥಿತಿ ಏರ್ಪಟ್ಟಿದೆ. ಆದ್ದರಿಂದ ಎರಡು ದೇಶಗಳ ನಡುವೆ ಯುದ್ಧ ಎಂದರೆ ಒಬ್ಬರು ಇನ್ನೊಬ್ಬರ ಮೇಲೆ ಬಾಂಬೆಸೆಯುವುದು ಈಗ ಔಟ್‌ಡೇಟೆಡ್! ಹೊಚ್ಚಹೊಸ ತಂತ್ರ ಎಂದರೆ ಒಬ್ಬರು ಮತ್ತೂಬ್ಬರ ಉಪಗ್ರಹಗಳನ್ನು ನಿಷ್ಕ್ರಿಯಗೊಳಿಸುವುದು! ಆ ಮೂಲಕ, ಶತ್ರುಗಳು ಕೈ ಕಟ್ ಬಾಯುಚ್ ಸ್ಥಿತಿಗೆ ಬರುವಂತೆ ಮಾಡುವುದು!
ರಷ್ಯದ ಮೇಲೆ ಇಂಥ ವ್ಯೋಮಾಚಾರದ ಪ್ರಯೋಗ ಮಾಡಲು ಅಮೆರಿಕ 1980ರಲ್ಲೇ ತಯಾರಾಗಿಬಿಟ್ಟಿತ್ತು. ಎರಡು ಹಂತಗಳಲ್ಲಿ ಇಂಧನ ಉರಿಯುವ ರಾಕೆಟ್ ಅನ್ನು ಭೂನೆಲೆಯಿಂದ ಹಾರಿಸುವುದು; ರಾಕೆಟ್ಟಿನ ತುದಿಯಲ್ಲಿ ಮಿನಿಯೇಚರ್ ಹೋಮಿಂಗ್ ವೆಹಿಕಲ್ (ಪುಟ್ಟ ಗಮ್ಯಗಾಮೀ ವಾಹನ) ಎಂಬ ಮಿಸೈಲ್ ಕಟ್ಟಿ ಅದು ಕೊನೆಗೆ ಯೋಜಿತ ಗುರಿಗೆ ಢೀ ಹೊಡೆಯುವಂತೆ ಮಾಡುವುದು – ಇದು ಆಗ ಅಮೆರಿಕ ರೂಪಿಸಿದ್ದ ಉಪಗ್ರಹ ನಿಗ್ರಹ ಯೋಜನೆಯ ನೀಲನಕ್ಷೆ. ಇದರ ಮೊದಲ ಹಂತವಾಗಿ 1985ರ ಹೊತ್ತಿಗೆ ಅಮೆರಿಕ ಕನಿಷ್ಠ ಐದು ಅಂಥ ವಾಹನಗಳನ್ನು ನಿರ್ಮಿಸಿತ್ತು ಮತ್ತು ಆ ವರ್ಷದ ಸೆಪ್ಟೆಂಬರ್‌ನಲ್ಲಿ ಪ್ರಯೋಗಾರ್ಥವಾಗಿ ನಾಸಾದ ಒಂದು ಉಪಗ್ರಹವನ್ನು ನಾಶ ಮಾಡಿತ್ತು. ಇದಕ್ಕೆ ಪ್ರತ್ಯುತ್ತರವೆಂಬಂತೆ ರಷ್ಯ ನೆಲದಿಂದ 2000 ಕಿಮೀ ಎತ್ತರಕ್ಕೆ ಜಿಗಿಯಬಲ್ಲ ಹಾಗೂ ಒಂದಲ್ಲ ಹಲವು ಉಪಗ್ರಹಗಳನ್ನು ಹೊಡೆದುರುಳಿಸುತ್ತಾ ಹೋಗಬಲ್ಲ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿತು.
