ಹುಬ್ಬಳ್ಳಿ: ಪತ್ನಿಯ ಶೀಲ ಶಂಕಿಸಿ ವಾಯರ್‌ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಲ್ಲದೆ ಆತ್ಮಹತ್ಯೆ ಎಂಬಂತೆ ಬಿಂಬಿಸಿದ್ದವನ ಮೇಲಿನ ಆರೋಪ ಸಾಬೀತಾಗಿದೆ ಎಂದು ಸ್ಥಳೀಯ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದ್ದು, ಶಿಕ್ಷೆಯ ಪ್ರಮಾಣ ಕಾಯ್ದಿರಿಸಿದೆ.
ಇಲ್ಲಿನ ಗದಗ ರಸ್ತೆ ಚಾಲುಕ್ಯ ನಗರ ವಿನೂತನ ಕಾಲೋನಿಯ ಕಿಶೋರ ಬೊಮ್ಮಾಜಿ ಎಂಬಾತನ ಮೇಲಿನ ಆರೋಪ ಸಾಬೀತಾಗಿದ್ದು, ಈತ ತನ್ನ ಪತ್ನಿ ಲವೀನಾರನ್ನು ಕೊಲೆ ಮಾಡಿದ್ದ.
ಪ್ರಕರಣ ವಿವರ: ಕಿಶೋರ ಬೊಮ್ಮಾಜಿ 2011ರಲ್ಲಿ ಆಂಧ್ರಪ್ರದೇಶ ಗುಂಟೂರು ಜಿಲ್ಲೆ ತಾಡಪಲ್ಲಿಯ ಲವೀನಾರನ್ನು ವಿವಾಹವಾಗಿದ್ದ. ಪತಿ ಕಿಶೋರ ಸೇರಿದಂತೆ ಅವರ ಕುಟುಂಬದವರೆಲ್ಲ ಲವೀನಾಳ ಮೇಲೆ ಸಂದೇಹಪಟ್ಟು ಕಿರುಕುಳ ಕೊಡಲಾರಂಭಿಸಿದ್ದರು. ಬಳಿಕ ಕಿಶೋರನು ವಿನೂತನ ಕಾಲೋನಿಯಲ್ಲಿ ಬೇರೆ ಮನೆ ಮಾಡಿ ಜೀವನ ನಡೆಸುತ್ತಿದ್ದ. ಅಷ್ಟಾದರೂ ಪತ್ನಿ ಮೇಲಿನ ಸಂದೇಹ ಬಿಡದೆ ಜಗಳ ಮಾಡಿಕೊಂಡಿರುತ್ತಿದ್ದ. ಹೀಗಾಗಿ ಲವೀನಾ ತಂದೆಯೊಂದಿಗೆ ತವರು ಮನೆಗೆ ಹೋಗಿರುತ್ತಾರೆ. ಇನ್ಮುಂದೆ ಹಾಗೆಲ್ಲ ಮಾಡಲ್ಲವೆಂದು ನಂಬಿಸಿ, ಕಿಶೋರ ಮರಳಿ ತನ್ನ ಮನೆಗೆ ಕರೆದುಕೊಂಡು ಬಂದಿರುತ್ತಾನೆ. ಪತ್ನಿಯು ತನ್ನ ತಂದೆ-ತಾಯಿ ಜತೆ ಮಾತನಾಡಬಾರದೆಂದು ಮೊಬೈಲ್ ಸಹ ಕೊಟ್ಟಿರುವುದಿಲ್ಲ. ಈ ನಡುವೆ ಅದೇ ಪ್ರದೇಶದ ಪರಿಚಿತನು ಪಾಲಕರೊಂದಿಗೆ ಮಾತನಾಡಲೆಂದು ಲವೀನಾಗೆ ಮೊಬೈಲ್ ಕೊಟ್ಟಿರುತ್ತಾನೆ. ಇದು ಕಿಶೋರಗೆ ಗೊತ್ತಾಗಿ ಪತ್ನಿ ಜತೆ ಜಗಳ ತೆಗೆದಿದ್ದಾನೆ. ಇದೇ ವಿಚಾರವಾಗಿ ಸಿಟ್ಟಾಗಿ 2018ರ ಮಾರ್ಚ್ 23ರಂದು ವಾಯರ್‌ನಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಇದನ್ನು ಮುಚ್ಚಿ ಹಾಕಲು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂಬಂತೆ ದೃಶ್ಯ ಸೃಷ್ಟಿಸಿ ಫ್ಯಾನ್‌ಗೆ ದುಪ್ಪಟ್ಟಾ ಹಾಕಿ ಪತ್ನಿಯನ್ನು ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಕೊಲೆ ಮಾಡಲಾಗಿದೆ ಎಂದು ಸಂಶಯ ವ್ಯಕ್ತಪಡಿಸಿ ಲವೀನಾರ ಪಾಲಕರು ಕೇಶ್ವಾಪುರ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಅಂದಿನ ಇನ್‌ಸ್ಪೆಕ್ಟರ್ ಬಿ.ಆರ್. ಗಡ್ಡೇಕರ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ದೇವೆಂದ್ರಪ್ಪ ಬಿರಾದಾರ ಅವರು ಕಿಶೋರನ ಮೇಲಿನ ಆರೋಪ ಸಾಬೀತಾಗಿದೆ ಎಂದು ಪರಿಗಣಿಸಿ ಶನಿವಾರ ಆದೇಶಿಸಿದ್ದಾರೆ. ಶಿಕ್ಷೆ ಪ್ರಮಾಣವನ್ನು ಮಾ.30ರ ವರೆಗೆ ಕಾಯ್ದಿರಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಗಿರಿಜಾ ಎಸ್. ತಮ್ಮಿನಾಳ ವಾದ ಮಂಡಿಸಿದ್ದರು.