ಬೆಂಗಳೂರು: ರಸ್ತೆಯಲ್ಲಿ ಸಿಕ್ಕ ಪೆನ್‌ಡ್ರೈವ್‌ನಲ್ಲಿದ್ದ ಯುವತಿಯೊಬ್ಬರ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಮುಂದಿಟ್ಟುಕೊಂಡು ಹಣ ನೀಡುವಂತೆ ಆಕೆಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಪೇಂಟರ್‌ವೊಬ್ಬನನ್ನು ಆಗ್ನೇಯ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜೇಂದ್ರನಗರ ನಿವಾಸಿ ಶೋಯೆಬ್ (22) ಬಂಧಿತ. ಆರೋಪಿ ಯಿಂದ ಸಂತ್ರಸ್ತೆಗೆ ಸೇರಿದ ಪೆನ್‌ಡ್ರೈವ್ ಮತ್ತು ಆರೋಪಿಯ ಮೊಬೈಲ್ ಹಾಗೂ ಸಿಮ್‌ಕಾರ್ಡ್ ಜಪ್ತಿ ಮಾಡಲಾಗಿದೆ.
ಪೇಂಟಿಂಗ್ ಕೆಲಸ ಮಾಡುವ ಆರೋಪಿ ರಸ್ತೆಯಲ್ಲಿ ಸಿಕ್ಕ ಪೆನ್‌ಡ್ರೈವ್‌ನಲ್ಲಿದ್ದ ಮಾಹಿತಿಯನ್ನು ದುರುಪಯೋಗ ಪಡಿಸಿಕೊಂಡು ಕೃತ್ಯ ಎಸಗಿದ್ದಾನೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.
ಮುಂಬೈ ಮೂಲದ ಮಹಿಳಾ ಸಾಫ್ಟ್ವೇರ್ ಎಂಜಿನಿಯರ್ ನಗರದ ಬೇಗೂರು ರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಇತ್ತೀಚೆಗೆ ಆಕೆ ನಡೆದು ಹೋಗುವಾಗ ಪೆನ್‌ಡ್ರೈವ್ ಕಳೆದುಕೊಂಡಿದ್ದಾರೆ. ಆ ಪೆನ್‌ಡ್ರೈವ್ ಆರೋಪಿಗೆ ಸಿಕ್ಕಿದೆ. ಬಳಿಕ ಅದನ್ನು ಕಂಪ್ಯೂಟರ್‌ನಲ್ಲಿ ಹಾಕಿಕೊಂಡು ಪರಿಶೀಲಿಸಿದಾಗ ಅದರಲ್ಲಿ ಆಕೆಗೆ ಸೇರಿದ ಖಾಸಗಿ ಫೋಟೋ ಮತ್ತು ವಿಡಿಯೋಗಳು ಪತ್ತೆಯಾಗಿವೆ. ಅಲ್ಲದೆ, ಪೆನ್ ಡ್ರೈವ್‌ನಲ್ಲಿ ಸಂತ್ರಸ್ತೆಯ ಕೆಲ ದಾಖಲೆಗಳಲ್ಲಿದ್ದ ಮೊಬೈಲ್ ನಂಬರ್ ಹಾಗೂ ವಾಟ್ಸ್‌ಆ್ಯಪ್ ಡಿಟೇಲ್ಸ್‌ಗಳು ಸಿಕ್ಕಿವೆ. ಬಳಿಕ ಆಕೆಯ ಮೊಬೈಲ್ ನಂಬರ್‌ನ ವಾಟ್ಸ್‌ಆ್ಯಪ್‌ಗೆ ಖಾಸಗಿ ಫೋಟೋ ಹಾಗೂ ವಿಡಿಯೊಗಳನ್ನು ಕಳುಹಿಸಿದ್ದಾನೆ. ಜತೆಗೆ ಪೆನ್‌ಡ್ರೈವ್ ಫೋಟೊವನ್ನು ಕಳುಹಿಸಿದ್ದಾನೆ.
ಬಳಿಕ ಯುವತಿ ಜತೆಗೆ ಚಾಟಿಂಗ್ ಆರಂಭಿಸಿರುವ ಆರೋಪಿ ಈ ಪೆನ್‌ಡ್ರೈವ್ ವಾಪಸ್ ಕೊಡಬೇಕಾದರೆ, 70 ಸಾವಿರ ರೂ. ಕೊಡಬೇಕು. ನಾನು ನೀಡುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಹಾಕಬೇಕು ಎಂದು ಕಿರುಕುಳ ನೀಡಲು ಆರಂಭಿಸಿದ್ದಾನೆ. ಅದರಿಂದ ಬೇಸತ್ತ ಸಂತ್ರಸ್ತೆ ಸೆನ್ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.