ಹಾಸನ: ಇಲ್ಲಿನ ಕುವೆಂಪು ನಗರದ ಡಿಟಿಡಿಸಿ ಕೊರಿಯರ್ ಕಚೇರಿಯಲ್ಲಿ ಮಿಕ್ಸಿ ಸ್ಫೋಟದ ರಹಸ್ಯವನ್ನು ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನ ಪ್ರೀತಿಗೆ ಸಹಕರಿಸದ ಮಹಿಳೆಯನ್ನು ಕೊಲೆ ಮಾಡಲು ಬೆಂಗಳೂರಿನ ಅನೂಪ್ ಕುಮಾರ್ ಎಂಬಾತ ಮಿಕ್ಸಿಯಲ್ಲಿ ಡಿಟೋನೇಟರ್ ಅಳವಡಿಸಿ ಕೊರಿಯರ್ ಕಳುಹಿಸಿದ್ದು ದೃಢಪಟ್ಟಿದೆ.
ಮಹಿಳೆಯ ಕೊಲೆಗೆ ಸಂಚು ರೂಪಿಸಿ ಕೊರಿಯರ್ ಕಳುಹಿಸಿದ್ದ ಆರೋಪಿ ಬೆಂಗಳೂರಿನ ಅನೂಪ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಹಾಸನದ ವಿಚ್ಛೇದಿತ ಮಹಿಳೆಯನ್ನು ತನ್ನ ಬಲೆಗೆ ಬೀಳಿಸಿಕೊಳ್ಳಲು ಪ್ರಯತ್ನಿಸಿದ್ದ ಅನೂಪ್ ಕುಮಾರ್ ಈ ಹಿಂದೆಯೂ ಆಕೆಗೆ ಹಲವು ಉಡುಗೊರೆಗಳನ್ನು ಕೊರಿಯರ್ ಮೂಲಕ ಕಳುಹಿಸಿದ್ದ. ವಿವಾಹವಾಗಿ ಮಕ್ಕಳಿರುವ ಅನೂಪ್ ಕುಮಾರ್ ವೈವಾಹಿಕ ಜಾಲತಾಣಗಳಿಗೆ ತನ್ನ ವಿವರವನ್ನು ಅಪ್‌ಲೋಡ್ ಮಾಡಿ ಮಹಿಳೆಯೊಂದಿಗೆ ಸಂಪರ್ಕ ಸಾಧಿಸುತ್ತಿದ್ದ. ತನ್ನ ಬಳಿ ಕೆಜಿಗಟ್ಟಲೆ ಬಂಗಾರವಿದೆ, ಲಕ್ಷಗಟ್ಟಲೆ ಹಣವಿದೆ ಎಂದು ಹಣದ ಕಂತೆಗಳನ್ನು ಹಂಡೆಗಳಿಗೆ ತುಂಬಿದ್ದ ನಕಲಿ ದೃಶ್ಯಗಳನ್ನು ವಾಟ್ಸಾಪ್‌ನಲ್ಲಿ ಕಳುಹಿಸಿ ಮಹಿಳೆಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.
ಇತ್ತೀಚೆಗೆ ಹಾಸನದ ಮಹಿಳೆ ಈತನಿಂದ ದೂರವಿರಲು ನಿರ್ಧರಿಸಿದ್ದಳು. ಆಕೆಯ ಮೇಲೆ ದ್ವೇಷ ಸಾಧಿಸಲು ಆರಂಭಿಸಿದ್ದ ಅನೂಪ್ ಕುಮಾರ್ ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದಲೇ ಮಿಕ್ಸಿಗೆ ಡಿಟೋನೇಟರ್ ಅಳವಡಿಸಿದ್ದ ಕೊರಿಯರ್ ಮೂಲಕ ಕಳುಹಿಸಿದ್ದ ಎನ್ನಲಾಗಿದೆ.