ಬೆಂಗಳೂರು: ಒಂದೇ ಗಿಡದಲ್ಲಿ ವರ್ಷಪೂರ್ತಿ ಬರೋಬ್ಬರಿ 50 ಕೆ.ಜಿ. ಇಳುವರಿ ನೀಡುವ “ಅರ್ಕಾ ಪೂರ್ಣ’ ಹೆಸರಿನ ಹೊಸ ಸೀಬೆ ತಳಿಯೊಂದನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ಸಂಶೋಧಿಸಿದ್ದು, ವಿದೇಶದಲ್ಲಿ ಈ ತಳಿಗೆ ಭಾರಿ ಬೇಡಿಕೆ ಇರುವುದು ವಿಶೇಷವಾಗಿದೆ.
ಮಧುಮೇಹ, ರಕ್ತದೊತ್ತಡ ನಿಯಂತ್ರಣ, ದೇಹಕ್ಕೆ ಹೇರಳವಾಗಿ ವಿಟಮಿನ್ “ಸಿ’ ಅಂಶ ಪೂರೈಸುವ “ಅರ್ಕಾಪೂರ್ಣ’ ಸೀಬೆಗೆ ದುಬೈ, ಸೌದಿ ಅರೇಬಿಯಾ, ಕುವೈತ್, ಅಬುದಾಬಿ, ಓಮನ್, ಮಸ್ಕತ್ ಸೇರಿದಂತೆ ಹಲವು ಸೌದಿ ರಾಷ್ಟ್ರಗಳು ಖರೀದಿಗೆ ಮುಗಿಬಿದ್ದಿವೆ. ಇದರ ಬೆನ್ನಲ್ಲೇ ರಾಜ್ಯದ ಮೂಲೆ-ಮೂಲೆಗಳಿಂದ ಕೃಷಿಕರು ಐಐಎಚ್‌ಆರ್‌ಗೆ ಭೇಟಿ ಕೊಟ್ಟು “ಅರ್ಕಾಪೂರ್ಣ’ ತಳಿಯ ನೂರಾರು ಸೀಬೆ ಸಸಿ ಖರೀದಿಸಿ ಹತ್ತಾರು ಎಕರೆ ಯಲ್ಲಿ ನಾಟಿ ಮಾಡಿದ್ದಾರೆ. 2 ವರ್ಷದಲ್ಲಿ ಫಸಲಿಗೆ ಬರಲಿರುವ ಈ ಹೊಸ ಸೀಬೆ ತಳಿಯಿಂದ ರೈತರು ಲಕ್ಷಾಂತರ ರೂ. ಆದಾಯಗಳಿಸುವ ನಿರೀಕ್ಷೆಯಲಿದ್ದಾರೆ.
ಅರ್ಕಾಪೂರ್ಣ ಸಂಶೋಧನೆ ಹೇಗೆ?: ಅರ್ಕಾ ಪೂರ್ಣ ಸೀಬೆ ತಳಿಯು ಬಿಳಿ ತಿರುಳು ಹೊಂದಿದೆ. ಅಲಗಾಬಾದ್ ಸಫೇದಾ-ಪರ್ಪಲ್ ಲೋಕಲ್ ತಳಿಗಳನ್ನು ಕ್ರಾಸಿಂಗ್ ಮಾಡಿ ಅದರಿಂದ ಆಯ್ಕೆ ಮಾಡಿ ಅರ್ಕಾಪೂರ್ಣ ಸೀಬೆ ತಳಿ ಸಂಶೋಧಿಸ ಲಾಗಿದೆ. ಅಲಗಾಬಾದ್ ಸಫೇದಾ ತಳಿಯು ಒಳ್ಳೆಯ ರುಚಿ, ಸುವಾಸನೆ, ಅಧಿಕ ಪೋಷಕಾಂಶಗಳ ಪ್ರಮಾಣ ಹೊಂದಿರುವುದರಿಂದ ಈ ಪೇರಳೆ ತಳಿಯಿಂದ ಹಲವು ಸೀಬೆ ತಳಿ ಅಭಿವೃದ್ಧಿ ಪಡಿಸಲಾಗಿದೆ. ಐಐಎಚ್‌ಆರ್‌ನ ವಿಜ್ಞಾನಿಗಳು ಹಣ್ಣಾದ ಅರ್ಕಾ ಸೀಬೆಯ ಒಳಗಿನ ಬೀಜಾಂಶ ತೆಗೆದು, ಪಲ್ಪ್ ಅನ್ನು ತೆಗೆದು ಒಣಗಿಸಿ ಆಸ್ಮೆಟಿಕಲಿ ಡ್ರೈಡ್ ಪ್ರೋಡಾಕ್ಟ್ (ಒಡಿ ಪ್ರಾಡಕ್ಟ್) ಆಗಿ ಮಾರ್ಪ ಡಿಸಿ ಫ್ರೂಟ್ ಬಾರ್ನ್ ಮಾದರಿಯಲ್ಲಿ ಸಂಗ್ರಹಿಸಿ ಡುವಂತೆ ಮಾಡಿದ್ದಾರೆ. ಇದರಿಂದ ಈ ಹಣ್ಣು ಹೆಚ್ಚು ಸಮಯಗಳ ಕಾಲ ಹಾಳಾಗದಂತೆ ಸಂಸ್ಕರಿಸಿಟ್ಟು ಬೇಕಾದಾಗ ಬಳಸಬಹುದು ಎನ್ನುತ್ತಾರೆ “ಅರ್ಕಾಪೂರ್ಣ’ ತಳಿಯ ಸಂಶೋಧಕಿ ವಾಸುಗಿ.
ಒಂದು ಗಿಡದಿಂದ 50 ಕೆ.ಜಿ. ಇಳುವರಿ: “ಅರ್ಕಾಪೂರ್ಣ’ ತಳಿಯ ನಾಟಿ ಮಾಡುವ ವಿಧಾನಗಳ ಕುರಿತು ಐಐಎಚ್‌ಆರ್‌ನಲ್ಲಿ ರೈತರಿಗೆ ಮಾಹಿತಿ ನೀಡಲಾಗುತ್ತದೆ. ಕೃಷಿ ಭೂಮಿಯಲ್ಲಿ ಸಾಲಿಂದ ಸಾಲಿಗೆ 3 ಮೀಟರ್ ಉದ್ದ ಹಾಗೂ 3 ಮೀಟರ್ ಅಗಲದಂತೆ ಒಂದು ಸೀಬೆ ಸಸಿ ನೆಡಬಹುದು. ಮೊದಲ ಒಂದೂವರೆ ವರ್ಷ ಇದಕ್ಕೆ ಗೊಬ್ಬರ, ಸ್ವಲ್ಪ ಪ್ರಮಾಣದ ನೀರು ಹಾಕಿ ಪೋಷಿಸಬೇಕು. ನಾಟಿ ಮಾಡಿದ 2 ವರ್ಷಗಳಲ್ಲಿ ಸೀಬೆಯು ಫಲ ಕೊಡುತ್ತದೆ. 4 ವರ್ಷದ ಬಳಿಕ ಒಂದು ಗಿಡದಿಂದ ಬರೋಬ್ಬರಿ 50 ಕೆ.ಜಿ. ಇಳುವರಿ ತೆಗೆಯಬಹುದಾಗಿದೆ. ಕೆಲ ರೈತರಿಗೆ ಒಪ್ಪಂದದ ಮೇಲೆ ಈಗಾಗಲೇ ಅರ್ಕಾಪೂರ್ಣ ಗಿಡ ಮಾರಾಟ ಮಾಡಲಾಗಿದೆ. ಗಿಡ ಖರೀದಿಸಿರುವ ರೈತರು ಹಲವು ಎಕರೆಗಳಲ್ಲಿ ಸೀಬೆ ಕೃಷಿ ಬೆಳೆಯಲು ಐಐಎಚ್‌ಆರ್‌ನಲ್ಲಿ ಪರವಾನಗಿ ತೆಗೆದುಕೊಂಡಿ ದ್ದಾರೆ. ರೈತರು ಐಐಎಚ್‌ಆರ್‌ಗೆ ಬಂದು ಅರ್ಕಾ ಪೂರ್ಣ ಗಿಡ ಖರೀದಿಸಲು ಅವಕಾಶವಿದೆ.
ಒಂದು ಸೀಬೆ ತೂಕ 250 ಗ್ರಾಂ : ಅರ್ಕಾಪೂರ್ಣ ಸೀಬೆಯು ದುಂಡಾಕಾರದಲ್ಲಿದ್ದು, ತನ್ನ ಯಥೇತ್ಛ ಹೊಳಪಿನಿಂದ ಕಂಗೊಳಿಸುತ್ತದೆ. ಒಂದು ಸೀಬೆ ಹಣ್ಣಿನ ತೂಕವು 200 ನಿಂದ 250 ಗ್ರಾಂವರೆಗೂ ಇರಲಿದೆ. ಈ ಸೀಬೆಯಲ್ಲಿ ಬೀಜಗಳು ಕಡಿಮೆಯಿದ್ದು, ಪಲ್ಪ್ ಹೆಚ್ಚಿರುತ್ತದೆ. ತಿರುಳಿನಲ್ಲೂ ಬೀಜಗಳು ಕಡಿಮೆಯಿರುತ್ತದೆ. ಹೀಗಾಗಿ ಇದು ಉತ್ಕೃಷ್ಟ ಗುಣಮಟ್ಟ ಹೊಂದಿದೆ. “ಅರ್ಕಾಪೂರ್ಣ’ ಸೀಬೆ ಹಣ್ಣಿನ 100 ಗ್ರಾಂನಲ್ಲಿ 190 ರಿಂದ 200 ಮಿಲಿಗ್ರಾಂ ವಿಟಮಿನ್ “ಸಿ’ ಅಂಶ ಇರುವುದು ಐಐಎಚ್‌ಆರ್ ವಿಜ್ಞಾನಿಗಳ ಸಂಶೋಧನೆಯಲ್ಲಿ ದೃಢಪಟ್ಟಿದೆ. ಸಾಮಾನ್ಯವಾಗಿ ದೇಹದಲ್ಲಿ ವಿಟಮಿನ್ “ಸಿ’ ಹೆಚ್ಚಿಸಲು ಪೇರಳೆ ಹಣ್ಣನ್ನು ಬಳಸುತ್ತಾರೆ. ಇದು ಮಧುಮೇಹ, ರಕ್ತದೊತ್ತಡಕ್ಕೆ ರಾಮ ಬಾಣವಾಗಿದೆ.
ವಿದೇಶದಿಂದ “ಅರ್ಕಾಪೂರ್ಣ’ ಸೀಬೆಗೆ ಬೇಡಿಕೆ ವ್ಯಕ್ತವಾಗಿದ್ದು, ರಫ್ತು ಕುರಿತು ಪ್ರಕ್ರಿಯೆ ನಡೆಯುತ್ತಿವೆ. ಇನ್ನೂ ಅಂತಿಮ ಗೊಂಡಿಲ್ಲ. ರೈತರು ಹೆಚ್ಚಿನ ಲಾಭ ನಿರೀಕ್ಷಿಸುವುದರ ಜತೆಗೆ ಜನರ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿ.
-ಸಿ.ವಾಸುಗಿ, ಅರ್ಕಾಪೂರ್ಣ ತಳಿಯ ಸಂಶೋಧಕಿ
-ಅವಿನಾಶ್ ಮೂಡಂಬಿಕಾನ