Advertisement

ಆ್ಯಸಿಡ್‌ ದಾಳಿ ಪ್ರಕರಣ ಆರೋಪಿಗಳಿಗೆ ಕಠಿಣ ಶಿಕ್ಷೆ

02:40 PM Aug 25, 2018 | Team Udayavani |

ಯಾದಗಿರಿ: ಇತ್ತೀಚಿನ ದಿನಗಳಲ್ಲಿ ಅಪರಾದ ವಿಭಾಗದ ವರದಿಗಳ ಪ್ರಕಾರ ಆ್ಯಸಿಡ್‌ ದಾಳಿ ಪ್ರಕರಣ ಹೆಚ್ಚಾಗುತ್ತಿವೆ. ಈ ಅಪರಾಧ ಎಸಗುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಭಾರತೀಯ ದಂಡ ಸಂಹಿತೆಯಲ್ಲಿ ಕಲಂ 326ಎ ಹಾಗೂ 326ಬಿ ಯನ್ನು ಸೇರಿಸಲಾಗಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ಗೌರವಾನ್ವಿತ ನಾಮದೇವ ಕೆ. ಸಾಲಮಂಟಪಿ ಹೇಳಿದರು.

Advertisement

ನಗರದ ಪ್ರೇರಣಾ ಪಿಯು ಕಾಲೇಜಿನಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಸೌಹಾರ್ದ ಪೌಂಡೇಶನ್‌ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಯೋಜನೆ-2016 ಕುರಿತ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 
ಭಾರತ ಸಂವಿಧಾನದ ಅನುಚ್ಛೇದ 21ರನ್ವಯ ಎಲ್ಲ ಪ್ರಜೆಗಳಿಗೂ ಜೀವಿಸುವ ಹಕ್ಕು ಮತ್ತು ಸ್ವಾಭಿಮಾನದಿಂದ ಬಾಳುವ ಹಕ್ಕನ್ನು ದಯ ಪಾಲಿಸಿದೆ. ಆ್ಯಸಿಡ್‌ ದಾಳಿಗೆ ಒಳಗಾದ ಸಂತ್ರಸ್ತರಿಗೂ ಸಹ ಈ ಅನುಚ್ಛೇದ ಅನ್ವಯಿಸುತ್ತದೆ ಎಂದು ತಿಳಿಸಿದರು.

ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ
ಅರ್ಜುನ ಬನಸೋಡೆ ಮಾತನಾಡಿ, ಆ್ಯಸಿಡ್‌ ದಾಳಿ ಒಂದು ಕೆಟ್ಟ ಹಿಂಸಾಚಾರವಾಗಿದ್ದು, ಹೆಚ್ಚಾಗಿ ಮಹಿಳೆಯರ ಮೇಲೆ ಆಗುತ್ತಿವೆ. ಇದು ಮುಖ್ಯವಾಗಿ ಒತ್ತಾಯದ ಮದುವೆ, ವರದಕ್ಷಿಣೆ ಅಥವಾ ಲೈಂಗಿಕ ಕಿರುಕುಳ ಹಾಗೂ ಆಸ್ತಿಗಳ ವಿಚಾರಗಳಲ್ಲಿನ ಘರ್ಷಣೆಗಳಲ್ಲಿ ಆ್ಯಸಿಡ್‌ ದಾಳಿಯಂತಹ ಕೃತ್ಯಗಳು ನಡೆಯುತ್ತಿವೆ ಎಂದು ಹೇಳಿದರು.

ಆ್ಯಸಿಡ್‌ ದಾಳಿಗೆ ಒಳಗಾದ ಸಂತ್ರಸ್ತರ ನೆರವಿಗಾಗಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾ ಧಿಕಾರದ ಆ್ಯಸಿಡ್‌ ದಾಳಿಗೆ ಒಳಗಾದ ಸಂತ್ರಸ್ಥರಿಗೆ ಕಾನೂನಿನ ನೆರವು ಯೋಜನೆ-2016 ಜಾರಿಗೆ ಬಂದಿರುತ್ತದೆ. ಈ ಯೋಜನೆ ಮುಖ್ಯ ಉದ್ದೇಶವು ಆ್ಯಸಿಡ್‌ ದಾಳಿಗೆ ಬಲಿಯಾದ ಸಂತ್ರಸ್ತರಿಗೆ ಕಾನೂನಿನ ನೆರವು, ವೈದ್ಯಕೀಯ ಸೌಲಭ್ಯ, ಪುನರ್ವಸತಿ ಸೇವೆ ಹಾಗೂ ಸಂತ್ರಸ್ತರ ಪರಿಹಾರ ನಿಧಿ ಯೋಜನೆ ಅಡಿಯಲ್ಲಿ 3 ಲಕ್ಷ ರೂ. ವರೆಗಿನ ಪರಿಹಾರ ಧನ ಮಂಜೂರು ಮಾಡುವುದಾಗಿದೆ ಎಂದು ಮಾಹಿತಿ ನೀಡಿದ ಅವರು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ತಾಲೂಕು ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸುವಂತೆ ತಿಳಿಸಿದರು.

ಸೌಹಾರ್ದ ಫೌಂಡೇಶನ್‌ ಸದಸ್ಯ ಸುದರ್ಶನರೆಡ್ಡಿ ಪಾಟೀಲ ಅಧ್ಯಕ್ಷತೆ ವಹಿಸಿದರು. ವಕೀಲರಾದ ಆರ್‌.ಎಸ್‌.ಪಾಟೀಲ ಉಪನ್ಯಾಸ ನೀಡಿದರು. ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಸುರೇಶ ಬಾಬು ಕಲಾಲ್‌, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಸಿ.ಎಸ್‌.ಮಾಲಿಪಾಟೀಲ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಶಾಂತಪ್ಪ ಎಸ್‌. ಖಾನಹಳ್ಳಿ ಹಾಗೂ ಕಾಲೇಜಿನ ಪ್ರಾಂಶುಪಾಲ ಚಂದ್ರಪ್ಪ ಬಿ.ಬಿ. ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next