ಸುಬ್ರಹ್ಮಣ್ಯ: ಸಾಧನೆಗಳ ಹಿಂದೆ ಅವಿರತ ಶ್ರಮಗಳಿರುತ್ತವೆ. ಅವುಗಳು ಸಾರ್ಥಕಗೊಳ್ಳುವುದು ಸಾಧನೆಯ ಶಿಖರಕ್ಕೇರಿದ ಹಂತದಲ್ಲಿ. ಇದೇ ರೀತಿ ವಿದ್ಯಾರ್ಥಿನಿ ಅಭಿಜ್ಞಾ ರಾವ್ ಅವರು ಎಳೆ ವಯಸ್ಸಿನಲ್ಲಿ ನಿರೀಕ್ಷೆಗೂ ಮೀರಿದ ಸಾಧನೆಗೈದಿದ್ದಾಳೆ. ಹೆತ್ತವರಿಗೂ. ಊರಿಗೂ ಕೀರ್ತಿ ತಂದಿದ್ದಾಳೆ. ಆಕೆಯಲ್ಲಿನ ಕ್ರಿಯಾಶೀಲ, ವ್ಯಕ್ತಿತ್ವ ರೂಪಣೆಯಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಉದ್ಯಮಿ ಹಾಗೂ ಕಲಾವಿದ ಯಜ್ಞೆಶ್ ಆಚಾರ್ ಹೇಳಿದರು.
ಎಸೆಸೆಲ್ಸಿ ಪರೀಕ್ಷೆಯಲ್ಲಿ 623 ಅಂಕ ಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನ ತಂದುಕೊಟ್ಟ ಕುಮಾರಸ್ವಾಮಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಬಿ. ಅಭಿಜ್ಞಾ ರಾವ್ ಅವರಿಗೆ ಸುಬ್ರಹ್ಮಣ್ಯ ಜೇಸಿಐ ಕುಕ್ಕೆಶ್ರೀ ವತಿಯಿಂದ ಶುಕ್ರವಾರ ಸುಬ್ರಹ್ಮಣ್ಯ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಮ್ಮಾನ ಕಾರ್ಯ ನೆರವೇರಿಸಿ ಅವರು ಮಾತನಾಡಿದರು.
ಸುಬ್ರಹ್ಮಣ್ಯ ಜೇಸಿಐ ಕುಕ್ಕೆಶ್ರೀ ಅಧ್ಯಕ್ಷ ಮೋನಪ್ಪ ಡಿ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೇಸಿಐ ವಲಯ 15ರ ವಲಯ ಉಪಾಧ್ಯಕ್ಷ ರವಿ ಕಕ್ಕೆಪದವು ಮಾತನಾಡಿ, ಅಭಿಜ್ಞಾ ಅವರ ಸಾಧನೆಯ ಹಿಂದೆ ಅವರ ಹೆತ್ತವರ ಶ್ರಮವೂ ಇದೆ. ಸಾವಿರಾರು ವಿದ್ಯಾರ್ಥಿಗಳಿಗೆ, ಸಮಾಜ ಸೇವಕರಿಗೆ ಬೆಳಕಾಗಿದ್ದ ಆಕೆಯ ತಂದೆ ವಿಠ್ಠಲ್ ರಾವ್ ಅವರು ಇಂದು ನಮ್ಮೊಡನೆ ಇಲ್ಲದಿದ್ದರೂ ಅವರ ಕನಸನ್ನು ನನಸು ಮಾಡುವಲ್ಲಿ ಅಭಿಜ್ಞಾ ಸಾಧನೆ ಮೆಚ್ಚುವಂತದ್ದು ಎಂದರು.
ರಾಷ್ಟ್ರೀಯ ಭಾರತ ಜೇಸಿಸ್‌ನ ಉಪಾಧ್ಯಕ್ಷ ಚಂದ್ರಶೇಖರ ನಾಯರ್ ಮಾತನಾಡಿ, ಅಭಿಜ್ಞಾ ಸಾಧನೆಯಿಂದ ಹೆತ್ತವರಿಗೆ, ಊರಿಗೆ ಜತೆಗೆ ಕಲಿತ ಸಂಸ್ಥೆಗೂ ಹೆಸರು ಬಂದಿದೆ. ಮುಂದೆ ಕೂಡ ಅವರು ಸಾಧನೆ ಮಾಡುವಂತಾಗಬೇಕು. ಆಕೆಯ ಮತ್ತು ಕುಟುಂಬದ ಬದುಕು ಉಜ್ವಲವಾಗಲಿ ಎಂದು ಹಾರೈಸಿದರು.
ಶಾಲಾ ಮುಖ್ಯ ಶಿಕ್ಷಕಿ ವಿದ್ಯಾರತ್ನಾ, ಜೇಸಿಸ್‌ನ ಭಾರತೀ ದಿನೇಶ್ ಅಭಿನಂದಿಸಿ, ಮಾತನಾಡಿದರು. ವಿದ್ಯಾರ್ಥಿನಿ ಆಶಾ ಬಿ. ರಾವ್, ರಕ್ಷಾ ಬಿ. ರಾವ್, ಜೂನಿಯರ್ ಜೇಸಿ ಅಧ್ಯಕ್ಷ ಜೀವನ್ ಉಪಸ್ಥಿತರಿದ್ದರು. ರಾಜೇಶ್ ಮಾವಿನಕಟ್ಟೆ ವಂದಿಸಿದರು. ಆಟೋ ಚಾಲಕ ಮಾಲಕ ಸಂಘದವರು, ಜೇಸಿಐನ ಸದಸ್ಯರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
ಜವಾಬ್ದಾರಿ ಹೆಚ್ಚಿಸಿದೆ
ಸಾಧಕಿ ಅಭಿಜ್ಞಾ ಅವರನ್ನು ಫಲಪುಷ್ಪ, ತಾಂಬೂಲ ಹಾಗೂ ಚಿನ್ನದ ನಾಣ್ಯ ನೀಡಿ ಸಮ್ಮಾನಿಸಿ ಗೌರವಿಸಲಾಯಿತು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಅಭಿಜ್ಞಾ ರಾವ್ ಅವರು ನಿಮ್ಮೆಲ್ಲರ ಅಭಿಮಾನ ಹಾರೈಕೆಯಿಂದ ಅತೀವ ಸಂತಸವಾಗಿದೆ. ಸಮ್ಮಾನ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಮುಂದೆ ಇನ್ನಷ್ಟು ಸಾಧನೆ ಮಾಡುವುದಕ್ಕೆ ಇದು ಪ್ರೇರಣೆ. ಸಹಕರಿಸಿದ ಪ್ರತಿಯೊಬ್ಬರಿಗೂ ಮನದಾಳದ ಕೃತಜ್ಞತೆ ಅರ್ಪಿಸುವುದಾಗಿ ಹೇಳಿದರು.