ಬೆಂಗಳೂರು: ಇತ್ತೀಚೆಗೆ ಮನೆಯಲ್ಲಿ ಒಂಟಿ ಯಾಗಿದ್ದ ವೈದ್ಯೆಯ ತಾಯಿಯ ಕೈ-ಕಾಲು ಕಟ್ಟಿ ದರೋಡೆ ಮಾಡಿದ್ದ ಪ್ರಕರಣದಲ್ಲಿ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು, ತಂದೆ-ಮಗ ಸೇರಿ ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಒಡಿಶಾ ಮೂಲದ ಜ್ಞಾನರಂಜನ್ ನಾಥ್ ಅಲಿಯಾಸ್ ಬಾಪಿ (36), ಶ್ರೀಕಾಂತ್ ದಾಶ್(40), ಸುಭಾಷ್ ಬಿಸ್ವಾಲ್(41), ಬಿಷ್ಣು ಮೋಹನ್ ಖಟುವಾ(35), ಬಿಷ್ಣು ಚರಣ್ ಬೆಹೆರಾ(61) ಹಾಗೂ ಸುದಾಂಶು ಬೆಹೆರಾ(21) ಬಂಧಿತರು.
ಆರೋಪಿಗಳಿಂದ 3.50 ಲಕ್ಷ ರೂ. ಮೌಲ್ಯದ 66 ಗ್ರಾಂ ಚಿನ್ನಾಭರಣ, 1.50 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ. ಜ.3ರಂದು ಕುಮಾರಸ್ವಾಮಿ ಲೇಔಟ್‌ನ 6ನೇ ಮುಖ್ಯರಸ್ತೆ 6ನೇ ಅಡ್ಡರಸ್ತೆಯ ನಿವಾಸಿ ಶ್ರೀಲಕ್ಷ್ಮೀ(57) ಎಂಬುವರ ಮನೆಗೆ ನಾಲ್ವರು ದುಷ್ಕರ್ಮಿಗಳು ನುಗ್ಗಿ ಅವರ ಕೈ-ಕಾಲು ಕಟ್ಟಿ ಬಾಯಿಗೆ ಪ್ಲಾಸ್ಟ್ ಹಾಕಿ ಬೆದರಿಸಿ, ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಶ್ರೀಲಕ್ಷ್ಮೀಯ ಪುತ್ರಿ ವೈದ್ಯೆ ವೈಷ್ಣವಿ ಸುರೇಶ್ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಬಿ.ಎಂ.ಕೊಟ್ರೇಶಿ ನೇತೃತ್ವದ ತಂಡ ಘಟನೆ ನಡೆದು 48 ಗಂಟೆಯೊಳಗೆ ಎಲ್ಲ ಆರೋಪಿಗಳನ್ನು ಬಂಧಿಸಿದೆ.
ವೈದ್ಯೆ ವೈಷ್ಣವಿ ಸುರೇಶ್ ಅವರ ವಿವಾಹವಾಗಿದ್ದು, ಬಸವನಗುಡಿಯ ಲಾಲ್‌ಬಾಗ್ ವೆಸ್ಟ್‌ಗೇಟ್ ಬಳಿಯ ಪತಿಯ ಮನೆಯಲ್ಲಿ ವಾಸವಾಗಿದ್ದರು. ಗರ್ಭವತಿಯಾಗಿದ್ದರಿಂದ ತಿಂಗಳ ಹಿಂದೆ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ತಾಯಿ ಮನೆಗೆ ಬಂದಿದ್ದರು. ಇಲ್ಲಿಂದಲೇ ಕುಮಾರಸ್ವಾಮಿ ಲೇಔಟ್ ನಲ್ಲಿರುವ ಕ್ಲಿನಿಕ್‌ಗೆ ಹೋಗಿ ಬರುತ್ತಿದ್ದಾರೆ. ಈ ಮನೆಯಲ್ಲಿ ತಾಯಿ ಶ್ರೀಲಕ್ಷ್ಮೀ ಹಾಗೂ ಸಹೋದರ ಪವನ್‌ಕುಮಾರ್ ವಾಸವಾಗಿದ್ದರು.
ವೃದ್ಧೆಯ ಕೈ, ಕಾಲು ಕಟ್ಟಿ ದರೋಡೆ: ಜ.3ರಂದು ಸಂಜೆ ವೈದ್ಯೆ ವೈಷ್ಣವಿ ಸುರೇಶ್ ಕ್ಲಿನಿಕ್‌ಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ತಾಯಿ ಶ್ರೀಲಕ್ಷ್ಮೀ ಒಂಟಿಯಾಗಿದ್ದರು. ಇದೇ ಸಮಯಕ್ಕೆ ನಾಲ್ವರು ದುಷ್ಕರ್ಮಿಗಳು, ಏಕಾಏಕಿ ಮನೆಗೆ ನುಗ್ಗಿ ಶ್ರೀಲಕ್ಷ್ಮೀ ಅವರ ಕೈ-ಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಾಕಿ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ರಾತ್ರಿ 9 ಗಂಟೆಗೆ ವೈಷ್ಣವಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿತ್ತು.
ದರೋಡೆ ವಿಚಾರ ಗೊತ್ತಿಲ್ಲ : ಶ್ರೀಲಕ್ಷೀ ಅವರ ಮನೆಯಲ್ಲಿ ಪ್ರಾಮಾಣಿಕರಾಗಿ ಕೆಲಸ ಮಾಡಿಕೊಂಡಿದ್ದ ಕಲ್ಪನಾ ಹಾಗೂ ಶಿವಾಜಿ ದಂಪತಿಗೆ ಮಾಲೀಕರ ಮನೆಯಲ್ಲಿ ತಂದೆ ಹಾಗೂ ಸಹೋದರ ಸೇರಿ ದರೋಡೆ ಮಾಡಿಸಿರುವ ವಿಚಾರ ಗೊತ್ತಿಲ್ಲ. ವಸತಿ ಬದಲಿಸುತ್ತಿರುವ ಬಗ್ಗೆಯಷ್ಟೇ ತಾಯಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿಯನ್ನು ಪಡೆದ ಅಪ್ಪ-ಮಗ ಈ ದರೋಡೆ ಸ್ಕೆಚ್ ಹಾಕಿ ಕಾರ್ಯಗತಗೊಳಿಸಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.