ಬೆಂಗಳೂರು: ಮದ್ಯದ ಪಾರ್ಟಿ ವೇಳೆ ಕ್ಷುಲ್ಲಕ್ಕ ಕಾರಣಕ್ಕೆ ಸ್ನೇಹಿತನನ್ನು ಹತ್ಯೆಗೈದಿದ್ದ ಮೂವರು ಆರೋಪಿಗಳನ್ನು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚೆಲುವಪ್ಪ ಗಾರ್ಡನ್ ನಿವಾಸಿ ನವೀನ್ (28), ಹೇಮಂತ್‌ಕುಮಾರ್ (20) ಹಾಗೂ ಡಿ.ಕುಮಾರ್(20) ಬಂಧಿತರು.
ಆರೋಪಿಗಳು ಕೆ.ಪಿ ಅಗ್ರಹಾರ ಠಾಣೆಯ ರೌಡಿಶೀಟರ್ ಸಾಗರ್ ಅಲಿಯಾಸ್ ಚಿನ್ನುನನ್ನು ಮೇ 22ರಂದು ಕೊಲೆಗೈದಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಧನುಷ್ ಅಲಿಯಾಸ್ ವಾಲೆ ಎಂಬ ಮತ್ತೂಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು: ಮೇ 22ರ ರಾತ್ರಿ ಕೆ.ಪಿ.ಅಗ್ರಹಾರದ ಚೆಲುವಪ್ಪ ಗಾರ್ಡನ್‌ನ ಮಲೇಮಹದೇಶ್ವರ ದೇವಸ್ಥಾನದ ಬಳಿ ಸಾಗರ್ ಅಲಿಯಾಸ್ ಚಿನ್ನು ಸ್ನೇಹಿತರೊಂದಿಗೆ ಮದ್ಯದ ಪಾರ್ಟಿ ಮಾಡುತ್ತಿದ್ದ. ಆ ವೇಳೆ ಕ್ಷುಲ್ಲಕ ವಿಚಾರಕ್ಕೆ ನವೀನ್, ವಾಲೆ ಇತರರ ಜತೆ ಜಗಳ ಆಗಿದೆ. ಬಳಿಕ ಆರೋಪಿಗಳು ಮಾರಕಾಸ್ತ್ರಗಳಿಂದ ಸಾಗರ್‌ನ ಮುಖ ಮತ್ತು ತಲೆಯ ಭಾಗಕ್ಕೆ ಹೊಡೆದು ಕೊಲೆಗೈದಿದ್ದರು.
ಅನುಮಾನದಿಂದ ಕೊಲೆ!: ಆರೋಪಿಗಳು ಹಾಗೂ ಸಾಗರ್ ಒಟ್ಟಿಗೆ ಪಾರ್ಟಿ ಮಾಡುತ್ತಿದ್ದು, ನವೀನ್ ಜತೆ ಮಾತನಾಡಲು ಇಬ್ಬರು ಯುವಕರು ಬಂದಿದ್ದಾರೆ. ಆದರೆ, ಆ ಯುವಕರ ವಾಹನದಲ್ಲಿ ಮಾರಕಾಸ್ತ್ರಗಳಿರುವುದನ್ನು ಗಮನಿಸಿದ ನವೀನ್, ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಬಳಿಕ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.
ನಂತರ ಅಲ್ಲಿಯೇ ಕುಳಿತಿದ್ದ ಸಾಗರ್ ಮೇಲೆ ಅನುಮಾನ ವ್ಯಕ್ತಪಡಿಸಿದ ನವೀನ್, ನನ್ನ ಹತ್ಯೆಗೆ ಯುವಕರ ಕಳುಹಿಸಿರುವೆಯಾ ಎಂದು ಗಲಾಟೆ ತೆಗೆದು ಹತ್ಯೆಗೈದಿದ್ದಾನೆ. ಆರೋಪಿ ನವೀನ್ ವಿಜಯನಗರ ಠಾಣೆ ರೌಡಿಶೀಟರ್ ಆಗಿದ್ದಾನೆ ಎಂದು ಪೊಲೀಸರು ಹೇಳಿದರು.