ಬೆಂಗಳೂರು: ಅಂತಾರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ತರಬೇತಿ ಪಡೆಯಲು ಬಂದಿದ್ದ ಮಹಾರಾಷ್ಟ್ರ ಮೂಲದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆಪಾದನೆ ಮೇರೆಗೆ ಬಾಡಿ ಬಿಲ್ಡರ್ ನನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಾಣಸವಾಡಿಯ ಸೈಯದ್ ಸಿದ್ಧಿಕ್ (35) ಬಂಧಿತ.
ಆರೋಪಿ ವಿರುದ್ಧ ಮಹಾರಾಷ್ಟ್ರ ಮೂಲದ 23 ವರ್ಷದ ಸಂತ್ರಸ್ತೆ ದೂರು ನೀಡಿದ್ದರು. ಸೈಯದ್ ಸಿದ್ಧಿಕ್ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ಆಗಿದ್ದು, ಹಲವು ಬಾಡಿ ಬಿಲ್ಡರ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ. ಸ್ಪರ್ಧೆಗಳಲ್ಲಿ ಪ್ರದರ್ಶಿಸಿದ್ದ ವಿಡಿಯೋ ಹಾಗೂ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ. ಈ ವಿಡಿಯೋ ಹಾಗೂ ಚಿತ್ರಗಳನ್ನು ನೋಡುತ್ತಿದ್ದ ಮಹಾರಾಷ್ಟ್ರ ಮೂಲದ ಯುವತಿ ಲೈಕ್ ಕಮೆಂಟ್ ಮಾಡುತ್ತಿದ್ದಳು. ಇದೇ ವೇಳೆ ಇನ್‌ಸ್ಟ್ರಾಗ್ರಾಂನಲ್ಲಿ ಪರಿಚಯವಾದ ಯುವತಿ ಜತೆ ಆರೋಪಿ ಚಾಟಿಂಗ್ ನಡೆಸುತ್ತಿದ್ದ. ಆಗ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ಮಹಿಳಾ ವಿಭಾಗದಲ್ಲಿ ಸ್ಪರ್ಧಿಸಲು ಆಸಕ್ತಿಯಿದ್ದು, ಅದಕ್ಕೆ ತರಬೇತಿ ನೀಡುವಂತೆ ಸಿದ್ಧಿಕ್‌ನನ್ನು ಸಂತ್ರಸ್ತೆ ಕೇಳಿಕೊಂಡಿದ್ದರು. ಅದಕ್ಕೆ ಆರೋಪಿ ಒಪ್ಪಿಕೊಂಡಿದ್ದ.
ಇದನ್ನೂ ಓದಿ:ಹುಬ್ಬಳ್ಳಿ: ಚಲಿಸುವ ರೈಲಿಗೆ ಸಿಲುಕಿ ವ್ಯಕ್ತಿಯ ಎರಡೂ ಕಾಲು ತುಂಡು
ಅದರಂತೆ ಫೆಬ್ರವರಿ 15ರಂದು ಬೆಂಗಳೂರಿಗೆ ಆಗಮಿಸಿದ ಸಂತ್ರಸ್ತೆ, ನಗರದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದಳು. ನಂತರ ಬಾಣಸವಾಡಿಯಲ್ಲಿರುವ ಸಿದ್ಧಿಕ್ ಜಿಮ್‌ನಲ್ಲಿ ತರಬೇತಿ ಪಡೆಯುತ್ತಿದ್ದಳು. ಈ ವೇಳೆ ಸ್ಟಿರಾಯ್ಡ ತೆಗೆದುಕೊಳ್ಳುವಂತೆ ಆಕೆಗೆ ಒತ್ತಾಯಿಸಿದ್ದಾನೆ. ಬಳಿಕ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಮದುವೆಯಾಗುವುದಾಗಿ ನಂಬಿಸಿದ್ದ. ಈ ಬಗ್ಗೆ ಪ್ರಶ್ನಿಸಿದಾಗ ಮದುವೆಯಾಗುವುದಾಗಿ ಹೇಳಿದ್ದ. ಆದರೆ, ಇದೀಗ ಮದುವೆ ಆಗುವುದಿಲ್ಲ ಎಂದು ಹೇಳುತ್ತಿದ್ದು, ಆಕೆಯ ಪತ್ನಿ ಮತ್ತು ಸಂಬಂಧಿಕರು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ಮತ್ತೊಂದೆಡೆ ಆರೋಪಿ ವಿಚಾರಣೆ ವೇಳೆ ಆಕೆ ಜತೆ ಆತ್ಮೀಯವಾಗಿ ಇದ್ದದ್ದು ನಿಜ. ಆದರೆ, ಆಕೆ 40 ಲಕ್ಷ ರೂ. ಕೊಡುವಂತೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು. ಅದನ್ನು ನಿರಾಕರಿಸಿದಾಗ ಅತ್ಯಾಚಾರದ ದೂರು ನೀಡುತ್ತಿದ್ದಾಳೆ ಎಂದು ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.