Advertisement

Accused of Corruption: ಎಂ.ಬಿ.ಪಾಟೀಲ್‌ ವಿರುದ್ಧವೂ ಖಾಸಗಿ ದೂರು

12:35 AM Aug 24, 2024 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದ ಬಿಸಿ ಏರುತ್ತಿರುವುದರ ಮಧ್ಯೆಯೇ ಅವರ ಸಂಪುಟ ಸಹೋದ್ಯೋಗಿ, ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ವಿರುದ್ಧವೂ ಈಗ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದು, ಅಭಿಯೋಜನೆಗೆ ಪೂರ್ವಾನುಮತಿ ಕೋರಿ ಆರ್‌ಟಿಐ ಹೋರಾಟಗಾರ ದಿನೇಶ್‌ ಕಲ್ಲಹಳ್ಳಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

Advertisement

ಕೆಐಎಡಿಬಿ ಕೈಗಾರಿಕಾ ಪ್ರದೇಶಗಳಲ್ಲಿ ನಾಗರಿಕ ಸೌಲಭ್ಯಗಳಿಗೆ (ಸಿಎ) ಮೀಸಲಿಟ್ಟ ನಿವೇಶನಗಳನ್ನು ಪಾರದರ್ಶಕವಾಗಿ ಹಂಚಿಕೆ ಮಾಡದೆ ಸಾಮಾನ್ಯ ದರದಲ್ಲಿ ಬೇಕಾಬಿಟ್ಟಿ ಹಂಚಿಕೆ ಮಾಡುವ ಮೂಲಕ ಎಂ.ಬಿ.ಪಾಟೀಲ್‌ ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿದ್ದಾರೆ. ಈ ಹಂಚಿಕೆಯಲ್ಲಿ ಅಧಿ ಕಾರ ದುರ್ಬಳಕೆ, ಕ್ರಿಮಿನಲ್‌ ಒಳಸಂಚಿನ ಮೂಲಕ ಭಾರೀ ಪ್ರಮಾಣದ ಭ್ರಷ್ಟಾಚಾರ ಎಸಗಲಾಗಿದೆ. ಹೀಗಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್‌ 218, ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ 17(ಎ), 19ರ ಅನ್ವಯ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಅಭಿಯೋಜನೆ ನಡೆಸಲು ಮಂಜೂರಾತಿ ನೀಡುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ.

ಈ ಸಂಬಂಧ ದಿನೇಶ್‌ ಕಲ್ಲಹಳ್ಳಿ ರಾಜಭವನಕ್ಕೆ ತೆರಳಿ, ಆರ್‌ಟಿಐ ಮೂಲಕ ಪಡೆದ ದಾಖಲೆ ಸಮೇತ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಇಡಿ ರಾಜ್ಯಾದ್ಯಂತ ಸುಮಾರು 95 ಎಕರೆಯಷ್ಟು ಜಾಗ ಈ ಮೂಲಕ ಕಡಿಮೆ ದರದಲ್ಲಿ ಖಾಸಗಿಯವರಿಗೆ ಸ್ವೇಚ್ಛೆಯಿಂದ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಸಿಎಂಗೂ ದೂರು ನೀಡಿದ್ದೆ
ದೂರಿನ ಸಂಬಂಧ ಉದಯವಾಣಿ ಜತೆ ಮಾತನಾಡಿದ ದಿನೇಶ್‌ ಕಲ್ಲಹಳ್ಳಿ, ಇದೊಂದು ಬೃಹತ್‌ ಹಗರಣವಾಗಿದ್ದು ಎಲ್ಲ ದಾಖಲೆ ಪತ್ರಗಳನ್ನು ಆರ್‌ಟಿಐ ಮೂಲಕ ಪಡೆದಿದ್ದೇನೆ. ಈ ಬಗ್ಗೆ ಎರಡು ತಿಂಗಳ ಹಿಂದೆ ಸಿದ್ದರಾಮಯ್ಯ ಅವರಿಗೆ ದೂರು ನೀಡಲಾಗಿತ್ತು. ರಾಹುಲ್‌ ಗಾಂಧಿಯವರಿಗೂ ಮಾಹಿತಿ ಕಳುಹಿಸಲಾಗಿತ್ತು. ಆದರೆ ಯಾರೂ ಸೂಕ್ತ ತನಿಖೆ ನಡೆಸಿಲ್ಲ. ಹೀಗಾಗಿ ಸಕ್ಷಮ ಪ್ರಾಧಿಕಾರವಾದ ರಾಜ್ಯಪಾಲರಿಗೆ ದೂರು ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಪಾರದರ್ಶನವಾಗಿಯೇ ನಿವೇಶನ ಹಂಚಿಕೆ: ಸಚಿವ ಎಂ.ಬಿ. ಪಾಟೀಲ್‌
ದಿನೇಶ್‌ ಕಲ್ಲಹಳ್ಳಿ ರಾಜ್ಯಪಾಲರಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಸುದೀರ್ಘ‌ ಸ್ಪಷ್ಟನೆ ನೀಡಿದ್ದು ಸಿಎ ನಿವೇಶನಗಳನ್ನು ಅತ್ಯಂತ ಪಾರದರ್ಶಕ ವ್ಯವಸ್ಥೆ ಮೂಲಕ ನಿಯಮಾನುಸಾರ ಹಂಚಿಕೆ ಮಾಡಲಾಗುತ್ತಿದೆ. ನಾಗರಿಕ ಸೌಲಭ್ಯದ (ಸಿಎ) ನಿವೇಶನಗಳನ್ನು ಅರ್ಹ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಯಾವ ಅಕ್ರಮವೂ ಆಗಿಲ್ಲ ಎಂದು ಪ್ರತಿಪಾದಿಸಿದ್ದಾರೆ.

