“ಪಿಆರ್‌ಕೆ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಿಸಿರುವ “ಆಚಾರ್ ಆ್ಯಂಡ್ ಕೋ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಸದ್ದಿಲ್ಲದೆ “ಆಚಾರ್ ಆ್ಯಂಡ್ ಕೋ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೇ ಜು. 28ಕ್ಕೆ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುತ್ತಿದೆ.
ಸಿಂಧು ಶ್ರೀನಿವಾಸಮೂರ್ತಿ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿರುವ “ಆಚಾರ್ ಆ್ಯಂಡ್ ಕೋ’ ಸಿನಿಮಾದಲ್ಲಿ, 1960 ರ ಕಾಲಘಟ್ಟದಲ್ಲಿ ಬೆಂಗಳೂರಿನಲ್ಲಿ ಹಿನ್ನೆಲೆಯಲ್ಲಿ ನಡೆಯುವ ಈ ಕಥೆಯಲ್ಲಿ ಒಂದು ಕುಟುಂಬ ತಮ್ಮ ಕನಸುಗಳನ್ನು ಬೆನ್ನತ್ತುವ ಹಾದಿಯಲ್ಲಿ ಹೇಗೆ ಸವಾಲುಗಳನ್ನು ಎದುರಿಸುತ್ತದೆ, ಸಂಪ್ರದಾಯಗಳನ್ನೂ ಮೀರದೇ ಆಧುನಿಕ ಜಗತ್ತಿನ ಅವಶ್ಯಕತೆಗಳನ್ನೂ ಹೇಗೆ ನಿಭಾಯಿಸಿ ಗೆಲ್ಲುತ್ತದೆ ಎಂಬುದನ್ನು ಎಂಬುದನ್ನು ತೆರೆಮೇಲೆ ಹೇಳಲಾಗಿದೆ. ಅರವತ್ತರ ದಶಕದ ಸಾಮಾಜಿಕ ಮತ್ತು ಸಾಂಪ್ರದಾಯಿಕ ವ್ಯವಸ್ಥೆಯ ಚಿತ್ರಣ, ವಿನೂತನ ಆಲೋಚನೆಯೊಂದನ್ನು ತೆರೆದಿಡುವ ಈ ಸಿನಿಮಾದಲ್ಲಿ ಭಾವುಕತೆಯಷ್ಟೇ ಹಾಸ್ಯವೂ ಇದೆ, ಆಸಕ್ತಿಕರ ಸನ್ನಿವೇಶಗಳ ಜೊತೆಗೆ ಇಡೀ ಸಮಾಜಕ್ಕೆ ಪ್ರೇರಣೆ ನೀಡುವಂಥ ವಿಷಯವಿದೆ ಎನ್ನುವುದು ಚಿತ್ರತಂಡ ಮಾತು.
ಇನ್ನು “ಆಚಾರ್ ಆ್ಯಂಡ್ ಕೋ’ ಸಿನಿಮಾದ ಕಥಾಹಂದರಕ್ಕೆ ತಕ್ಕಂತೆ, ಸೂಕ್ತವಾದ ವಸ್ತ್ರವಿನ್ಯಾಸ ಮತ್ತು ಕಲಾ ನಿರ್ದೇಶನದ ಮೂಲಕ 60 ಮತ್ತು 70 ರ ದಶಕದ ಬೆಂಗಳೂರನ್ನು ತೆರೆಯ ಮೇಲೆ ಸಮರ್ಥವಾಗಿ ಮರುಸೃಷ್ಟಿ ಮಾಡಲಾಗಿದೆ. ಈ ಕುಟುಂಬದ ಕಥೆಯನ್ನು ನೋಡುತ್ತಾ ಪ್ರೇಕ್ಷಕರು ತಮಗೇ ಗೊತ್ತಿಲ್ಲದಂತೆ ಅಂದಿನ ಕಾಲಕ್ಕೆ ರವಾನೆಯಾಗುತ್ತಾರೆ, ಆ ಕುಟುಂಬದ ಪಯಣದಲ್ಲಿ ತಾವೂ ಭಾಗಿಯಾಗುತ್ತಾರೆ ಎಂಬ ಭರವಸೆ ಚಿತ್ರತಂಡದ್ದು.
ಇನ್ನೊಂದು ವಿಶೇಷವೆಂದರೆ, “ಆಚಾರ್ ಆ್ಯಂಡ್ ಕೋ’ ಸಿನಿಮಾದ ಹೆಚ್ಚಿನ ವಿಭಾಗಗಳಲ್ಲಿ ಮಹಿಳೆಯರೇ ಕೆಲಸ ಮಾಡಿದ್ದಾರೆ. ಸಿನಿಮಾದ ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಮುಖ್ಯ ಪಾತ್ರಧಾರಿಗಳು, ಸೌಂಡ್ ಇಂಜಿನಿಯರ್, ವಸ್ತ್ರ ವಿನ್ಯಾಸಕರು, ಕ್ರಿಯಾಶೀಲ ನಿರ್ಮಾಪಕರು ಮತ್ತು ಇನ್ನೂ ಹಲವು ವಿಭಾಗಗಳನ್ನು ಮಹಿಳೆಯರೇ ನಿಭಾಯಿಸಿದ್ದಾರೆ.
ಸದ್ಯ “ಆಚಾರ್ ಆ್ಯಂಡ್ ಕೋ’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ, ಶೀಘ್ರದಲ್ಲಿಯೇ ಸಿನಿಮಾದ ಹಾಡುಗಳು, ಟ್ರೇಲರ್ ಬಿಡುಗಡೆ ಮಾಡುವ ತಯಾರಿಯಲ್ಲಿದೆ. ಒಟ್ಟಾರೆ ಬಹುತೇಕ ಮಹಿಳಾ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ಆಚಾರ್ ಆ್ಯಂಡ್ ಕೋ’ ತೆರೆಮೇಲೆ ಹೇಗಿರಬಹುದು ಎಂಬ ಕುತೂಹಲಕ್ಕೆ ಇದೇ ತಿಂಗಳಾಂತ್ಯಕ್ಕೆ ಉತ್ತರ ಸಿಗಲಿದೆ.