ಮಂಗಳೂರು: ತುಳು ರಂಗ ಭೂಮಿ ಕ್ಷೇತ್ರಕ್ಕೆ ಮುದ್ದು ಮೂಡುಬೆಳ್ಳೆ ಅವರ ‘ತುಳು ನಾಟಕ ಪರಂಪರೆ’ ಪುಸ್ತಕ ಒಂದು ಆಚಾರ್ಯ ಕೃತಿ ಎಂದು ವಿಶ್ರಾಂತ ಕುಲಪತಿ
ಡಾ| ಬಿ.ಎ. ವಿವೇಕ ರೈ ಅಭಿಪ್ರಾಯಪಟ್ಟರು.
ಮಂಗಳೂರು ಆಕಾಶವಾಣಿಯ ತುಳು ವಿಭಾಗದ ‘ಸ್ವರಮಂಟಮೆ ಪುಸ್ತಕ’ ಬಿಡುಗಡೆಯ ನೇರ ಪ್ರಸಾರದಲ್ಲಿ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಒಂದು ಶತಮಾನದ ರಂಗಭೂಮಿ ಇತಿಹಾಸವನ್ನು ಕಟ್ಟಿಕೊಡುವ ಪ್ರಯತ್ನ ಶ್ಲಾಘನೀಯ ಮತ್ತು ಅಜ್ಞಾತ ಕಲಾವಿದರ, ನಿರ್ದೇಶಕರ, ಪ್ರಸಾದನ ಕಲೆಯ ಪ್ರತಿಭಾವಂತರ ಕುರಿತಾಗಿ ಮಾಹಿತಿ ನೀಡುವ ಈ ಕೃತಿಯು ಒಂದು ಅಪೂರ್ವ ಗ್ರಂಥ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿನೆಮಾ ರಂಗಭೂಮಿ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲಬೈಲ್, ರಂಗಭೂಮಿಯ ರೋಹಿ ದಾಸ್ ಕದ್ರಿ, ಸರೋಜಿನಿ ಶೆಟ್ಟಿ, ವಿ.ಜಿ. ಪಾಲ್, ಮುಂಬಯಿ ರಂಗಭೂಮಿಯ ಸಾ. ದಯಾ, ಆಕೃತಿ ಆಶಯ ಪ್ರಕಾಶನದ ನಾಗೇಶ್ ಕಲ್ಲೂರ್ ಕೃತಿಕಾರ ಮುದ್ದು ಮೂಡುಬೆಳ್ಳೆ ಅವರು ಕೃತಿಯ ಕುರಿತಾಗಿ ಮಾತನಾಡಿದರು.
ಕಾರ್ಯಕ್ರಮ ಮುಖ್ಯಸ್ಥರಾದ ಉಷಾಲತಾ ಸರಪಾಡಿ ಅವರು ಸ್ವಾಗತಿಸಿದರು. ತುಳು ವಿಭಾಗದ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ| ಸದಾನಂದ ಪೆರ್ಲ ನಿರ್ವಹಿಸಿದರು. ಮನೋಹರ್ ಕದ್ರಿ, ಸುಲೋಚನಾ ನವೀನ್, ರೇವತಿ ಪ್ರವೀಣ್, ಮೋಹನದಾಸ್ ಮರೋಳಿ, ಚಂದ್ರಶೇಖರ ಪಾಣಾಜೆ ಮತ್ತಿತರರು ಉಪಸ್ಥಿತರಿದ್ದರು.
ಕೃತಿಯನ್ನು ವಿಮರ್ಶೆ ಮಾಡಿದ ರಘು ಇಡ್ಕಿದು ಅವರು ‘ಮುದ್ದು ಮೂಡುಬೆಳ್ಳೆಯವರ ಅಧ್ಯಯನದಿಂದ ಮೂಡಿಬಂದ ವಿಶಿಷ್ಟ ಕೃತಿ ನಾಟಕ ಪರಂಪರೆಯ ದೊಡ್ಡ ಕೋಶ’ ಎಂದರು.