Advertisement

ಆಯುಕ್ತರ ವಿರುದ್ದ ಕರ್ನಾಟಕ ಕೊಳಚೆ ಕಾಯ್ದೆ ಉಲ್ಲಂಘನೆ ಆರೋಪ

05:15 PM Jun 16, 2022 | Shwetha M |

ವಿಜಯುಪುರ: ಕರ್ನಾಟಕ ಕೊಳಚೆ ಪ್ರದೇಶಗಳ ಅಧಿನಿಯಮ ಉಲ್ಲಂಘಿಸುತ್ತಿರುವ ಸ್ಲಂ ಬೋರ್ಡ್‌ ಆಯುಕ್ತರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸ್ಲಂ ನಿವಾಸಿಗಳು ನಗರದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

Advertisement

ವಿಜಯಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ, ಸ್ಲಂ ಜನಾಂದೋಲನ ಕರ್ನಾಟಕ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆ ಉದ್ದೇಶಿಸಿ ವಿಜಯಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟದ ಕಾರ್ಯದರ್ಶಿ ಸಿದ್ದಲಿಂಗ ಹೀರೆಮಠ ಮಾತನಾಡಿ, 1973ರ ಸ್ಲಂ ಕಾಯ್ದೆ ಮತ್ತು 2016ರಲ್ಲಿ ಸ್ಲಂ ನೀತಿ ಜಾರಿಯಾಗಿದೆ. ಆದರೂ ರಾಜ್ಯದಲ್ಲಿ ಅತಿ ವೇಗವಾಗಿ ಸ್ಲಂಗಳ ಸಂಖ್ಯೆ ಹಾಗೂ ಸ್ಲಂ ನಿವಾಸಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ. ಸರ್ಕಾರ ರೂಪಿಸಿರುವ ಕಾಯ್ದೆ ಉಲ್ಲಂಘನೆಯೇ ಇದಕ್ಕೆ ಪ್ರಮುಖ ಕಾರಣ ಎಂದು ದೂರಿದರು.

ಸ್ಲಂ ನಿವಾಸಿಗಳು ನಗರ ಪ್ರದೇಶದಲ್ಲಿ ಘನತೆಯಿಂದ ಬದುಕಲೆಂದೇ ಸರ್ಕಾರ ಕಾಯ್ದೆ ಜಾರಿಗೆ ತಂದಿದೆ. 1973ರ ಸ್ಲಂ ಕಾಯ್ದೆ ಅನ್ವಯ ರಾಜ್ಯದಲ್ಲಿ 2708 ಕೊಳಚೆ ಪ್ರದೇಶಗಳು ಕಲಂ-3ರಲ್ಲಿ ಘೋಷಿಸಿ ಮೂಲ ಸೌಲಭ್ಯಗಳು, ವಸತಿ, ಕೌಶಲ್ಯಾಭಿವೃದ್ಧಿ, ಮಹಿಳೆ-ಮಕ್ಕಳು ಮತ್ತು ವಯೋವೃದ್ಧರ ಸುರಕ್ಷತೆ ಹಾಗೂ ಅಭಿವೃದ್ಧಿಗಳನ್ನು ವಸತಿ ಇಲಾಖೆ ಅಧೀನದಲ್ಲಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಅನುಷ್ಠಾನ ಮಾಡುತ್ತಿದೆ ಎಂದು ವಿವರಿಸಿದರು.

