ಬೆಳಗಾವಿ: ಮಂಗಳೂರಿನಿಂದ ನಿಪ್ಪಾಣಿ ಕಡೆಗೆ ಲಾರಿಯಲ್ಲಿ ಅಡುಗೆ ಎಣ್ಣೆ ತೆಗೆದುಕೊಂಡು ಹೋಗುವಾಗ ತಡೆದು ಕಳ್ಳತನ ಮಾಡಿದ್ದ ಆರೋಪಿಗಳನ್ನು ಮೂರೇ ದಿನದಲ್ಲಿ ಪತ್ತೆ ಹಚ್ಚಿ 24.93 ಲಕ್ಷ ರೂ. ಮೌಲ್ಯದ ಅಡುಗೆ ಎಣ್ಣೆ ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇಬ್ಬರು ಆರೋಪಿಗಳನ್ನು ಮಂಗಳವಾರ ಬಂಧಿಸಿದ ಹಿರೇಬಾಗೇವಾಡಿ ಪೊಲೀಸರು ಬಂಧಿತರಿಂದ 23,93,560 ರೂ. ಮೌಲ್ಯದ 878 ಅಡುಗೆ ಎಣ್ಣೆ ಟನ್‌ಗಳು ಹಾಗೂ 14 ಬಾಕ್ಸ್ ಎಣ್ಣೆ ಪೌಚ್‌ಗಳು, ದ್ವಿಚಕ್ರ ವಾಹನ ಸೇರಿ ಒಟ್ಟು 24,23,560 ರೂ. ಮೌಲ್ಯದ ವಸ್ತು ವಶಪಡಿಸಿಕೊಂಡಿದ್ದಾರೆ. ಫೆ. 15ರಂದು ಮಂಗಳೂರಿನಿಂದ ಅಡುಗೆ ಎಣ್ಣೆ ತುಂಬಿಕೊಂಡು ಲಾರಿ ನಿಪ್ಪಾಣಿ ಕಡೆಗೆ ಹೊರಟಿತ್ತು.
ಉಡುಪಿ ಜಿಲ್ಲೆಯ ಪಡುಬಿದ್ರೆಯ ಇಸ್ಮಾಯಿಲ್ ನವಾಸ್ ಕೆ. ಇಬ್ರಾಹಿಮ್ ಎಂಬವರು ತಮ್ಮ ಲಾರಿ ಚಾಲಕರಾದ ಅಸ್ಸಾಂ ರಾಜ್ಯದ ಇಬ್ರಾಹಿಮ್ ಅಲಿ ಅಬ್ದುಲ್‌ಮಜಿದ್ ಹಾಗೂ ಸಾಹೇಬ್ ಅಲಿ ಹುಸೇನ್ ನಿಪ್ಪಾಣಿಗೆ ಹೊರಟಿದ್ದರು. ಹಿರೇಬಾಗೇವಾಡಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬಡೇಕೊಳ್ಳಮಠ ಬಳಿ 30.38 ಲಕ್ಷ ರೂ. ಮೌಲ್ಯದ 1,465 ಅಡುಗೆ ಎಣ್ಣೆಯ ಟನ್ ಹಾಗೂ 80 ಪೌಚ್ ಬಾಕ್ಸ್ ಗಳನ್ನು ಕಳ್ಳತನ ಮಾಡಿರುವ ಬಗ್ಗೆ ಹಿರೇಬಾಗೇವಾಡಿ ಠಾಣೆಯಲ್ಲಿ ದೂರು ನೀಡಿದ್ದರು.
ಗ್ರಾಮೀಣ ಎಸಿಪಿ ಗೋಪಾಲಕೃಷ್ಣ ಗೌಡರ ಮಾರ್ಗದರ್ಶನದಲ್ಲಿ ಹಿರೇಬಾಗೇವಾಡಿ ಇನ್ಸಪೆಕ್ಟರ್ ಅಮರೇಶ ಬಿ. ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೂರೇ ದಿನದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಹಾಡುಹಗಲೇ ಶಾಲಾ ಶಿಕ್ಷಕಿಯ ಹತ್ಯೆ: ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