ಬೆಂಗಳೂರು: ಪರಿಚಯಸ್ಥ ಮಹಿಳೆಯ ಫೋಟೋವನ್ನು ಮಾರ್ಫಿಂಗ್ ಮಾಡಿ ಮೊಬೈಲ್‌ಗೆ ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿಯನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ದಾಸರಹಳ್ಳಿ ನಿವಾಸಿ ಪ್ರವೀಣ್ ರಾವ್ (40) ಬಂಧಿತ. ದಾಸರಹಳ್ಳಿಯ 38 ವರ್ಷದ ಮಹಿಳೆ ದೂರಿನ ಮೇರೆಗೆ ಆರೋಪಿ ಯನ್ನು ಬಂಧಿಸಲಾಗಿದೆ.
ಸಂತ್ರಸ್ತ ಮಹಿಳೆ ಮನೆ ಪಕ್ಕದ ಖಾಲಿ ನಿವೇಶನದಲ್ಲಿ ಆರೋಪಿ ಪ್ರವೀಣ್ ಶೆಡ್ ಹಾಕಿಕೊಂಡು ಚೀಟಿ ವ್ಯವಹಾರ ನಡೆಸುತ್ತಿದ್ದ. ಜತೆಗೆ ಲ್ಯಾಪ್‌ಟಾಪ್ ರಿಪೇರಿ ಮಾಡುತ್ತಿದ್ದ. ಹೀಗಾಗಿ 2021ರಲ್ಲಿ ಮಹಿಳೆ ಮನೆಗೆ ಕರೆಸಿದ್ದರು. ಲ್ಯಾಪ್‌ಟಾಪ್ ಸರಿಪಡಿಸುವ ವೇಳೆ ಅದರಲ್ಲಿದ್ದ ಸಂತ್ರಸ್ತೆಯ ಖಾಸಗಿ ಫೋಟೋ, ಕುಟುಂಬಸ್ಥರ ಜತೆಗೆ ತೆಗೆಸಿಕೊಂಡಿದ್ದ ಫೋಟೊವನ್ನು ಆರೋಪಿ ತನ್ನ ಮೊಬೈಲ್‌ಗೆ ಕಳುಹಿಸಿಕೊಂಡಿದ್ದ.
ಮಹಿಳೆಯ ಫೋಟೋವನ್ನು ಅಶ್ಲೀಲವಾಗಿ ಮಾರ್ಫಿಂಗ್ ಮಾಡಿ ಅದೇ ದಿನ ಅವರ ಮೊಬೈಲ್‌ಗೆ ಕಳುಹಿಸಿದ್ದ. ಈ ವಿಚಾರವನ್ನು ಪತಿಗೆ ತಿಳಿಸಿ ಪೊಲೀಸರಿಗೆ ಮಹಿಳೆ ದೂರು ನೀಡಿದ್ದರು. ಈ ವಿಚಾರ ತಿಳಿದ ಆರೋಪಿ ಮೇ 11ರಂದು ಬೆಳಗ್ಗೆ ದೂರುದಾರ ಮಹಿಳೆಯ ಮನೆಗೆ ಬಂದು ಹಲ್ಲೆ ನಡೆಸಿ, ಚೂರಿ ತೋರಿಸಿ ಬೆದರಿಸಿದ್ದ. ಮಹಿಳೆಗೆ ಬೆದರಿಸುತ್ತಿರುವುದನ್ನು ಗಮನಿಸಿ ನೆರೆ-ಹೊರೆಯವರು ಬಂದಾಗ ಆರೋಪಿ ಪ್ರವೀಣ್ ಸ್ಥಳದಿಂದ ಪರಾರಿಯಾಗಿದ್ದ.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋ ಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.