709 ಕೊಳಚೆ ಪ್ರದೇಶಗಳು ಖಾಸಗಿ ಮಾಲೀಕತ್ವದಲ್ಲಿದ್ದು. ಖಾಸಗಿ ಮಾಲೀಕತ್ವದಲ್ಲಿರುವ ಸ್ಲಂಗಳನ್ನು 1973 ಸ್ಲಂ ಕಾಯ್ದೆ ಕಲಂ 17ರಲ್ಲಿ ಸ್ವಾ ಧೀನ ಮಾಡಿಕೊಂಡು ಅಭಿವೃದ್ಧಿಗೊಳಿಸಲು ಅವಕಾಶ ಕಲ್ಪಿಸಿದೆ. ಸ್ಲಂ ಕಾಯ್ದೆ ಕಲಂ 3ರಲ್ಲಿ ಕೊಳಚೆ ಪ್ರದೇಶಗಳ ಘೋಷಣೆಯಲ್ಲಿ ಉಲ್ಲೇಖೀಸಿರುವಂತೆ ಯಾವುದೇ ಬಗೆಯಲ್ಲಿ ಮನುಷ್ಯ ವಾಸಕ್ಕೆ ಯೋಗ್ಯವಲ್ಲ. ಮನುಷ್ಯ ವಾಸಕ್ಕೆ ಪ್ರದೇಶವು ತಗ್ಗಿನಲ್ಲಿರುವುದು, ಅನೈರ್ಮಲ್ಯೀಕರ, ಹೊಲಸು, ಮಿತಿ ಮೀರಿದ ಸಂದಣಿ ಇದೆ. ಕಟ್ಟಡಗಳ ಜೀರ್ಣಾವಸ್ಥೆ, ಜನ ನಿಬಿಡತೆ, ದೋಷಪೂರ್ಣ ವ್ಯವಸ್ಥೆ ಮತ್ತು ಬೀದಿಗಳು ಇಕ್ಕಟ್ಟಾಗಿರುವುದು, ವಾಯು ಸಂಚಾರ, ದೀಪ ಅಥವಾ ನೈರ್ಮಲ್ಯ ಸೌಲಭ್ಯಗಳ ಅಭಾವ ಅಥವಾ ಯಾವುದೇ ಸುರಕ್ಷತೆ ಇಲ್ಲದಿರುವ ಮತ್ತು ಆರೋಗ್ಯಕ್ಕೆ ಹಾನಿಕರವೆಂದು ಮನದಟ್ಟಾದಲ್ಲಿ ಅಂಥ ಪ್ರದೇಶವನ್ನು ಕೊಳಚೆ ಪ್ರದೇಶವೆಂದು ಘೋಷಿಸಬಹುದಾಗಿದೆ ಎಂದು ವಿವರಿಸಿದರು.

ಆದರೆ 2021ರಿಂದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಆಯುಕ್ತರಾಗಿ ಬಂದಿರುವ ಬಿ.ವೆಂಕಟೇಶ್‌ ಮೌಖೀಕವಾಗಿ ಮತ್ತು ವಿಡಿಯೋಕಾನ್ಪರೆನ್ಸ್‌ ಮೂಲಕ ಸಂಬಂಧಪಟ್ಟ ಇಲಾಖೆಯ ಎಂಜಿನಿಯರ್‌ ಮತ್ತು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿ ಖಾಸಗಿ ಮಾಲೀಕತ್ವದಲ್ಲಿರುವ ಕೊಳಚೆ ಪ್ರದೇಶಗಳನ್ನು ಘೋಷಣೆ ಮಾಡದಂತೆ ತಿಳಿಸಿದ್ದಾರೆ ಎಂದು ವಿವರಿಸಿದರು.

Advertisement

ಹಾಗಾಗಿ ರಾಜ್ಯದಲ್ಲಿ 2 ವರ್ಷದಿಂದ ಖಾಸಗಿ ಮಾಲೀಕತ್ವದಲ್ಲಿರುವ ನೂರಾರೂ ಸ್ಲಂಗಳನ್ನು ಘೋಷಿಸಿಲ್ಲ. ಇದರಿಂದ ಸಂವಿಧಾನ ಸ್ಲಂ ನಿವಾಸಿಗಳಿಗೆ ನೀಡಿದ್ದ ವಾಸಿಸುವ ಮತ್ತು ಬದುಕುವ ಹಕ್ಕಿನ ಉಲ್ಲಂಘನೆ ಆಗುತ್ತಿದೆ. ಸದರಿ ಕಾಯ್ದೆ ಮತ್ತು ಕಾನೂನು ಧಿಕ್ಕರಿಸಿ ನಿರಂಕುಶತ್ವ ಧೋರಣೆ ತೋರಿರುವ ಈಗಿನ ಮಂಡಳಿ ಆಯುಕ್ತರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಕೃಷ್ಣಾ ಜಾಧವ, ಎಂ.ಸಿ. ಕಮ್ಮಾರ, ರೇಷ್ಮಾ ಪಡಗಾನೂರ, ರುಕ್ಮುದ್ದಿನ್‌ ತೊರವಿ, ಲಾಳೆಮಶಾಕ್‌ ಕುಂಟೋಜಿ, ಶಾಬೇರಾ ಬಸರಗಿ, ರಫೀಕ್‌ ಮನಗೂಳಿ, ಮೀನಾಕ್ಷಿ ಕಾಲೆಬಾಗ, ಲಾಲಸಾಬ ಜಾತಗರ, ಅಲ್ಲಾಭಕ್ಷ ಕನ್ನೂರ, ಶಕೀಲಾ ಕೆರೂರ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next