ಶಿರಸಿ: ಆಚಾರ್ಯ ಶಂಕರ ಭಗವತ್ಪಾದರ ಬಗ್ಗೆ ನಮ್ಮ ದೇಶದಲ್ಲಿ ಉಪೇಕ್ಷೆ ಇದೆ. ತಾಟಸ್ಥ್ಯವೂ ಇದೆ. ಇದು ಸರಿಯಲ್ಲ ಎಂದು ಸೋಂದಾ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ರಾಜ್ಯ ಸರಕಾರ ಹದಿನೈದು ವರ್ಷಗಳ ನಿರಂತರ ಆಗ್ರಹದಿಂದ ಶಂಕರ ಜಯಂತಿಯನ್ನು ದಾರ್ಶನಿಕರ ದಿನ ಎಂದು ಆಚರಿಸುತ್ತಿದೆ. ಇದು ಒಂದಡೆಗೆ ಖುಷಿ ತಂದರೂ ನಮ್ಮಲ್ಲಿ ಶಂಕರರ ಬಗ್ಗೆ, ಅವರ ಶ್ರೀಶೈಲದ ಬಗ್ಗೆ ಇರುವ ಉಪೇಕ್ಷೆ ಬೇಸರ ತರಿಸುತ್ತದೆ ಎಂದ ಅವರು, ರಾಮಕೃಷ್ಣ ಪರಮಹಂಸರೇ ಹಿಂದೆ ಲೋಕ ಶಿಕ್ಷಣ ನೀಡಲು ಭಗವಂತನಿಂದಲೇ ಶಕ್ತಿ ಹಾಗೂ ಪ್ರೇರಣೆ ಪಡೆದು ಬಂದವರು ಎಂದು ಶಂಕರರ ಬಗ್ಗೆ ಹೇಳಿದ್ದಾರೆ. ರಾಮಕೃಷ್ಣರು ಇನ್ನಾರ ಬಗ್ಗೆಯೂ ಈ ಮಾತು ಆಡಿಲ್ಲ. ಅದಕ್ಕೆ ಶಂಕರರ ಮೇರು ಸದೃಶ್ಯ ವ್ಯಕ್ವಿತ್ವ ಕಾರಣ ಎಂದರು.
ಆಚಾರ್ಯರು ಎಂದರೆ ವೇದ ಶಾಸ್ತ್ರಗಳ ಜ್ಞಾನವನ್ನು ಗಳಿಸುತ್ತಲೇ ಇರುವವನು. ಅದನ್ನು ಶಿಷ್ಯರಿಗೆ ಆಚರಿಸಲು ಹೇಳುತ್ತಲೇ ಇರುವವನು ಹಾಗೂ ಸ್ವತಃ ಆಚರಿಸುವವನು. ಅಂತರ ಸಾಧಕರು ಶಂಕರರಾಗಿದ್ದರು ಎಂದೂ ಬಣ್ಣಿಸಿದರು.
ಬೆಂಗಳೂರಿನ ರಾಮಕೃಷ್ಣ ವಿದ್ಯಾರ್ಥಿ ಮಂದಿರದ ಮುಖ್ಯಸ್ಥ ಶ್ರೀ ಸ್ವಾಮಿ ಶ್ರೀ ತದ್ಯುಕ್ತಾನಂದಜಿ ಮಹಾರಾಜ್ ಮಾತನಾಡಿ, ಭಾರತ ದೇಶದ ಸನಾತನ ಸಂಸ್ಕೃತಿ, ಸಂಸ್ಕೃತ ಭಾಷೆಯ ಪುನರುತ್ಥಾನವನು ಆಚಾರ್ಯ ಶಂಕರಾಚಾರ್ಯರು ಮಾಡಿದ್ದರು. ನಾಲ್ಕು ದಿಕ್ಕುಗಳಲ್ಲಿ ಮಠ ಸ್ಥಾಪಿಸಿ ವೇದಗಳು ಸಮಾಜದಿಂದ ಕಣ್ಮರೆಯಾಗದಂತೆ ನೋಡಿಕೊಂಡರು. ಶಂಕರರು 32ವರ್ಷ ಬದುಕಿದರೂ ಸಾವಿರ ವರ್ಷ ಬದುಕಿದರೆನೋ ಎನ್ನುವಷ್ಟು ರೀತಿಯಲ್ಲಿ ಕಾರ್ಯ ಮಾಡಿದರು. ಪೀಠಗಳ ಸ್ಥಾಪನೆಯಿಂದ ಮನುಕುಲಕ್ಕೆ ಬೇಕಾದ ವೇದಗಳು ನಿರಂತರವಾಗಿ ಮುನ್ನಡೆದುಕೊಂಡು ಬಂದವು. ಅವರು ಸ್ಥಾಪಿಸಿದ ವೇದಾಂತ ತತ್ವ 1300ವರ್ಷಗಳ ನಂತರವೂ ದೇಶವಷ್ಟೇ ಅಲ್ಲದೇ ಜಗತ್ತಿನಾದ್ಯಂತ ಐಕ್ಯತೆಗೆ ಪ್ರಸ್ತುತವಾಗಿರುವುದು ಹೆಮ್ಮೆಯ ಸಂಗತಿ ಎಂದರು.
Advertisement
ನಗರದ ಯೋಗ ಮಂದಿರದಲ್ಲಿ ಬುಧವಾರ ಶಂಕರ ಜಯಂತಿ ಹಿನ್ನೆಲೆಯಲ್ಲಿ ನೆಲಮಾವ ವೇದವಿದ್ಯಾ ಸಂಸ್ಕಾರ ಮತ್ತು ಸಂಶೋಧನಾ ಕೇಂದ್ರ ನೀಡುವ ಆಚಾರ್ಯ ಶಂಕರಶ್ರೀ ಪ್ರಶಸ್ತಿಯನ್ನು ವಿದ್ವಾನ್ ಮಂಜುನಾಥ ಭಟ್ಟ ಕೊಡ್ಲೇಕೆರೆ ಅವರಿಗೆ ಪ್ರದಾನ ಮಾಡಿ ಅವರು ಆಶೀರ್ವಚನ ನುಡಿದರು.
Related Articles
Advertisement
ಜಿ.ಎನ್.ಭಟ್ಟ ಹರಿಗಾರ ಪ್ರಸ್ತಾವಿಕ ಮಾತನಾಡಿದರು. ಮಠದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ಇದ್ದರು. ಶ್ರೀ ಸ್ವರ್ಣವಲ್ಲೀ ಸಂಸ್ಥಾನ, ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ, ಯೋಗ ಮಂದಿರ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿತ್ತು.
ಇಂದು ಶಂಕರ ಜಯಂತಿ
ಹೊನ್ನಾವರ: ಹಡಿನಬಾಳದ ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ರಾಗಶ್ರೀ ಸಂಗೀತ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ವಿಷ್ಣುಮೂರ್ತಿ ಸೇವಾ ಮಂಡಳಿ ಇದರ ಆಶ್ರಯದಲ್ಲಿ ಶಂಕರ ಜಯಂತಿ, ಸಂಗೀತ ಕಾರ್ಯಕ್ರಮ ಹಾಗೂ ವಸಂತ ಪೂಜೆ ಕಾರ್ಯಕ್ರಮ ಮೇ 9ರಂದು 5.30ಕ್ಕೆ ನಡೆಯಲಿದೆ. ನಾರಾಯಣ ಶಾಸ್ತ್ರೀ ಜಮಖಂಡಿಯವರು ಉಪನ್ಯಾಸ ನೀಡುವರು. ಅಧ್ಯಕ್ಷತೆಯನ್ನು ಸೀತಾರಾಮ ಹೆಗಡೆ ಹಡಿನಬಾಳ ಹಾಗೂ ಪ್ರೊ| ನಾಗರಾಜ ಹೆಗಡೆ ಅಪಗಾಲ ಭಾಗವಹಿಸುವರು. ನಂತರ ವಸಂತ ಭಟ್ಟ ಗುಂಡಿಬೈಲ್ ಅವರು ಭಜನೆ ಹಾಗೂ ಅಬಂಗ ಗಾಯನವನ್ನು ಪ್ರಸ್ತುತಪಡಿಸುವರು. ತದನಂತರ ರಾಗಶ್ರೀ ವಿದ್ಯಾರ್ಥಿಗಳು ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಸಂಗೀತ ಹಾಗೂ ಶಂಕರ ಸ್ತೋತ್ರ ಪ್ರಸ್ತುತ ಪಡಿಸುವರು. ಇವರಿಗೆ ವಿದ್ವಾನ್ ಎನ್.ಜಿ. ಹೆಗಡೆ ಕಪ್ಪೆಕೇರಿ ಹಾಗೂ ಹರಿಶ್ಚಂದ್ರ ನಾಯ್ಕ ತಬಲ ಹಾಗೂ ಸಂವಾದಿನಿ ಸಾಥ್ ನೀಡಲಿದ್ದಾರೆ. ನಂತರ ಶ್ರೀ ದೇವರ ವಸಂತ ಪೂಜೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.