ಬೆಂಗಳೂರು: ಚಿನ್ನಾಭರಣಕ್ಕಾಗಿ ವ್ಯಕ್ತಿಯೊಬ್ಬನ ಕೊಲೆಗೈದ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದು ಬಳಿಕ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬ ಐದು ವರ್ಷಗಳ ಬಳಿಕ ಆಡುಗೋಡಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಮೈಸೂರಿನ ಹೆಬ್ಟಾಳ ನಿವಾಸಿ ಮಧುಸೂದನ್ ಅಲಿಯಾಸ್ ಮಧು(27) ಬಂಧಿತ. 2014ರಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ನಗದು ಸೇರಿ ಪುರಾತನ ಕಾಲದ ಚಿನ್ನ ಹಾಗೂ ವಜ್ರದ ಆಭರಣ ದೋಚಿ ಪರಾರಿಯಾಗಿದ್ದ ಪ್ರಕರಣದಲ್ಲಿ ಮಧು ಎರಡನೇ ಆರೋಪಿಯಾಗಿದ್ದ. 2017ರಲ್ಲಿ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿ, ಹೊರರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ಹೇಳಿದರು.
ಏನಿದು ಪ್ರಕರಣ?: ಆರೋಪಿ ಮಧುಸೂದನ್ ಸೇರಿ ಏಳು ಮಂದಿ 2014ರ ಮಾ.25ರಂದು ಲಕ್ಕಸಂದ್ರ ಲೇಔಟ್ ನಿವಾಸಿಗಳಾದ ಉದಯ್‌ರಾಜ್ ಸಿಂಗ್ ಮತ್ತು ಸುಶೀಲಾ ದಂಪತಿ ಬಳಿಯಿದ್ದ ಪುರಾತನ ಕಾಲದ ಚಿನ್ನ ಮತ್ತು ವಜ್ರದ ಆಭರಣ ಖರೀದಿಸುವ ನೆಪದಲ್ಲಿ ಅವರ ಮನೆಗೆ ಹೋಗಿದ್ದರು. ಆಗ ದಂಪತಿ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಪ್ರತಿರೋಧ ವ್ಯಕ್ತಪಡಿಸಿದ್ದ ಉದಯ್‌ರಾಜ್ ಸಿಂಗ್‌ನ ಕತ್ತು ಕೊಯ್ದು ಆರೋಪಿ ಗಳು 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು 2.5 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಆಡುಗೋಡಿ ಠಾಣೆ ಪೊಲೀಸರು ಆರೋಪಿಗಳಾದ ಶ್ರೀರಂಗ ಅಭಿಷೇಕ್, ಮಧುಸೂದನ್, ಕಿರಣ್, ಸತೀಶ್, ದಿಲೀಪ್ ಕುಮಾರ್, ಶ್ರೀಧರ ಹಾಗೂ ಅಮಿತ್ ಕುಮಾರ್ ಎಂಬವರನ್ನು ಬಂಧಿಸಿ ದರೋಡೆ ಮಾಡಿದ್ದ ಚಿನ್ನ ಹಾಗೂ ವಜ್ರದ ಆಭರಣ ಜಪ್ತಿ ಮಾಡಿದ್ದರು. ಬಳಿಕ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಕೋರ್ಟ್ ವಿಚಾರಣೆ ನಡೆಸುತ್ತಿತ್ತು.
ಆರು ಮಂದಿಗೆ ಜೀವಾವಧಿ ಶಿಕ್ಷೆ: ಈ ನಡುವೆ ಪ್ರಕ ರಣದ ಎರಡನೇ ಆರೋಪಿ ಮಧುಸೂದನ್ 2017 ರಲ್ಲಿ ಹೈಕೋರ್ಟ್‌ನಲ್ಲಿ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದ. ಬಳಿಕ ಕೋರ್ಟ್‌ನ ಷರತ್ತುಗಳನ್ನು ಉಲ್ಲಂ ಸಿ ವಿಚಾರಣೆಗೆ ಗೈರಾಗಿ ತಲೆಮರೆಸಿಕೊಂಡಿದ್ದ. ಹೀಗಾಗಿ ಆರೋಪಿ ಬಂಧನಕ್ಕೆ ನ್ಯಾಯಾಲಯ ವಾರೆಂಟ್ ಹೊರಡಿಸಿತ್ತು. ಬಳಿಕ 2019ರ ಜೂನ್ 12ರಂದು ಪ್ರಕರಣದ ಅಂತಿಮ ತೀರ್ಪು ಪ್ರಕಟಿಸಿದ್ದ ನ್ಯಾಯಾಲಯವು,ಆರೋಪಿ ಮಧುಸೂದನ್ ಹೊರತುಪಡಿಸಿ ಉಳಿದಆರು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿತ್ತು
ಫೇಸ್‌ಬುಕ್ ಸೆಲ್ಫಿಯಿಂದ ಸಿಕ್ಕಿಬಿದ್ದ ! :
ಹೈಕೋರ್ಟ್‌ನಿಂದ ಜಾಮೀನು ಪಡೆದುಕೊಂಡ ಆರೋಪಿ ಬಳಿಕ ಬಿಹಾರದ ಪಾಟ್ನಾಗೆ ಹೋಗಿ ರಾಹುಲ್ ಎಂಬ ಹೆಸರಿನಲ್ಲಿ ಜೀವನ ನಡೆಸುತ್ತಿದ್ದ. ಬಳಿಕ ಪುಣೆಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಮೊಬೈಲ್ ಫೋನ್ ಬಳಸುತ್ತಿರಲಿಲ್ಲ. ಜತೆಗೆ ಕುಟುಂಬ ಸದಸ್ಯರನ್ನು ಸಂಪರ್ಕಿಸುತ್ತಿರಲಿಲ್ಲ. ಹೀಗಾಗಿ ಪೊಲೀಸರಿಗೆ ಆರೋಪಿ ಸಿಕ್ಕಿರಲಿಲ್ಲ. ಈ ಮಧ್ಯೆ ಆರೋಪಿ ಇತ್ತೀಚೆಗೆ ಬೆಂಗಳೂರಿಗೆ ಬಂದು ಸ್ನೇಹಿತನ ಜತೆ ಮಾಲ್‌ವೊಂದರಲ್ಲಿ ಕಾಣಿಸಿಕೊಂಡಿದ್ದ. ಸ್ನೇಹಿತನ ಜತೆ ಸೆಲ್ಫಿ ತೆಗೆದುಕೊಂಡು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದ. ಈ ಕುರಿತು ಮಾಹಿತಿ ಪಡೆದ ಆಡುಗೋಡಿ ಪೊಲೀಸರು, ಆತನ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದರು. ಬಳಿಕ ಮಾಲ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಗಳನ್ನು ಆಧರಿಸಿ ಮೊದಲಿಗೆ ಆತನ ಸ್ನೇಹಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸನದಾಗ ಪೀಣ್ಯದಲ್ಲಿರುವ ಆತನ ಸಹೋದರಿ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.