ಕಾಸರಗೋಡು: ಮಾರಕ ಕೀಟನಾಶಕ ಎಂಡೋಸಲ್ಫಾನ್ ಹೂತಿಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಅದನ್ನು ದೃಢಪಡಿಸಿಕೊಳ್ಳಲು ರಾಜ್ಯ ತೋಟಗಾರಿಕೆ ನಿಗಮದ ಕಾಸರಗೋಡು ಎಸ್ಟೇಟ್‌ಗೊಳಪಟ್ಟ ಪ್ರದೇಶದಲ್ಲಿ ಮುಚ್ಚಲಾಗಿರುವ ಐದು ಬಾವಿಗಳನ್ನು 100 ಮೀಟರ್ ಆಳಕ್ಕೆ ಅಗೆದು ಪರಿಶೀಲಿಸುವಂತೆ ಕೇಂದ್ರ ಸರಕಾರದ ತಂಡ ನಿರ್ದೇಶಿಸಿದೆ.
ತೋಟಗಾರಿಕೆ ಇಲಾಖೆಯ ಕಾಸರಗೋಡು ಎಸ್ಟೇಟ್‌ಗೊಳಪಟ್ಟ ಮಿಂಚಿಪದವಿನ ಬಾವಿಯಲ್ಲಿ ಎಂಡೋಸಲ್ಫಾನ್ ಹಾಕಿ ಮುಚ್ಚಲಾಗಿದೆ ಎಂಬ ದೂರು ರಾಷ್ಟ್ರೀಯ ಹಸುರು ಪೀಠಕ್ಕೆ ಲಭಿಸಿತ್ತು. ಪೀಠದ ನಿರ್ದೇಶನದಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ದಕ್ಷಿಣ ವಲಯ ನಿರ್ದೇಶಕ ಡಾ| ಜೆ. ಚಂದ್ರಬಾಬು ನೇತೃತ್ವದ ತಂಡ ಡಿಸೆಂಬರ್ 28ರಂದು ಕಾಸರಗೋಡಿಗೆ ಆಗಮಿಸಿ ಆ ದೂರಿನ ಸಮಗ್ರ ಪರಿಶೀಲನೆ ನಡೆಸಿತ್ತು.
ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಬಳಸತೊಡಗಿದ 1983ರಿಂದ 2001ರ ಅವಧಿಯಲ್ಲಿ ಕಾಸರಗೋಡು ತೋಟಗಾರಿಕೆ ಇಲಾಖೆಗೆ ಸೇರಿದ 5 ಬಾವಿಗಳಲ್ಲಿ ಎಂಡೋಸಲ್ಫಾನ್ ಅನ್ನು ಬ್ಯಾರಲ್‌ಗಳಲ್ಲಿ ತುಂಬಿಸಿ ಅದನ್ನು ಬಾವಿಯೊಳಗೆ ಇರಿಸಿ ಬಾವಿಗಳನ್ನು ಮುಚ್ಚಲಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಹೆಚ್ಚು ಕಡಿಮೆ 280 ಬ್ಯಾರೆಲ್‌ಗಳಷ್ಟು ಎಂಡೋಸಲ್ಫಾನ್ ಕಾಸರಗೋಡು ಜಿಲ್ಲೆಯಲ್ಲಿ ಬಳಸಲಾಗಿತ್ತು. ಅದರಲ್ಲಿ ಇನ್ನು 20 ಬ್ಯಾರೆಲ್‌ಗಳು ಈಗ ಕಾರ್ಪೊರೇಶನ್‌ನ ಆದೂರು ಎಸ್ಟೇಟ್‌ನಲ್ಲಿ ಬಾಕಿ ಉಳಿದಿವೆ. ಆದರೆ ಬಾಕಿ ಬ್ಯಾರೆಲ್‌ಗಳು ಈಗ ಎಲ್ಲಿವೆ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ.