ಬೆಂಗಳೂರು: ಒಂಭತ್ತು ತಿಂಗಳ ಹಿಂದಿನ ಯುವಕನ ಕೊಲೆ ಪ್ರಕರಣವನ್ನು ಅನಾಮಧೇಯ ಪತ್ರ ಮತ್ತು ವಿಡಿಯೋ ಸಾಕ್ಷ್ಯ ಆಧರಿಸಿ ಕಬ್ಬನ್ ಪಾರ್ಕ್ ಪೊಲೀಸರು ಭೇದಿ ಸಿದ್ದು, ಚಿಕ್ಕಬಳ್ಳಾಪುರ ಕರವೇ ಅಧ್ಯಕ್ಷ ಮತ್ತು ಆತನ ಪುತ್ರ ಸೇರಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಚಿಕ್ಕಬಳ್ಳಾಪುರದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಚ್.ಜಿ.ವೆಂಕಟ ಚಲಪತಿ, ಆತನ ಪುತ್ರ ಎ.ವಿ.ಶರತ್ ಕುಮಾರ್, ಈತನ ಸಹಚರರಾದ ಆರ್.ಶ್ರೀಧರ್ ಮತ್ತು ಕೆ.ಧನುಷ್ ಮತ್ತು ಯಲಹಂಕದ ಎಂ.ಪಿ ಮಂಜು ನಾಥ್ ಬಂಧಿತರು. ಆರೋಪಿಗಳು ಮಾರ್ಚ್‌ನಲ್ಲಿ ಕೋಣನಕುಂಟೆ ನಿವಾಸಿ ಎಚ್.ಶರತ್‌ನನ್ನು ಅಪಹರಿಸಿ ಹತ್ಯೆಗೈದು, ಮೃತದೇಹವನ್ನು ಚಾರ್ಮಾಡಿ ಘಾಟ್‌ನಲ್ಲಿ ಎಸೆದಿದ್ದರು. ಇತರೆ ಆರೋಪಿಗಳು ಹಾಗೂ ಮೃತದೇಹ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದರು.
ಏನಿದು ಪ್ರಕರಣ?: ಕೊಲೆಯಾದ ಶರತ್ ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಕಾರುಗಳನ್ನು ಕೊಡಿಸುವುದಾಗಿ ಚಿಕ್ಕಬಳ್ಳಾಪುರ ಮತ್ತು ಯಲಹಂಕ ವಾಸಿಗಳಿಂದ ಲಕ್ಷಾಂತರ ರೂ. ಪಡೆದುಕೊಂಡಿದ್ದ. ಆದರೆ, ಕಾರುಗಳನ್ನು ಕೊಡಿಸದೆ ವಂಚಿಸಿದ್ದ. ಈ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ಶರತ್ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು. ಮತ್ತೂಂದೆಡೆ ಹಣ ಕಳೆದುಕೊಂಡ ವ್ಯಕ್ತಿಗಳು ಹಣ ವಸೂಲಿಗಾಗಿ ಮಾರ್ಚ್‌ನಲ್ಲಿ ಕರವೇ ಅಧ್ಯಕ್ಷ ವೆಂಕಟಾಚಲಪತಿಗೆ ಕೋರಿದ್ದರು. ಅದನ್ನು ತನ್ನ ಪುತ್ರ ಶರತ್‌ಕುಮಾರ್‌ಗೆ ಸೂಚಿಸಿದ್ದ. ಶರತ್ ಕುಮಾರ್ ತನ್ನ ಸ್ನೇಹಿತರ ಮತ್ತು ಹಣಕೊಟ್ಟಿದ್ದ ಕೆಲವರ ಜತೆ ಸೇರಿ ಎಚ್.ಶರತ್‌ನನ್ನು ಬನಶಂಕರಿ ಬಳಿ ಕರೆಸಿಕೊಂಡು ಅಪಹರಿಸಿ, ಸಂಕೇತ್ ಎಂಬಾತನ ಗೌರಿಬಿದನೂರಿನ ವಾಟದಹೊಸಹಳ್ಳಿ ಯಲ್ಲಿರುವ ತೋಟದ ಮನೆಯಲ್ಲಿ ಆರೇಳು ದಿನ ಅಕ್ರಮ ಬಂಧನದಲ್ಲಿರಿಸಿ ಅರೆಬೆತ್ತಲೆಗೊಳಿಸಿ ಚಿತ್ರಹಿಂಸೆ ನೀಡಿದ್ದರು. ಅಲ್ಲದೆ, ಮಾವಿನ ಮರಕ್ಕೆ ಕೈ, ಕಾಲುಗಳನ್ನು ಕಟ್ಟಿ ನೇತುಹಾಕಿ ಹತ್ಯೆಗೈದಿ ದ್ದರು. ನಂತರ ಸಾಕ್ಷ್ಯ ನಾಶಗೊಳಿಸಲು ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್‌ನಲ್ಲಿ ಶವ ಎಸೆದಿದ್ದರು.
ನಿಗೂಢವಾಗಿ ನಾಪತ್ತೆ: 9 ತಿಂಗಳ ಹಿಂದೆ ಬನಶಂಕರಿಯಲ್ಲಿ ಶರತ್‌ನನ್ನು ಅಪಹರಿಸಿದ ಹಂತಕರು, ಕೆಲ ಹೊತ್ತಿನ ಬಳಿಕ ಆತನ ಪೋಷಕರಿಗೆ ಮೊಬೈಲ್ ಸಂದೇಶ ಮತ್ತು ಆತನಿಂದಲೇ ಕರೆ ಮಾಡಿಸಿದ್ದರು. “ನಾನು ದುಡಿಯಲು ಹೊರ ರಾಜ್ಯಕ್ಕೆ ಹೋಗುತ್ತಿದ್ದೇನೆ. ನನ್ನ ಹುಡುಕಬೇಡಿ’ ಎಂದು ಸಂದೇಶ ಹಾಗೂ ನೇರವಾಗಿ ಹೇಳಿಸಿದ್ದರು. ಆ ಮೊಬೈಲ್ ಅನ್ನು ಲಾರಿಯೊಂದರ ಮೇಲೆ ಎಸೆದಿದ್ದರು. ನಂತರ ಶರತ್‌ನನ್ನು ಗೌರಿಬಿದನೂರಿನ ತೋಟದ ಮನೆಗೆ ಕರೆದೊಯ್ದಿದ್ದರು. ಮತ್ತೂಂದೆಡೆ ಮೊಬೈಲ್ ಬಿದ್ದಿದ್ದ ಲಾರಿ ಮೈಸೂರು ಮಾರ್ಗವಾಗಿ ನೆರೆ ರಾಜ್ಯಕ್ಕೆ ಹೋಗಿ, ಸ್ವಿಚ್ಡ್ ಆಫ್ ಆಗಿತ್ತು. ಹೀಗಾಗಿ ಪೋಷಕರು ದೂರು ನೀಡಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು.
ಅನಾಮಧೇಯರಿಂದ ವಿಡಿಯೋ, ಪತ್ರ: ಈ ಮಧ್ಯೆ ಕೆಲ ತಿಂಗಳ ಹಿಂದೆ ಕೇಂದ್ರ ವಿಭಾಗದ ಕಬ್ಬನ್ ಪಾರ್ಕ್ ಎಸಿಪಿ ಡಿ.ಎಸ್.ರಾಜೇಂದ್ರ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಪತ್ರ ಬರೆದು ಶರತ್ ಅಪಹರಣದ ಬಗ್ಗೆ ಮಾಹಿತಿ ನೀಡಿದ್ದರು. ಜತೆಗೆ ಆತನ ಮೇಲಿನ ಹಲ್ಲೆ ಬಗ್ಗೆಯೂ ಪೆನ್‌ಡ್ರೈವ್‌ನಲ್ಲಿ ವಿಡಿಯೋಗಳನ್ನು ಹಾಕಿ ಕಳುಹಿಸಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದ ಎಸಿಪಿ ರಾಜೇಂದ್ರ, ಹೆಚ್ಚಿನ ತನಿಖೆ ನಡೆಸುವಂತೆ ಕಬ್ಬನ್ ಪಾರ್ಕ್ ಠಾಣಾಧಿಕಾರಿ ಚೈತನ್ಯಗೆ ಸೂಚಿಸಿದ್ದರು. ಬಳಿಕ ತಾಂತ್ರಿಕ ತನಿಖೆ ಹಾಗೂ ಇತರೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದಾಗ, ವಿಡಿಯೋದಲ್ಲಿ ಶರತ್‌ಗೆ ಹಲ್ಲೆ ನಡೆಸುವ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಿದೆ. ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಎಲ್ಲ ಆರೋಪಿಗಳ ಬಗ್ಗೆ ಬಾಯಿಬಿಟ್ಟಿದ್ದಾರೆ. ಬಳಿಕ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.