Advertisement

Arrested: ಬಿಎಂಟಿಸಿ ಬಸ್‌ ಕಂಡಕ್ಟರ್‌, ಡ್ರೈವರ್‌ಗೆ ಮಚ್ಚು ಬೀಸಿದ್ದ ಆರೋಪಿ ಅಂದರ್‌

12:45 PM Apr 08, 2024 | Team Udayavani |

ಬೆಂಗಳೂರು: ಮಲಗಿದ್ದ ಬಿಎಂಟಿಸಿ ಬಸ್‌ ನಿರ್ವಾಹಕ ಮತ್ತು ಚಾಲಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಕುಮಾರಸ್ವಾಮಿ ಲೇಔಟ್‌ ಬಸ್‌ ನಿಲ್ದಾಣದಲ್ಲಿ ನಡೆದಿದ್ದು, ಕೃತ್ಯ ಎಸಗಿದ್ದ ಆರೋಪಿ ನಂದ ಎಂಬಾತನನ್ನು ಬಂಧಿಸಲಾಗಿದೆ.

Advertisement

ಏ.4ರಂದು ತಡರಾತ್ರಿ ಕುಮಾರಸ್ವಾಮಿ ಲೇಔಟ್‌ ಬಸ್‌ ನಿಲ್ದಾಣದಲ್ಲಿ ನಡೆದಿದೆ. ಹಲ್ಲೆ ಸಂಬಂಧ ಚಾಲಕ ನಾಗೇಂದ್ರ ಎಂಬುವರು ದೂರು ನೀಡಿದ್ದರು.  ಆರೋಪಿ ನಂದನನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ಜಾನ್‌ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.

ಹಲ್ಲೆಗೊಳಗಾದ ಚಾಲಕ ನಾಗೇಂದ್ರ ಎಲೆಕ್ಟ್ರಿಕ್‌ ಬಸ್‌ನಲ್ಲಿ ಏ.4ರಂದು ಕರ್ತವ್ಯ ನಿರ್ವಹಿಸಿದ್ದರು. ತಡರಾತ್ರಿ ಕರ್ತವ್ಯದ ಅವಧಿ ಮುಗಿದಿದ್ದರಿಂದ, ಕುಮಾರಸ್ವಾಮಿ ಲೇಔಟ್‌ ನಿಲ್ದಾಣದಲ್ಲಿ ಬಸ್‌ನಲ್ಲಿಯೇ ಚಾಲಕ ಹಾಗೂ ನಿರ್ವಾಹಕ ಮಲಗಿದ್ದರು. ಇದೇ ವೇಳೆ ಪಾನಮತ್ತರಾಗಿ ನಿಲ್ದಾಣಕ್ಕೆ ಬಂದ ನಂದ ಹಾಗೂ ಸ್ನೇಹಿತರು ಜೋರಾಗಿ ಕೂಗಾಡುತ್ತಿದ್ದರು. ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಳ್ಳುತ್ತಿದ್ದರು.

ಅದನ್ನು ಕೇಳಿಸಿಕೊಂಡಿದ್ದ ಚಾಲಕ ನಾಗೇಂದ್ರ, ಎಚ್ಚರಗೊಂಡು ಬಸ್‌ನಿಂದ ಇಳಿದು ಆರೋಪಿಗಳ ಬಳಿ ಹೋಗಿದ್ದರು. ನಿಲ್ದಾಣದಲ್ಲಿ ಗಲಾಟೆ ಮಾಡಬೇಡಿ. ಹೊರಗೆ ಹೋಗಿ ಎಂದಿದ್ದಾರೆ. ಆಗ ಚಾಲಕ ನಾಗೇಂದ್ರ ವಿರುದ್ಧವೇ ತಿರುಗಿಬಿದ್ದಿದ್ದ ಆರೋಪಿಗಳು, ಇದು ನಮ್ಮ ಪ್ರದೇಶದ ನಿಲ್ದಾಣ. ಅದನ್ನು ಕೇಳಲು ನೀನು ಯಾರು? ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅದರಿಂದ ಮಾತಿಗೆ ಮಾತು ಬೆಳೆದು, ಜಗಳ ಶುರುವಾಗಿತ್ತು. ಆರೋಪಿ ನಂದ, ಚಾಲಕ ನಾಗೇಂದ್ರ ಅವರ ಮುಖಕ್ಕೆ ಗುದ್ದಿ ಹಲ್ಲೆ ಮಾಡಿದ್ದ. ನಂತರ, ಸಮೀಪದಲ್ಲಿದ್ದ ಎಳನೀರು ಅಂಗಡಿಯಿಂದ ಮಚ್ಚು ತಂದು ನಾಗೇಂದ್ರ ಮೇಲೆ ಬೀಸಲು ಮುಂದಾಗಿದ್ದ. ನಾಗೇಂದ್ರ ಅವರ ಕೈ ಅಡ್ಡ ಹಿಡಿದಿದ್ದರು. ಅದರಿಂದಾಗಿ ಕೈ ಹೆಬ್ಬೆರಳಿಗೆ ಪೆಟ್ಟು ಬಿದ್ದಿತ್ತು ಎಂದು ಪೊಲೀಸರು ಹೇಳಿದರು.

ಚಾಲಕನ ರಕ್ಷಣೆಗೆ ಹೋಗಿದ್ದ ನಿರ್ವಾಹಕನಿಗೂ ಮಚ್ಚು ತೋರಿಸಿ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಬಳಿಕ ಚಾಲಕ ಹಾಗೂ ನಿರ್ವಾಹಕ ಸ್ಥಳದಿಂದ ತಪ್ಪಿಸಿಕೊಂಡಿದ್ದರು. ನಾಗೇಂದ್ರ ಅವರನ್ನು ನಿರ್ವಾಹಕನೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ನಾಗೇಂದ್ರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಪೊಲೀಸರು ಹೇಳಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next