ಇವರಿಬ್ಬರ ನಡುವೆ ತಾನೇನು ಕಡಿಮೆ ಎಂದು ಎದ್ದುನಿಂತಿತು ಚೀನ. ಉಪಗ್ರಹ ನಿಗ್ರಹದ ಆಖಾಡಕ್ಕೆ ಚೀನ ಇಳಿದ ಮೇಲೆ ಅದೀಗ ವ್ಯವಸ್ಥಿತ ಯುದ್ಧವಾಗಿ ಮಾರ್ಪಟ್ಟಿದೆ. ಈಗ ನಾವು ಉಪಗ್ರಹ ನಿಗ್ರಹದಲ್ಲಿ ಮೂರು ಬಗೆಯನ್ನು ಗುರುತಿಸಬಹುದು. ಒಂದು – ನೇರದಾಳಿ. ಅಂದರೆ ಉಪಗ್ರಹವೊಂದನ್ನು ಮೊದಲೇ ಟಾರ್ಗೆಟ್ ಮಾಡಿಕೊಂಡು ಅದಕ್ಕೆ ನೇರವಾಗಿ ಒಂದು ದಾಳಿವಾಹನವನ್ನು ಗುದ್ದಿಸುವ ಸೂಸೈಡ್ ಬಾಂಬರ್ ಮಾದರಿ ಇದು (2007ರ ಜನವರಿಯಲ್ಲಿ ಚೀನ, ಎಫ್ವೈ-1ಸಿ ಎಂಬ ಮುದಿ ಉಪಗ್ರಹವನ್ನು ಎಸ್‌ಸಿ-19 ಹೆಸರಿನ ಕ್ಷಿಪಣಿಯಿಂದ ಹೊಡೆಸಿ ನಾಶಪಡಿಸಿತು). ಎರಡು – ಸೌಮ್ಯ ಕೊಲೆ. ಅಂದರೆ ಉಪಗ್ರಹಕ್ಕೆ ಭೌತಿಕವಾಗಿ ಏನೂ ಹಾನಿ ಮಾಡದೆ ದೂರದಿಂದಲೇ ಅದರ ಸಂಕೇತಗಳನ್ನು ಹಾಳುಗೆಡವುವುದು; ಭೂಮಿಯ ಜೊತೆಗೆ ಅದರ ಸಂಪರ್ಕ ತಪ್ಪಿಸುವುದು; ಉಪಗ್ರಹದ ವ್ಯವಸ್ಥೆ ಕುಸಿದು ಅದು ಅನುಪಯುಕ್ತವಾಗುವಂತೆ ಮಾಡುವುದು. ಲಿಫ್ಟ್ನಲ್ಲಿ ಜನರಿದ್ದಾಗ ಉದ್ದೇಶಪೂರ್ವಕವಾಗಿ ವಿದ್ಯುತ್ ನಿಲ್ಲಿಸುವಂಥ ಪುಂಡಾಟಿಕೆ ಇದು (2006ರಲ್ಲಿ ಚೀನ ಈ ಪವರ್ ತೋರಿಸಿ ಅಮೆರಿಕದ ಉಪಗ್ರಹಗಳನ್ನೇ ಕೆಲ ತಾಸುಗಳ ಮಟ್ಟಿಗೆ ಕಂಗಾಲು ಮಾಡಿತ್ತು). ಇನ್ನು, ಮೂರನೆಯದ್ದು – ಉಪಗ್ರಹದ ಹತ್ತಿರಕ್ಕೆ ಬೇರೆ ಒಂದಷ್ಟು ಉಪಗ್ರಹಗಳನ್ನೋ (ಮೈಕ್ರೋ ಸ್ಯಾಟಲೈಟ್ಸ್) ನಾಶಕ ಉಪಕರಣಗಳನ್ನೋ ಹಾಯಿಸಿ ಅಪಘಾತ ಸಂಭವಿಸುವಂತೆ ನೋಡಿಕೊಳ್ಳುವುದು. ವಿಮಾನದ ದಿಕ್ಕಲ್ಲಿ ಹಕ್ಕಿಗಳ ಹಿಂಡನ್ನು ಹಾರಿಬಿಡುವಂಥ ದುಷ್ಕೃತ್ಯ ಇದು! (2008ರಲ್ಲಿ ಚೀನದ ಶೆಂಜೌ 7 ಹೆಸರಿನ ಗಗನನೌಕೆಯಲ್ಲಿದ್ದ ಇಬ್ಬರು ಗಗನಯಾತ್ರಿಗಳು ಅಂತಾರಾಷ್ಟ್ರೀಯ ಅಂತರಿಕ್ಷ ನಿಲ್ದಾಣ (ಐಎಸ್‌ಎಸ್) ಹಾದುಹೋಗುವ ದಾರಿಯಲ್ಲಿ ಉದ್ದೇಶಪೂರ್ವಕ ಒಂದು ಮೈಕ್ರೋ ಸ್ಯಾಟಲೈಟ್ ಅನ್ನು ಹಾರಿಬಿಟ್ಟಿದ್ದರು. ಅದು ಗಂಟೆಗೆ 17,000 ಮೈಲಿಗಳ ವೇಗದಲ್ಲಿ ಧಾವಿಸುತ್ತ ಐಎಸ್‌ಎಸ್‌ನ ತೀರ ಸಮೀಪದಲ್ಲಿ ಹಾರಿ ಆತಂಕ ಮೂಡಿಸಿತ್ತು).
