ಬೆಂಗಳೂರು: ಕೆಲಸ ಮಾಡುತ್ತಿದ್ದ ಎಲೆಕ್ಟ್ರಿಕಲ್ ಮಳಿಗೆಯ ಮಾಲೀಕರನ್ನು ನೌಕರನೇ ಬರ್ಬರವಾಗಿ ಕೊಂದು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಚಾಮರಾಜಪೇಟೆ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ಚಾಮರಾಜಪೇಟೆ ನಿವಾಸಿ ಜುಗ್‌ರಾಜ್ ಜೈನ್ (74) ಕೊಲೆಯಾದ ಮಾಲೀಕ. ಕೃತ್ಯ ಎಸಗಿದ ಬಿಜಾರಾಮ್ ಎಂಬಾತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಕೃತ್ಯ ಸಂಬಂಧ ಜುಗ್‌ರಾಜ್ ಜೈನ್ ಪುತ್ರ ಪ್ರಕಾಶ್ ಚಂದ್ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಜುಗ್‌ರಾಜ್ ಜೈನ್ ಚಿಕ್ಕ ಪೇಟೆಯ ಎಸ್‌ವಿಲೇನ್‌ಲ್ಲಿ ದೀಪಂ ಎಲೆಕ್ಟ್ರಿಕಲ್ಸ್ ಅಂಗಡಿ ಇಟ್ಟುಕೊಂಡಿದ್ದಾರೆ. 2ನೇ ಪುತ್ರ ಆನಂದ್ ಕುಮಾರ್, ಸೊಸೆ ಉಷಾರಾಣಿ, ಮೊಮ್ಮಕ್ಕಳ ಜತೆ ಚಾಮರಾಜಪೇಟೆಯಲ್ಲಿರುವ ಕಿಂಗ್ಸ್ ಎನ್‌ಕ್ಲೇವ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಜುಗ್‌ರಾಜ್ ಅಂಗಡಿ ಮತ್ತು ಮನೆ ಕೆಲಸಕ್ಕೆಂದು ಆರು ತಿಂಗಳ ಹಿಂದೆ ರಾಜಸ್ಥಾನದಿಂದ ಬಿಜರಾಮ್‌ನನ್ನು ಕರೆತಂದಿದ್ದರು. ಹೀಗಾಗಿ ಜುಗ್‌ರಾಜ್ ಮನೆಯಲ್ಲಿ ಆರೋಪಿ ವಾಸವಾಗಿದ್ದ.
ಸೋಮವಾರ ಆನಂದ್‌ಕುಮಾರ್ ವ್ಯವಹಾರ ಸಂಬಂಧ ಗೋವಾಕ್ಕೆ ತೆರಳಿದ್ದು, ಸೊಸೆ ಶಿಕಾರಿಪುರದಲ್ಲಿರುವ ತಂದೆಯ ಮನೆಗೆ ಮಕ್ಕಳ ಜತೆ ಹೋಗಿದ್ದರು. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಆರೋಪಿ ಮಂಗಳವಾರ ರಾತ್ರಿ ಅಂಗಡಿಯ ವ್ಯಾಪಾರ ಮುಗಿಸಿ, ಜುಗ್ ರಾಜ್‌ರನ್ನು ಮನೆಗೆ ಕರೆತಂದಿದ್ದಾನೆ. ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಇರುವ ಬಗ್ಗೆ ತಿಳಿದುಕೊಂಡಿದ್ದ ಆತ, ತಡರಾತ್ರಿ ಜುಗ್ ರಾಜ್ ಶೌಚಾಲಯಕ್ಕೆ ಹೋದಾಗ ಅವರ ಬಾಯಿಗೆ ಬಟ್ಟೆ ತುರಕಿ, ಕೈ-ಕಾಲು ಕಟ್ಟಿ ಕುತ್ತಿಗೆಗೆ ಪ್ಲಾಸ್ಟಿಕ್ ದಾರದಿಂದ ಬಿಗಿದು ಕೊಲೆಗೈದಿದ್ದಾನೆ. ಬಳಿಕ ಬೆಡ್‌ರೂಮ್ ನ ಲಾಕರ್‌ನಲ್ಲಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ನಗದು ದೋಚಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ:ಕೆರೆಗಳಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು: ಕೆರೆ ಪರಿಸರ ಸಂರಕ್ಷಣೆಗೆ 5 ಕೋಟಿ ರೂ ವೆಚ್ಚದ ಯೋಜನೆ
ಮೊಮ್ಮಗ ಮನೆಗೆ ಬಂದಾಗ ಕೃತ್ಯ ಬಯಲು
ಬುಧವಾರ ಬೆಳಗ್ಗೆ ಮೊದಲ ಪುತ್ರ ಆನಂದ್‌ಕುಮಾರ್ ತಂದೆಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಂತರ ಅಕ್ಕನ ಮಗ ಪ್ರತೀಕ್‌ಗೆ ಫೋನ್ ಮಾಡಿ ಮನೆ ಬಳಿ ಹೋಗುವಂತೆ ಸೂಚಿಸಿದ್ದಾರೆ. ಆತ ಮನೆಗೆ ಬಂದು ಬಾಗಿಲು ಬಡಿದರೂ ಪ್ರತಿಕ್ರಿಯೆ ಬಂದಿಲ್ಲ. ನಂತರ ಸ್ಥಳಕ್ಕೆ ಬಂದ ಆನಂದ್‌ಕುಮಾರ್ ಹಾಗೂ ಇತರರು ನಕಲಿ ಕೀ ತಯಾರಕನನ್ನು ಕರೆತಂದು ಬಾಗಿಲು ತೆರೆದು ಎಲ್ಲೆಡೆ ಹುಡುಕಾಡಿ, ಬೆಡ್‌ರೂಮ್‌ನ ಶೌಚಾಲಯದಲ್ಲಿ ನೋಡಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಬಳಿಕ ಆರೋಪಿ ಬಿಜಾರಾಮ್‌ಗೆ ಕರೆ ಮಾಡಿದಾಗ ಫೋನ್ ಸ್ವಿಚ್ಚ್ ಆಫ್ ಆಗಿತ್ತು. ಹೀಗಾಗಿ ಆರೋಪಿಯ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.