Advertisement

ಸಿ.ಎ. ನಿವೇಶನಗಳನ್ನು ಹರಾಜು ಹಾಕುವ ಪದ್ಧತಿಯಿಲ್ಲ. ವಾಣಿಜ್ಯ ಉದ್ದೇಶದ ನಿವೇಶನಗಳನ್ನು ಮಾತ್ರ ಹರಾಜು ಹಾಕಲಾಗುತ್ತದೆ. ಸಿ.ಎ. ನಿವೇಶನಗಳ ಹಂಚಿಕೆಗಾಗಿ ಪತ್ರಿಕೆಗಳಲ್ಲಿ ವ್ಯಾಪಕ ಪ್ರಚಾರ ಕೊಡುವುದರ ಜತೆಗೆ ಇಲಾಖಾ ವೆಬ್‌ಸೈಟ್‌ನಲ್ಲೂ ಪ್ರಕಟಿಸಲಾಗಿದೆ. ವೆಬ್‌ಸೈಟ್‌ನಲ್ಲಿ ಹಾಕುವ ವ್ಯವಸ್ಥೆ ಮೊದಲು ಇರಲಿಲ್ಲ.

ಇದು ಮೊದಲು. ಸಿ.ಎ. ನಿವೇಶನಗಳ ಹಂಚಿಕೆಯನ್ನು ಹಿಂದೆಲ್ಲ ಸರಕಾರದಿಂದ ಅನುಮೋದನೆ ಪಡೆದು ನೇರವಾಗಿ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಹಂಚಿಕೆ ಹೆಚ್ಚು ಪಾರದರ್ಶಕವಾಗಿ ನಡೆಯಲಿ ಎನ್ನುವ ಕಾರಣಕ್ಕೆ ಮೊದಲು ಸಿ.ಇ.ಒ.ಅಧ್ಯಕ್ಷತೆಯಲ್ಲಿನ ಉಪಸಮಿತಿ ಅರ್ಹತೆಯನ್ನು ಪರಿಶೀಲಿಸಿ ಇಲಾಖಾ ಸಚಿವರ ಅಧ್ಯಕ್ಷತೆಯ ರಾಜ್ಯ ಮಟ್ಟದ ಏಕ ಗವಾಕ್ಷಿ ಸಮಿತಿಗೆ ಶಿಫಾರಸು ಮಾಡಿದ ಅನಂತರ ಈ ರಾಜ್ಯ ಮಟ್ಟದ ಸಮಿತಿ ತೀರ್ಮಾನದ ಮೂಲಕ ಅರ್ಹರಿಗೇ ಹಂಚಿಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next