Advertisement

ಮನೆಯಲ್ಲಿ ಮಾರಕಾಸ್ತ್ರದೊಂದಿಗೆ ಅವಿತಿದ್ದ ಕಳ್ಳರು

11:48 AM Jan 14, 2023 | Team Udayavani |

ಬೆಂಗಳೂರು: ಮನೆಯವರ ಸಮಯ ಪ್ರಜ್ಞೆಯಿಂದ ದರೋಡೆ ಮಾಡಲು ಮನೆಯೊಳಗೆ ಅವಿತುಕೊಂಡಿದ್ದ ಏಳು ಮಂದಿ ದರೋಡೆ ಕೋರರನ್ನು ಪೊಲೀಸ್‌ ಸಹಾಯವಾಣಿಯ 112 ದೂರು ಆಧರಿಸಿ ತಲಘಟ್ಟಪುರ ಠಾಣೆಯ ಹೊಯ್ಸಳ ಪೊಲೀಸ್‌ ಸಿಬ್ಬಂದಿ ಬಂಧಿಸಿದ್ದಾರೆ.

Advertisement

ಎಲೆಕ್ಟ್ರಾನಿಕ್‌ ಸಿಟಿ ನಿವಾಸಿ ಶೇಕ್‌ ಕಲೀಂ(22), ಬಿಹಾರದ ಮೊಹಮ್ಮದ್‌ ನಿನಾಜ್‌ ಅಲಿಯಾಸ್‌ ಮಿರಾಜ್‌ (21), ಉತ್ತರ ಪ್ರದೇಶದ ಮೊಹಮ್ಮದ್‌ ಇಮ್ರಾನ್‌ ಶೇಕ್‌(24), ಸೈಯ್ಯದ್‌ ಫೈಜಲ್‌ ಆಲಿ ಅಲಿಯಾಸ್‌ ಫೈಜಲ್‌ (23), ರಾಜಸ್ಥಾನ ಮೂಲದ ರಾಮ್‌ ಬಿಲಾಸ್‌ (27), ಮಧ್ಯಪ್ರದೇಶದ ಸುನೀಲ್‌ ಡಾಂಗಿ(20) ಮತ್ತು ಒಡಿಶಾ ಮೂಲದ ರಜತ್‌ ಮಲ್ಲಿಕ್‌ (21) ಬಂಧಿತರು. ಆರೋಪಿಗಳಿಂದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ಕನಕಪುರ ರಸ್ತೆಯ ನಾರಾಯಣ ನಗರದ ನಿವಾಸಿ ರಾಹುಲ್‌ ಬಾಲಗೋಪಾಲ್‌ ಎಂಬುವರ ಮನೆಯಲ್ಲಿ ದರೋಡೆಗೆ ಯತ್ನಿಸಿದ್ದರು ಎಂದು ಪೊಲೀಸರು ಹೇಳಿದರು. ಜ.11ರಂದು ಮುಂಜಾನೆ 5.20ಕ್ಕೆ ಮನೆ ಮಾಲೀಕ ರಾಹುಲ್‌ ಬಾಲಗೋಪಾಲ್‌ ಎದ್ದು, ಕಾಫಿ ಮಾಡಿಕೊಳ್ಳಲು ಅಡುಗೆ ಮನೆಗೆ ಹೋಗಿದ್ದಾರೆ. ಆ ವೇಳೆ ಫ್ರಿಡ್ಜ್  ನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಕೆಳಗೆ ಬಿದ್ದಿದ್ದವು. ಅನುಮಾನಗೊಂಡು ತಮ್ಮ ಕೋಣೆಗೆ ಹೋಗಿ ಸಿಸಿ ಕ್ಯಾಮೆರಾ ಚೆಕ್‌ ಮಾಡಿದಾಗ ಐದು ಜನ ಕಳ್ಳರು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಮನೆಯೊಳಗಿನ ಫ‌ರ್ನಿಚರ್‌ಗಳ ಹಿಂದೆ ಅವಿತುಕೊಂಡಿರುವುದು ಕಂಡು ಬಂದಿದೆ. ಕೂಡಲೇ ತಮ್ಮ ತಂದೆಯವರಿಗೆ ತಿಳಿಸಿ, ಪಕ್ಕದ ಮನೆಯ ಸೆಕ್ಯುರಿಟಿ ಗಾರ್ಡ್‌ಗೆ ಮಾಹಿತಿ ನೀಡಿದ್ದಾರೆ.

ಬಳಿಕ ಪೊಲೀಸ್‌ ಸಹಾಯವಾಣಿ 112ಗೆ ದೂರು ನೀಡಿದ್ದಾರೆ. ನಂತರ ಮನೆಯನ್ನು ಲಾಕ್‌ ಮಾಡಿಕೊಂಡು ಹೊರಗಡೆ ಬಂದಿದ್ದರು. ನಂತರ 10 ನಿಮಿಷಗಳಲ್ಲಿ ತಲಘಟ್ಟಪುರ ಠಾಣೆಯ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಬಂದು, ಮನೆಯೊಳಗಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಟೆರಸ್‌ ಮೇಲೆ ನಿಂತು ಸಾರ್ವಜನಿಕರ ಗಮನಿಸುತ್ತಿದ್ದ ಇಬ್ಬರು ಆರೋಪಿಗಳು ನಾಪತ್ತೆಯಾಗಿದ್ದರು. ಆದರೆ, ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆನೇಕಲ್‌ ಬಸ್‌ ನಿಲ್ದಾಣದ ಬಳಿ ಬಂಧಿಸಿದ್ದಾರೆ.

