ಬೆಂಗಳೂರು: ಪ್ರಿಯತಮೆಯನ್ನು ವೇಶ್ಯಾವಾಟಿಕೆ ಅಡ್ಡೆಗೆ ದೂಡಲು ಯತ್ನಿಸಿದ ಪ್ರಿಯಕರನನ್ನು ತನ್ನ ಪತಿ ಜತೆ ಸೇರಿ ಕೊಲೆಗೈದು, ಸಾಕ್ಷ್ಯ ನಾಶವಡಿಸಲು ಮೃತದೇಹವನ್ನು ರಸ್ತೆ ಬದಿ ಎಸೆದಿದ್ದ ಪ್ರಕರಣವನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು 48 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರ ಪ್ರದೇಶ ಮೂಲದ ರೀನಾ(29), ಆಕೆಯ ಪತಿ ಗಂಗೇಶ್(32) ಮತ್ತು ಈತನ ಸ್ನೇಹಿತ ಬಿಜೋಯ್ ಕುಮಾರ್(28) ಬಂಧಿತರು.
ಆರೋಪಿಗಳು ಜ.3ರಂದು ಅಸ್ಸಾಂ ಮೂಲದ ನಿಬಾಶೀಸ್ ಪಾಲ್ (32) ಎಂಬಾತ ನನ್ನು ಕೊಲೆಗೈದು, ಮೃತದೇಹವನ್ನು ಬಸಾಪುರದ ನೈಸ್ ರಸ್ತೆಯಲ್ಲಿ ಎಸೆದು ಪರಾರಿಯಾಗಿದ್ದರು. ಈ ಸಂಬಂಧ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆರಂಭ ದಲ್ಲಿ ಮೃತನ ಮಾಹಿತಿ ಸಿಕ್ಕಿರಲಿಲ್ಲ. ಕೆಲ ದಿನಗಳ ಬಳಿಕ ಮೃತನ ಮಾಹಿತಿ ದೊರೆತು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಉತ್ತರ ಪ್ರದೇಶ ಮೂಲದ ರೀನಾ ಮತ್ತು ಗಂಗೇಶ್ ದಂಪತಿಯಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ಬಳಿ ವಾಸವಿದ್ದರು. ರೀನಾ ಗಾರ್ಮೆಂಟ್ಸ್ ಕೆಲಸಗಾರ್ತಿ, ಗಂಗೇಶ್ ಪೇಟಿಂಗ್ ಕೆಲಸ ಮಾಡುತ್ತಿದ್ದ. ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ಕೊಲೆಯಾದ ನಿಬಾಶೀಸ್ ಪಾಲ್ ಕೋರಿಯರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಮದ್ಯವ್ಯಸನಿಯಾಗಿದ್ದ ಗಂಗೇಶ್ ಪತ್ನಿ ಮತ್ತು ಮಕ್ಕಳನ್ನು ಬಿಟ್ಟು ಕೆಲಸದ ನಿಮಿತ್ತ ಉತ್ತರ ಪ್ರದೇಶಕ್ಕೆ ಹೋಗಿದ್ದ. ಈ ಮಧ್ಯೆ ಯುವತಿಯೊಬ್ಬಳ ಜನ್ಮದಿನಕ್ಕೆ ಹೋದಾಗ ರೀನಾ ಪರಿಚಯಿಸಿ ಕೊಂಡಿದ್ದ ನಿಬಾಶೀಸ್ ಪಾಲ್ ಆಕೆ ಜತೆ ಅಕ್ರಮ ಸಂಬಂಧ ಹೊಂದಿದ್ದ. ಅಲ್ಲದೆ, ಆಕೆಯೊಂದಿಗೆ ಎಲ್ಲೆಡೆ ಸುತ್ತಾಡುತ್ತಿದ್ದ ಎಂದು ಪೊಲೀಸರು ಹೇಳಿದರು.
ವೇಶ್ಯಾವಾಟಿಕೆಗೆ ತಳ್ಳಲು ಯತ್ನ: ನಿಬಾಶೀಸ್ ಪಾಲ್ ಪ್ರಿಯತಮೆ ರೀನಾಳನ್ನು ವೇಶ್ಯಾವಾಟಿಕೆ ಅಡ್ಡಗೆ ದೂಡಲು ಯತ್ನಿಸಿದ್ದ. ಆಕೆ ಒಪ್ಪದಿ ದ್ದಾಗ ಕಿರುಕುಳ ನೀಡಲು ಮುಂದಾದ. ಅದರಿಂದ ಬೇಸತ್ತ ರೀನಾ ಕೆಲ ದಿನಗಳ ಕಾಲ ಕೂಡ್ಲು ಬಳಿ ಆತನ ಜತೆ ಪತ್ನಿಯಂತೆ ವಾಸವಾಗಿದ್ದಳು. ಅಲ್ಲಿಯೂ ಕಿರುಕುಳ ನೀಡುತ್ತಿದ್ದ. ಅದರಿಂದ ಆಕ್ರೋಶಗೊಂಡ ರೀನಾ, ತನ್ನ ಪತಿಗೆ ಕರೆ ಮಾಡಿ ನಿಬಾಸೀಸ್ ಪಾಲ್‌ನ ಕಿರುಕುಳದ ಬಗ್ಗೆ ಹೇಳಿದ್ದಳು. ಬಳಿಕ ಬೆಂಗಳೂರಿಗೆ ಬಂದು ಪತ್ನಿ ಜತೆ ಚರ್ಚಿಸಿದ ಗಂಗೇಶ್ ನಿಬಾಶೀಸ್ ಪಾಲ್ ಕೊಲೆಗೆ ಸಂಚು ರೂಪಿಸಿ ಕೊಲೆಗೈದು ನೈಸ್ ರಸ್ತೆ ಬಳಿ ಎಸೆದಿದ್ದರು ಎಂದು ಪೊಲೀಸರು ಹೇಳಿದರು.
ಸೀರೆ, ವೈಯರ್‌ನಿಂದ ಕುತ್ತಿಗೆ ಬಿಗಿದು ಕೊಲೆ : ಜ.2ರಂದು ತಡರಾತ್ರಿ ಮನೆಗೆ ಬಂದ ನಿಬಾಶೀಸ್ ಪಾಲ್‌ಗೆ ಕಂಠಪೂರ್ತಿ ಮದ್ಯಕುಡಿಸಿದ್ದಾರೆ. ನಂತರ ಸೀರೆ ಮತ್ತು ವೈಯರ್‌ನಿಂದ ಕುತ್ತಿಗೆ ಬಿಗಿದು ಕೊಲೆಗೈದಿದ್ದಾರೆ. ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಗಂಗೇಶ್, ಸ್ನೇಹಿತ ಬಿಜೋಯ್ ಕುಮಾರ್ ಮನೆಗೆ ಹೋಗಿ ತಮ್ಮ ಮಗುವಿಗೆ ಆರೋಗ್ಯ ಸರಿಯಿಲ್ಲ ಎಂದು ಸುಳ್ಳು ಹೇಳಿ, ತನ್ನ ಮನೆಗೆ ಕರೆದೊಯ್ದಿದ್ದಾನೆ. ಮನೆಗೆ ಬಂದ ಬಿಜೋಯ್ ಕುಮಾರ್‌ಗೆ ವಿಷಯ ತಿಳಿಸಿ, ಆತನ ಸಹಾಯ ಪಡೆದು ಮೃತದೇಹವನ್ನು ಸಾಗಾಟ ಮಾಡಿದ್ದರು. ಪಲ್ಸರ್ ಬೈಕ್‌ನಲ್ಲಿ ಗಂಗೇಶ್ ಮತ್ತು ಬಿಜಿಯೋ ಕುಮಾರ್ ನಿಬಾಶೀಸ್ ಪಾಲ್ ಮೃತದೇಹ ಇರಿಸಿಕೊಂಡು ಬಸಾಪುರದ ನೈಸ್ ರಸ್ತೆ ಪಕ್ಕದಲ್ಲಿ ಎಸೆದು, ಮನೆಯನ್ನು ಖಾಲಿ ಮಾಡಿಕೊಂಡು ಟಾಟಾಏಸ್ ವಾಹನದಲ್ಲಿ ಪರಾರಿಯಾಗಿದ್ದರು. ಈ ಸಂಬಂಧ ಸ್ಥಳೀಯ ಸಿಸಿ ಕ್ಯಾಮೆರಾ ಶೋಧಿಸಿದಾಗ ಆರೋಪಿಗಳು ಟಾಟಾಏಸ್ ವಾಹನದಲ್ಲಿ ಹೋಗುತ್ತಿರುವ ದೃಶ್ಯಾವಳಿ ಪತ್ತೆಯಾಗಿತ್ತು. ವಾಹನ ಚಾಲಕನನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ಶಿವಮೊಗ್ಗದ ಶಿಕಾರಿಪುರಕ್ಕೆ ಬಿಟ್ಟು ಬಂದಿದ್ದಾಗಿ ತಿಳಿಸಿದ್ದ. ಈ ಹೇಳಿಕೆ ಆಧರಿಸಿ ಆರೋಪಿಗಳನ್ನು ಶಿಕಾರಿಪುರದಲ್ಲಿ ಬಂಧಿಸಿ ನಗರಕ್ಕೆ ಕರೆತರಲಾಗಿದೆ ಎಂದು ಪೊಲೀಸರು ಹೇಳಿದರು.
ಎಲೆಕ್ಟ್ರಾನಿಕ್ ಸಿಟಿ ಎಸಿಪಿ ಎ.ಬಿ. ಸುಧಾಕರ್ ಮತ್ತು ಠಾಣಾಧಿಕಾರಿ ನಂಜೇಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.