ಬಜಪೆ: ಮೂಡುಪೆರಾರ, ಕೊಂಪದವಿನಲ್ಲಿ ಮನೆಯಿಂದ ಅಡಿಕೆ ಹಾಗೂ ನಗದು ಕಳವು ಮಾಡಿ ಜನರ ನಿದ್ದೆಗೆಡಿಸಿದ್ದ ಮೂಡುಪೆರಾರ ಗ್ರಾಮದ ಮಿತ್ತಕೊಳಪಿಲದ ನಿವಾಸಿ ಪ್ರತಾಪ್‌ನನ್ನು ಬಜಪೆ ಪೊಲೀಸ್ ಠಾಣೆಯ ನಿರೀಕ್ಷಕರಾದ ಸಂದೀಪ್ ಜಿ.ಎಸ್. ನೇತೃತ್ವದ ಅಪರಾಧ ಪತ್ತೆ ವಿಭಾಗದ ತಂಡ ಫೆ.21ರಂದು ಸಂಜೆ 5ಕ್ಕೆ ಬಜಪೆ ಬಸ್ ನಿಲ್ದಾಣದ ಬಳಿಯಿಂದ ಬಂಧಿಸಿದೆ.
ಬಂಧಿತನಿಂದ 10 ಸಾ. ರೂಪಾಯಿ, ಸುಮಾರು 1 ಲಕ್ಷ ರೂ. ಮೌಲ್ಯದ 4 ಗೋಣಿ ಚೀಲ ಸುಲಿದ ಅಡಿಕೆ, ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಆಟೋ ರಿಕ್ಷಾ ಮತ್ತು ಇತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿ ವಿರುದ್ದ ಬ್ಯಾಟರಿ ಕಳವು ಸಂಬಂಧಿಸಿ 2 ಪ್ರತ್ಯೇಕ ಪ್ರಕರಣಗಳೂ ಬಜಪೆ ಠಾಣೆಯಲ್ಲಿ ದಾಖಲಾಗಿವೆ.
ಈತನು ಮೂಡುಪೆರಾರ ಪರಿಸರದ ಮನೆಗಳಿಗೆ ನುಗ್ಗಿ ಕಳವು ಮಾಡಿ ಜನರ ನಿದ್ದೆಗೆಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಫೆ.13ರಂದು ಮಧ್ಯಾಹ್ನ ಮೂಡುಪೆರಾರದ ಮಿತ್ತಕೊಳಪಿಲದ ದೇವಸ ಎಂಬಲ್ಲಿರುವ ಜನಾರ್ದನ ಗೌಡ ಅವರ ಮನೆಯಿಂದ 40 ಸಾ. ರೂಪಾಯಿ ಕಳವಾಗಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ತನಿಖೆ ನಡೆಸಿದ ಸಂದೀಪ್ ಜಿ.ಎಸ್. ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಸಫಲವಾಗಿದೆ. ಬಂಧಿತನು ಜನಾರ್ದನ ಗೌಡರ ಮನೆಯಿಂದ ಕಳವು ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ಜತೆಗೆ 2023ರ ಸೆಪ್ಟಂಬರ್‌ನಲ್ಲಿ ಕೊಂಪದವು ನೆಲ್ಲಿಗುಡ್ಡೆಯ ನಿವಾಸಿ ಗೋವಿಂದ ಗೌಡ ಅವರ ಮನೆಯಿಂದ 4 ಗೋಣಿ ಸುಲಿದ ಅಡಿಕೆಯನ್ನು ಕದ್ದಿರುವುದಾಗಿ ಮತ್ತು ಊರಿನಲ್ಲಿ ಕೆಲವು ಚಿಕ್ಕಪುಟ್ಟ ಕಳ್ಳತನ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ.
ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ ಮಾರ್ಗದರ್ಶನ, ಡಿಸಿಪಿಯವರಾದ ಸಿದ್ದಾರ್ಥ ಗೋಯೆಲ್ ಮತ್ತು ದಿನೇಶ್ ಕುಮಾರ್ ಅವರ ನಿರ್ದೇಶನದಂತೆ, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿಯವರಾದ ಮನೋಜ್ ಕುಮಾರ್ ಮತ್ತು ಬಜಪೆ ಪೊಲೀಸ್ ಠಾಣೆಯ ನಿರೀಕ್ಷಕರಾದ ಸಂದೀಪ್ ಜಿ.ಎಸ್. ಅವರ ನೇತೃತ್ವದಲ್ಲಿ ಬಜಪೆ ಠಾಣೆಯ ಎಸ್‌ಐಯವರಾದ ರೇವಣ ಸಿದ್ದಪ್ಪ, ಗುರಪ್ಪ ಕಾಂತಿ, ರವಿ, ಎಎಸ್‌ಐ ರಾಮ ಪೂಜಾರಿ ಮೇರೆಮಜಲು, ರಶೀದ್ ಶೇಖ್, ಸುಜನ್, ದೇವಪ್ಪ, ಬಸವರಾಜ್ ಪಾಟೀಲ್, ಕೆಂಚಪ್ಪ, ಚಿದಾನಂದ, ಪ್ರಕಾಶ್, ದುರ್ಗಾ ಪ್ರಸಾದ್, ಜಗದೀಶ್, ರವಿಕುಮಾರ್, ದಯಾನಂದ, ಮಧು, ಅನಿಲ್ ಕುಮಾರ್, ವಿರೂಪಾಕ್ಷ, ಭರಮಪ್ಪ ಮತ್ತು ನಗರ ಕಂಪ್ಯೂಟರ್ ವಿಭಾಗದ ಮನೋಜ್ ಅವರು ಆರೋಪಿಯ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದರು.