ಬೆಂಗಳೂರು: ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯಿತ್ ಮೇಲೆ ಮಸಿ ಬಳಿದ ಪ್ರಕರಣದ ತನಿಖೆ ಮುಕ್ತಾಯಗೊಳಿಸಿರುವ ಹೈಗ್ರೌಂಡ್ಸ್ ಠಾಣೆ ಪೊಲೀಸರು 8ನೇ ಎಸಿಎಂಎಂ ನ್ಯಾಯಾಲಯಕ್ಕೆ 450 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ರಾಕೇಶ್ ಟಿಕಾಯಿತ್ ಮೇಲೆ ಮಸಿ ಬಳಿದ ಪ್ರಕರಣದಲ್ಲಿ ಹಿಂದೂ ಪರ ಸಂಘಟನೆಯೊಂದರ ಕಾರ್ಯಕರ್ತ ಭರತ್ ಶೆಟ್ಟಿ ಹಾಗೂ ಆತನ ಸಹಚರ ರಾದ ಶಿವಕುಮಾರ್, ಪ್ರದೀಪ್ ಕುಮಾರ್, ಉಮಾ ದೇವಿ ಆರೋಪಿಗಳಾಗಿದ್ದಾರೆ.
20 ಮಂದಿ ಪ್ರತ್ಯಕ್ಷ ದರ್ಶಿಗಳ ಹೇಳಿಕೆ ಹಾಗೂ 89 ಜನರ ಸಾಕ್ಷ್ಯಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖೀಸಲಾಗಿದೆ. ಹೆಸರು ಮಾಡಬೇಕು ಎಂಬ ಉದ್ದೇಶದಿಂದ ರೈತ ನಾಯಕನಿಗೆ ಮಸಿ ಬಳಿದಿರುವುದಾಗಿ ತಿಳಿಸಿರುವ ಆರೋಪಿಗಳ ಹೇಳಿಕೆಯನ್ನೂ ಉಲ್ಲೇಖೀಸಲಾಗಿದೆ.
ಇದನ್ನೂ ಓದಿ: ಪ್ರವೀಣ್ ಹತ್ಯೆ: 16 ದಿನದಲ್ಲೇ ಪ್ರಮುಖ ಆರೋಪಿಗಳ ಬಂಧನ; ಕುಟುಂಬಸ್ಥರು ಹೇಳಿದ್ದೇನು?
ಟಿಕಾಯಿತ್ ರಾಜ್ಯಕ್ಕೆ ಬರುವುದಕ್ಕೂ ಒಂದು ವಾರ ಮೊದಲು ವಿರೋಧಿಸುವ ಬಗ್ಗೆ ಯೋಜನೆ ರೂಪಿಸಲಾಗಿತ್ತು. ಟೊಮೆಟೋ ಹಾಗೂ ಕೊಳೆತ ಮೊಟ್ಟೆಯನ್ನು ಟಿಕಾಯತ್ ಮೇಲೆ ಎಸೆಯಲು ಆರೋಪಿಗಳು ಮೊದಲು ನಿರ್ಧರಿಸಿದ್ದರು. ಅದು ಸಾಧ್ಯವಾಗದಿದ್ದರೆ ಗಾಂಧಿಭವನದಲ್ಲಿ ಮಸಿ ಬಳಿಯಲು ಸಂಚು ರೂಪಿಸಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖೀಸಲಾಗಿದೆ ಎಂದು ತಿಳಿದು ಬಂದಿದೆ.