ಸ್ಯಾಟಲೈಟ್ ವಾರ್‌ಗಳ ಕಾಲ: ಜಗತ್ತಿನಲ್ಲಿ ಮುಂದಿನ ದಿನಗಳಲ್ಲಿ ಯುದ್ಧ ನೆಲ, ಜಲ, ಆಕಾಶದಲ್ಲಿ ನಡೆಯುವುದಿಲ್ಲ; ಅವು ಅಂತರಿಕ್ಷದಲ್ಲಿ ನಡೆಯುತ್ತವೆ – ಎಂಬ ಭವಿಷ್ಯವಾಣಿಯನ್ನು ಹಲವು ದಶಕಗಳಷ್ಟು ಹಿಂದೆಯೇ ಹೇಳಿಬಿಟ್ಟಿದ್ದರು ವಿಜ್ಞಾನ ಲೇಖಕ ಐಸಾಕ್ ಅಸಿಮೋವ್. ಸದ್ಯದ ಬೆಳವಣಿಗೆಗಳನ್ನು, ತಂತ್ರಜ್ಞಾನದ ಹೈಜಂಪ್‌ಗ್ಳನ್ನು ಕಂಡರೆ ಆ ಮಾತು ಸತ್ಯ ಎನಿಸದಿರದು. ಇಂದು ಯಾವುದಾದರೂ ಎರಡು ಬಲಾಡ್ಯ ದೇಶಗಳಿಗೆ ಕಾಳಗ ಪ್ರಾರಂಭವಾದರೆ ಅದರ ನೇರ ಪರಿಣಾಮ ಗೋಚರಿಸುವುದು ಅಂತರಿಕ್ಷದಲ್ಲಿ. ಯಾಕೆಂದರೆ ಇಂದು ದೇಶಗಳಲ್ಲಿರುವ ಹೆಚ್ಚಿನೆಲ್ಲ ಯುದ್ದೋಪಕರಣಗಳು ನಡೆಯುವುದಕ್ಕೂ ಉಪಗ್ರಹ ತಂತ್ರಜ್ಞಾನ ಬೇಕೇ ಬೇಕು. ಶತ್ರುಗಳ ನೆಲದೊಳಕ್ಕೆ ನುಗ್ಗುವ ಯುದ್ಧವಿಮಾನಗಳಿರಬಹುದು, ಖಂಡಾಂತರ ಹಾರಿ ಗಂಡಾಂತರ ಸೃಷ್ಟಿಸುವ ಮಿಸೈಲುಗಳಿರಬಹುದು, ಗೂಢಚಾರಿಕೆ ಮಾಡಲು ಕಳಿಸಿದ ಡ್ರೋನ್‌ಗಳಿರಬಹುದು – ಅವೆಲ್ಲವೂ ಕೆಲಸ ಮಾಡುವುದು ಜಿಪಿಎಸ್ ತಂತ್ರಜ್ಞಾನ ಬಳಸಿಕೊಂಡು. ಮಹಾಭಾರತ ಕಾಲದಲ್ಲಿ ಮಂತ್ರಶಕ್ತಿಯಿಂದ ಕೆಲಸ ಮಾಡುತ್ತಿದ್ದ ಅಸ್ತ್ರಗಳಿದ್ದಂತೆ ಈಗ ಉಪಗ್ರಹ ಬಳಸಿಕೊಂಡು ಕೊಟ್ಟ ಆದೇಶಗಳನ್ನು ಶಿರಸಾವಹಿಸಿ ಕಾರ್ಯಾಚರಿಸುವ ಅಸ್ತ್ರಗಳಿವೆ. ಹಾಗಾಗಿ ಶತ್ರುಗಳ ಅಸ್ತ್ರಗಳನ್ನು ಕಟ್ಟಿಹಾಕಬೇಕಾದರೆ ಮೊದಲು ಆ ದೇಶದ ಉಪಗ್ರಹಗಳನ್ನು ನಿಷ್ಕ್ರಿಯಗೊಳಿಸುವುದು ಮುಖ್ಯ. ಬಗಲಲ್ಲಿ ರಷ್ಯ, ಚೀನ, ಪಾಕಿಸ್ಥಾನದಂಥ ಪ್ರಳಯಾಂತಕರನ್ನು ನೆರೆಹೊರೆಯಾಗಿ ಕಟ್ಟಿಕೊಂಡಿರುವ ಭಾರತ ಅಂಥ ತಂತ್ರಜ್ಞಾನವನ್ನು ತನ್ನದಾಗಿಸಿಕೊಳ್ಳದೆ ಸುಮ್ಮನಿರಲು ಸಾಧ್ಯವೆ?
