ಹರಿದ್ವಾರ: ದೇಶದ ಜನರು ವಸಾಹತುಶಾಹಿ ಮನಸ್ಥಿತಿಯಿಂದ ಹೊರಬರಬೇಕಾಗಿದೆ ಎಂದು ಹೇಳಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ನಮ್ಮದೇ ದೇಶದ ಸ್ವಂತ ಗುರುತಿಸುವಿಕೆಯ ಬಗ್ಗೆ ಹೆಮ್ಮೆ ಪಡುವುದನ್ನು ಕಲಿಯಬೇಕು ಎಂದರು.
ಇದನ್ನೂ ಓದಿ:ಪೂರ್ವನಿಯೋಜಿತ ಕೊಲೆ; ಆಸ್ತಿಗಾಗಿ ಮಗ, ಸೊಸೆ, ಮೊಮ್ಮಕ್ಕಳನ್ನು ಜೀವಂತ ದಹನ ಮಾಡಿದ ವೃದ್ಧ
75ನೇ ವರ್ಷದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮೆಕಾಲೆ ಪದ್ಧತಿಯ ಶಿಕ್ಷಣವನ್ನು ತಿರಸ್ಕರಿಸಬೇಕು ಎಂದು ನಾಯ್ಡು ಕರೆ ನೀಡಿದ್ದು, ದೇಶದಲ್ಲಿ ವಿದೇಶಿ ಭಾಷೆಯ ಶಿಕ್ಷಣವನ್ನು ಹೇರಿಕೆ ಮಾಡುವ ಮೂಲಕ ಸೀಮಿತಗೊಳಿಸಲಾಗಿದೆ ಎಂದು ಹೇಳಿದರು.
“ನಾವು ಶಿಕ್ಷಣವನ್ನು ಕೇಸರಿಕರಣಗೊಳಿಸುತ್ತಿದ್ದೇವೆ ಎಂದು ಆರೋಪಿಸುತ್ತಾರೆ. ಆದರೆ ಕೇಸರಿಯಲ್ಲಿ ತಪ್ಪೇನಿದೆ? ಸರ್ವೇ ಭವಂತುಃ ಸುಖಿನೋ (ಎಲ್ಲರೂ ಸಂತೋಷದಿಂದಿರಲಿ) ಮತ್ತು ವಸುಧೈವ ಕುಟುಂಬಕಂ (ಇಡೀ ವಿಶ್ವವೇ ಒಂದು ಕುಟುಂಬ) ಎಂಬುದು ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ತತ್ವಶಾಸ್ತ್ರಗಳು. ಇವು ಇಂದಿಗೂ ಭಾರತದ ವಿದೇಶಾಂಗ ನೀತಿಯ ಮಾರ್ಗದರ್ಶಿ ಸೂತ್ರಗಳಾಗಿವೆ ಎಂದು ನಾಯ್ಡು ತಿಳಿಸಿದರು.
ನಾವು ನಮ್ಮದೇ ಸಂಸ್ಕೃತಿ, ಸಂಪ್ರದಾಯವನ್ನು ಕಲಿಯಬೇಕಾಗಿದೆ. ಇದರಿಂದ ನಮ್ಮ ದೇಶದ ಅಭಿವೃದ್ದಿಯಾಗಲಿದೆ. ವಿದೇಶಿ ಭಾಷೆಯ ಮಾಧ್ಯಮವನ್ನು ನಮ್ಮ ಶಿಕ್ಷಣದ ಮೇಲೆ ಹೇರುವ ಮೂಲಕ ಸಮಾಜದ ಒಂದು ವರ್ಗಕ್ಕೆ ಮಾತ್ರ ಸೀಮಿತಗೊಳಿಸಿದಂತಾಗುತ್ತದೆ. ಅಲ್ಲದೇ ಬಹುಸಂಖ್ಯೆಯ ಜನರು ಶಿಕ್ಷಣದ ಹಕ್ಕಿನಿಂದ ವಂಚಿತರಾಗುತ್ತಾರೆ ಎಂದು ಹರಿದ್ವಾರದ ದೇವ ಸಂಸ್ಕೃತಿ ವಿಶ್ವ ವಿದ್ಯಾಲಯದಲ್ಲಿ ಮಾತನಾಡುತ್ತ ತಿಳಿಸಿರುವುದಾಗಿ ವರದಿ ಹೇಳಿದೆ.