ಉಡುಪಿ: ಎರಡು ವರ್ಷಗಳ ಹಿಂದೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಅಸ್ಸಾಂ ರಾಜ್ಯದ ಧೀರೇಂದ್ರ ನವಲಶೂದ್ರ (32) ಶಿಕ್ಷೆಗೆ ಒಳಗಾದ ಆರೋಪಿ.
ಸಂತ್ರಸ್ತ ಬಾಲಕಿ ತನ್ನ ಮನೆಯ ಬಳಿ ಅಂಗಡಿಗೆ ಹೋಗಿ ಹಿಂದೆ ಬರುತ್ತಿರುವಾಗ ಆರೋಪಿ ಧೀರೇಂದ್ರ ಹಿಂಬಾಲಿಸಿಕೊಂಡು ಬಂದು ಆಕೆಯನ್ನು ತಡೆದು ನಿಲ್ಲಿಸಿದ್ದ. ಅಕೆಯ ಕೈಯನ್ನು ಹಿಡಿದು ತೊಂದರೆ ಕೊಟ್ಟಿದ್ದು, ನೊಂದ ಬಾಲಕಿಯ ಹೆದರಿ ಅಲ್ಲಿಯೇ ಬಿದ್ದ ಕೋಲು ತೆಗೆದು ಆತನಿಗೆ ಹೊಡೆಯಲು ಹೋದಾಗ ಅಲ್ಲಿಂದ ತಪ್ಪಿಸಿಕೊಂಡಿದ್ದ.
ಬಳಿಕ ಆಕೆ ಮನೆಗೆ ಹೋಗುವಾಗ ಆಕೆಯನ್ನು ಹಿಂಬಾಲಿಸಿ ಮನೆವರೆಗೆ ಹೋಗಿದ್ದ. ಘಟನೆಯ ಬಗ್ಗೆ ಬಾಲಕಿ ತಾಯಿಗೆ ತಿಳಿಸಿದ್ದರು. ಬಳಿಕ ಸ್ಥಳೀಯರು ಸೇರಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಅಂದಿನ ಪೊಲೀಸ್ ಅಧಿಕಾರಿ ಜನಾರ್ದನ ದೂರು ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಾಸಿಕ್ಯೂಶನ್ ಪರವಾಗಿ 18 ಸಾಕ್ಷಿಗಳ ಪೈಕಿ 9 ಸಾಕ್ಷಿಗಳ ವಿಚಾರಣೆ ನಡೆಸಿದ್ದು, ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಅವರು ನೊಂದ ಬಾಲಕಿಯ ಸಾಕ್ಷ್ಯ ಮತ್ತು ಸಾಂದರ್ಭಿಕ ಸಾಕ್ಷಿಗಳನ್ನು ಪರಿಗಣಿಸಿ ಶಿಕ್ಷೆ ವಿಧಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದಿಸಿದ್ದರು.