ಹಾಗಂತ ನಾವೇನೂ ಯಾರ ಮೇಲೂ ವಿನಾಕಾರಣ ಜಗಳಕ್ಕೆ ಹೋಗುವುದಿಲ್ಲ. ಅನವಶ್ಯಕವಾಗಿ ಯಾರೊಬ್ಬರ ಮೇಲೆ ಆಕ್ರಮಣ ಮಾಡುವುದಿಲ್ಲ. ಬೇರೆಯವರ ಸಾಮರ್ಥ್ಯಕ್ಕೆ ತಕ್ಕಂತೆ ನಮ್ಮನ್ನು ಅಪ್‌ಡೇಟ್ ಮಾಡಿಕೊಳ್ಳುವುದಷ್ಟೆ ನಮ್ಮ ಕೆಲಸ – ಎಂಬ ಸಂದೇಶ ಭಾರತದಿಂದ ಬಂದಿದೆ. ಮಂಗಳಯಾನ ಮಾಡಿದ ಮೇಲೆ ಜಗತ್ತಿನ ಎಲ್ಲ ದೇಶಗಳೂ ತಂತಮ್ಮ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಹಾರಿಸಲು ಇಸ್ರೋ ನಂಬಿಕಸ್ಥ ಸಂಸ್ಥೆ ಎಂಬ ನಿರ್ಣಯಕ್ಕೆ ಬಂದವು. ಉಪಗ್ರಹಗಳ ಉಡಾವಣೆ ಸೇವೆಯನ್ನು ಹಲವು ದೇಶಗಳಿಗೆ ಕೊಡುವ ಮೂಲಕ ಇಸ್ರೋ ನೂರಾರು ಕೋಟಿ ರುಪಾಯಿಗಳ ಲಾಭ ಗಳಿಸಿತು.
ಇದೀಗ ಉಪಗ್ರಹ ನಿಗ್ರಹ ತಂತ್ರವೂ ನಮ್ಮ ಬಳಿ ಇದೆ ಎಂದ ಮೇಲೆ ಆ ಸೇವೆ ಪಡೆಯುವುದಕ್ಕೂ ಸಾಲುಗಟ್ಟಿ ನಿಲ್ಲುವ ದೇಶಗಳಿರುತ್ತವೆ! ಆ ಮೂಲಕ ಈ ಸಲ ಡಿಆರ್‌ಡಿಓ ಕೂಡ ಮತ್ತಷ್ಟು ಕೋಟಿಗಳ ಲಾಭ ಪಡೆಯಲು ಅವಕಾಶ ಉಂಟು. ಎಲ್ಲಕ್ಕಿಂತ ಮುಖ್ಯವಾಗಿ, ಜಗತ್ತೆಂಬುದು ಎರಡು ಸೂಪರ್ ಪವರ್‌ಗಳ ಆಡುಂಬೊಲವಲ್ಲ; ಇಲ್ಲೀಗ ನಾನೂ ಒಂದು ಸೂಪರ್ ಪವರ್; ನನ್ನನ್ನು ಕಡೆಗಣಿಸಬೇಡಿ ಎಂದು ಭಾರತ ಬೇಡುತ್ತ ಅಲ್ಲ, ಗರ್ವದಿಂದ ಹೇಳುವ ಹಂತಕ್ಕೆ ಬೆಳೆದುನಿಂತಿದೆ ಎಂಬುದನ್ನು ಗಮನಿಸಬೇಕು. ಇದೇ ವೇಗದಲ್ಲಿ ಬೆಳೆದರೆ ಭಾರತ ಕೆಲವೇ ದಶಕಗಳಲ್ಲಿ ವಿಶ್ವಗುರುವಾಗುವುದರಲ್ಲಿ ಅನುಮಾನವಿಲ್ಲ.
ರೋಹಿತ್ ಚಕ್ರತೀರ್ಥ