Advertisement

3 ವರ್ಷದ ಹಿಂದೆ ಜೀವಾವಧಿ ಶಿಕ್ಷೆಗೆ ಗುರಿಯಾಗಿ ತಪ್ಪಿಸಿಕೊಂಡಿದ್ದ ಅಪರಾಧಿ ಸೆರೆ

07:59 PM Dec 04, 2021 | Team Udayavani |

ಚಾಮರಾಜನಗರ : ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ತಪ್ಪಿಸಿಕೊಂಡು ತಲೆ ಮರೆಸಿಕೊಂಡಿದ್ದ ಅಪರಾಧಿಯನ್ನು ಜಿಲ್ಲಾ ಪೊಲೀಸ್‌ ವಿಶೇಷ ತಂಡ ಬಂಧಿಸಿದೆ.
ನಗರದ ಗಾಳಿಪುರ ಬಡಾವಣೆಯ ರಫೀಕ್ ಅಲಿಯಾಸ್‌ ಚುಮ್ಟಿ ಎಂಬಾತನನ್ನು ಬಯಾಂಗ ವಶಕ್ಕೆ ನೀಡಲಾಗಿದೆ. ಕಳೆದ 3 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಈತನನ್ನು ನ.30 ರಂದು
ಬಳ್ಳಾರಿಯಲ್ಲಿ ಬಂಧಿಸಲಾಯಿತು ಎಂದು ಎಸ್ಪಿ ದಿವ್ಯಾ ಸಾರಾ ಥಾಮಸ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 6 ಮನೆ ಕಳ್ಳತನಗಳು, ಪೊಲೀಸ್‌ ವಶದಿಂದ 2 ಬಾರಿ ತಪ್ಪಿಸಿಕೊಂಡಿದ್ದು ಮತ್ತು ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ರಫೀಕ್ ಸಂಸಾರ ಸಮೇತ ಬಳ್ಳಾರಿಯಲ್ಲಿ ವಾಸವಾಗಿದ್ದ ಎಂದು ತಿಳಿಸಿದರು.
ರಫೀಕ್ ತನ್ನ ಸಹಚರ ಅಪ್ಸರ್‌ ಹಾಗೂ ಇತರರೊಡನೆ ಸೇರಿ ಕಳವು ಮಾಲು ಹಂಚಿಕೊಳ್ಳುವ ಸಂಬಂಧ ಗಲಾಟೆ ನಡೆದು ಹುಮಾಯೂನ್‌ ಎಂಬಾತನನ್ನು ಕೊಲೆ ಮಾಡಿದ್ದ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿ ರಫೀಕ್ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದನು.

Advertisement

ಇನ್ನು ಚಾ.ನಗರ ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ 3, ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ 1, ಗುಂಡ್ಲುಪೇಟೆ ಠಾಣೆ ವ್ಯಾಪ್ತಿಯಲ್ಲಿ 2 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಇದಲ್ಲದೆ ಚಾಮರಾಜನಗರ ಪೊಲೀಸರ ವಶದಿಂದ ತಪ್ಪಿಸಿಕೊಂಡಿದ್ದ. 2013 ರಲ್ಲಿ ಗುಂಡ್ಲುಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಮೈಸೂರಿಗೆ ಕರೆದೊಯ್ಯುವಾಗ ನಂಜನಗೂಡಿನಲ್ಲಿ
ಪೊಲೀಸ್‌ ವಶದಿಂದ ಪರಾರಿಯಾಗಿದ್ದ ಎಂದು ವಿವರಿಸಿದರು. ಈತನ ಪತ್ತೆಗೆ ಹಿಂದೆ ರಚಿಸಲಾಗಿದ್ದ ಪೊಲೀಸ್‌ ವಿಶೇಷ ತಂಡ ತೃಪ್ತಿಕರವಾಗಿ ಕೆಲಸ ಮಾಡದ ಕಾರಣ 3 ವರ್ಷಗಳಿಂದ ತಲೆ
ಮರೆಸಿಕೊಂಡಿದ್ದ. ನಾವು ಹೊಸದಾಗಿ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಂದರರಾಜು, ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಇನ್ಸ್‌ಪೆಕ್ಟೆರ್‌ ಗಳಾದ ಮಹೇಶ್‌, ಆನಂದ್‌, ತಾಜುದ್ದೀನ್‌ ಅವರ ನೇತೃತ್ವದ ತಂಡವನ್ನು ನವೆಂಬರ್‌ ಮೊದಲ ವಾರ ರಚಿಸಲಾಗಿತ್ತು ಎಂದರು.

ಇದನ್ನೂ ಓದಿ : ಕೋಟಿ ರೂ.ಬಿಡುಗಡೆಯಾದರೂ ಬಿಳಿಗಿರಿರಂಗನ ದೇಗುಲದಲ್ಲಿ ಕಳಪೆ ನೆಲಹಾಸು

ಈ ತಂಡ ಶೋಧನೆ ತೀವ್ರಗೊಳಿಸಿದಾಗ ಆತ ಬಳ್ಳಾರಿಯ ಹೋಟೆಲೊಂದರಲ್ಲಿ ಪರೋಟ ತಯಾರಿಕೆ ಕೆಲಸ ಮಾಡಿಕೊಂಡಿದ್ದ ಎಂಬುದನ್ನು ತಂಡ ಪತ್ತೆ ಹಚ್ಚಿತ್ತು. ಅಲ್ಲದೆ ಮೊಬೈಲ್‌ ಪೋನ್‌ ಬಳದೆ ತಲೆಮರೆಸಿಕೊಂಡಿದ್ದ ಎಂದರು.

ತಂಡಕ್ಕೆ ನಗದು ಬಹುಮಾನ: ವಿಶೇಷ ತಂಡದ ತಾಜುದ್ದೀನ್‌, ಮೋಹನ ಕುಮಾರ್‌, ಸುರೇಶ್‌ ಅವರು ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಿ ಅಲ್ಲಿನ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಆತನನ್ನು ಬಂಧಿಸಲಾಗಿದೆ. 3 ವರ್ಷ ಕಾಲ ತಲೆಮರೆಸಿ ಕೊಂಡಿದ್ದವನನ್ನ ಬಹುಬೇಗ ಪತ್ತೆ ಹಚ್ಚಿದ ತಂಡಕ್ಕೆ ನಗದು ಬಹುಮಾನ ನೀಡಲಾಗಿದೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next