ಬೆಂಗಳೂರು: ಅಪರಾಧ ಪ್ರಕರಣ ಸಂಬಂಧ ಆರೋಪಿಗಳಿಂದ ವಶಕ್ಕೆ ಪಡೆದುಕೊಂಡಿದ್ದ ಮಾಲುಗಳನ್ನು ಹಸ್ತಾಂತರಿಸದೆ ನಿರ್ಲಕ್ಷ್ಯ ತೋರಿದ ಇನ್‌ಸ್ಪೆಕ್ಟರ್ ವಿರುದ್ಧ ಜೆ.ಪಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೆ.ಪಿ.ನಗರ ಪೊಲೀಸ್ ಠಾಣೆಯ ಹಾಲಿ ಇನ್‌ಸ್ಪೆಕ್ಟರ್ ಟಿ.ಎಸ್. ರಾಧಾಕೃಷ್ಣ ಅವರು ಈ ಹಿಂದೆ ಇದೇ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇನ್‌ಸ್ಪೆಕ್ಟರ್ ಎಂ.ಎಸ್. ಹಿತೇಂದ್ರ ವಿರುದ್ಧ ದೂರು ನೀಡಿದ ಮೇರೆಗೆ ಐಪಿಸಿ 409ರಡಿ ಎಫ್ಐಆರ್ ದಾಖಲಾಗಿದೆ.
ಪ್ರಸ್ತಕ ಸಿಐಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿತೇಂದ್ರ 2016ರಿಂದ 2019ರವರೆಗೆ ಜೆ.ಪಿ.ನಗರ ಠಾಣೆಯಲ್ಲಿ ಪಿಐ ಆಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ನಡೆದ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿ ಅವರಿಂದ ವಶಕ್ಕೆ ಪಡೆದುಕೊಂಡಿರುವ ಚಿನ್ನಾಭರಣ, ನಗದು ಹಾಗೂ ಇತರೆ ದಾಖಲಾತಿಗಳ ಬಗ್ಗೆ ತನಗೆ ಹಸ್ತಾಂತರಿಸಿಲ್ಲ. ಈ ಬಗ್ಗೆ ಹಲವು ಬಾರಿ ಮೌಖೀಕವಾಗಿ ಸೂಚಿಸಿದರೂ ಯಾವುದೇ ಪ್ರಯೋಜನವಾಗದಿದ್ದರಿಂದ ಮೇಲಧಿಕಾರಿಗಳ ಮೂಲಕ ನೋಟಿಸ್ ನೀಡಲಾಗಿತ್ತು. ಆದರೂ ಆರೋಪಿತ ಪಿಐ ಸೂಕ್ತ ಸಮಜಾಯಿಷಿ ನೀಡಿಲ್ಲ. ಅಲ್ಲದೆ, ವರ್ಗಾವಣೆಯಾಗಿ ಹೋಗುವಾಗ ಸಂಬಂಧಿತ ಅಧಿಕಾರಿಗಳಿಗೆ ಅಮಾನತುಪಡಿಸಿಕೊಂಡು ಮಾಲುಗಳನ್ನು ನೀಡದೆ ದುರುಪಯೋಗಪಡಿಸಿಕೊಂಡಿ¨ªಾರೆ ಎಂಬುದು ಕಂಡು ಬಂದಿದೆ ಎಂದು ಇನ್‌ಸ್ಪೆಕ್ಟರ್ ರಾಧಾಕೃಷ್ಣ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ಸುಮಾರು 25 ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕರಣಗಳ ಕಡತಗಳು, ಪ್ರಮುಖ ದಾಖಲಾತಿಗಳು, ಆರೋಪಿಗಳಿಂದ ವಶಕ್ಕೆ ಪಡೆದುಕೊಂಡ ನಗದು ಹಾಗೂ ಕೆಲ ವಸ್ತುಗಳನ್ನು ನೀಡದಿದ್ದರಿಂದ ಆರೋಪಿತ ಆಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೊಕೇಶ್ ಜಗಲಾಸರ ತಿಳಿಸಿದ್ದಾರೆ.