ಪೊಲೀಸರ ಕ್ಷಿಪ್ರ ಕಾರ್ಯಾಚರಣೆ : ಕಳ್ಳರು ಮನೆಯೊಳಗೆ ಅಡಗಿರುವ ಮಾಹಿತಿ ತಿಳಿದ ತಕ್ಷಣವೇ ಕ್ಷಿಪ್ರ ಕಾರ್ಯಾ ಚರಣೆ ನಡೆಸಿದ ಹೊಯ್ಸಳ ವಾಹನ ಕರ್ತವ್ಯದಲ್ಲಿದ್ದ ಎಎಸ್‌ಐ ಶಿವಕುಮಾರ್‌, ಮಹದೇವ್‌ ಮತ್ತು ಕಾನ್‌ಸ್ಟೆàಬಲ್‌ ಚೆನ್ನಪ್ಪ, ಚೆನ್ನವೆಂಕಟಯ್ಯ ಕ್ಷಣಾರ್ಧದಲ್ಲಿ ಸ್ಥಳಕ್ಕೆ ಹೋಗಿ ಮನೆಯ ಮಾಲೀಕ ರಾಹುಲ್‌ ಅವರನ್ನು ಭೇಟಿ ಮಾಡಿ, ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಸುಬ್ರಹ್ಮಣ್ಯಪುರ ಉಪವಿಭಾಗದ ಸಹಾಯಕ ಪೊಲೀಸ್‌ ಆಯುಕ್ತ ಪವನ್‌ ನೇತೃತ್ವದಲ್ಲಿ ತಲಘಟ್ಟ ಪುರ ಠಾಣೆ ಪೊಲೀಸ್‌ ಇನ್‌ ಸ್ಪೆಕ್ಟರ್‌ ಜಗದೀಶ್‌ ಮತ್ತು ತಂಡ ಆರೋಪಿ ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಸುಲಿಗೆಕೋರರು ಮನೆಯ ಒಳಗೆ ನುಗ್ಗಿದ್ದು ಹೇಗೆ? : ಆರೋಪಿಗಳು ಮೂಲತಃ ಹೊರ ರಾಜ್ಯದವರಾಗಿದ್ದು, ಹಗಲಿನಲ್ಲಿ ನಗರದ ಹೊರ ವಲಯದಲ್ಲಿರುವ ಒಂಟಿ ಮನೆಗಳನ್ನು ಗುರುತಿಸಿ, ಮನೆಯವರ ಚಲನವಲನಗಳನ್ನು ಗಮನಿಸುತ್ತಿದ್ದರು. ರಾತ್ರಿ ವೇಳೆ ಮನೆಯ ಕಿಟಕಿ ಮೇಲಿನ ಸಜ್ಜಾದ ಸಹಾಯದಿಂದ ಟೆರೆಸ್‌ ಹೋಗಿ ಬಾಗಿಲಿನ ಚಿಲಕ ಮುರಿದು ಒಳಗೆ ನುಗ್ಗಿ ಮನೆಯವರ ಮೇಲೆ ಹಲ್ಲೆ ಮಾಡಿ ದರೋಡೆ ಮಾಡುತ್ತಿದ್ದರು. ಈ ಪೈಕಿ ಇಬ್ಬರು ಮನೆಯ ಟೆರೆಸ್‌ ಮೇಲೆ ನಿಂತು ಯಾರಾದರೂ ಬರಬಹುದೇ ಎಂದು ಗಮನಿಸುತ್ತಿದ್ದರು. ಉಳಿದವರು ಡಕಾಯಿತಿಗಾಗಿ ಮನೆಯೊಳಗೆ ನುಗ್ಗುತ್ತಾರೆ. ಆದರೆ, ರಾಹುಲ್‌ ಬಾಲಗೋಪಾಲ್‌ ಮನೆಗೆ ನುಗ್ಗಿದಾಗ ಮನೆ ಮಾಲೀಕರು ಎಚ್ಚರಗೊಂಡಿದ್ದರಿಂದ ಅಲ್ಲೇ ಅವಿತುಕೊಂಡಿದ್ದು, ಆ ಸಮಯದಲ್ಲಿ ಕುಟುಂಬ ಸದಸ್ಯರ ಸಮಯ ಪ್ರಜ್ಞೆಯಿಂದ ಕಂಟ್ರೋಲ್‌ ರೂಂಗೆ ಮಾಹಿತಿ ನೀಡಿರುವುದರಿಂದ ದರೋಡೆಕೋರರನ್ನು ಬಂಧಿಸುವಲ್ಲಿ ಪೊಲೀಸರಿಗೆ ನೆರವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next