ಬೆಂಗಳೂರು: ಸೆಕೆಂಡ್ ಹ್ಯಾಂಡ್ ಹಾಗೂ ಕಳುವಾಗಿದ್ದ ಐಷಾರಾಮಿ ಕಾರುಗಳನ್ನು ಖರೀದಿಸಿ ನಂಬರ್ ಪ್ಲೇಟ್ ಬದಲಾಯಿಸಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪುಲಕೇಶಿನಗರ ಪೊಲೀಸರು ಬಂಧಿಸಿದ್ದಾರೆ.
ಕೆ.ಜಿ.ಹಳ್ಳಿಯ ವಿನೋಬ ನಗರ ನಿವಾಸಿ ಜಾಬೀರ್ ಷರೀಫ್ (30), ವಸಂತನಗರ ನಿವಾಸಿ ಮನೀಶ್ (33), ಬೆಳಗಾವಿ ಜಿಲ್ಲೆಯ ಮಾರುತಿನಗರ ನಿವಾಸಿ ಸೈಯದ್ ಇಮಾಮ್(23) ಬಂಧಿತರು. ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ 16 ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಇತ್ತೀಚೆಗೆ ವಸಂತ್ ಕುಮಾರ್ ಎಂಬುವರಿಂದ ಇನೋವಾ ಕ್ರಿಸ್ಟಾ ಕಾರು ಖರೀದಿಸುವುದಾಗಿ ಹೇಳಿ, 50 ಸಾವಿರ ರೂ.ಮುಂಗಡ ಹಣ ಕೊಟ್ಟಿದ್ದರು. ನಂತರ ಬಾಕಿ ಹಣ ಮತ್ತು ಬ್ಯಾಂಕ್ ಲೋನ್ ಕೂಡ ಪಾವತಿ ಮಾಡದೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ನಂತರ ಯಾಕೀಬ್ ಮತ್ತು ಮಸೂದ್ ಎಂಬುವರ ಬಳಿ ಕಾರು ಇರುವುದಾಗಿ ತಿಳಿದು ಹೋಗಿ ನೋಡಿದಾಗ, ಕಾರಿನ ನಂಬರ್ ಪ್ಲೇಟ್ ಬದಲಿಸಿರುವುದು ಗೊತ್ತಾಗಿದೆ. ಈ ಸಂಬಂಧ ಯಾಕೀಬ್ ಮತ್ತು ಮಸೂದ್ ಕೇಳಿದಾಗ , ಪ್ರಾಣ ಬೆದರಿಕೆ ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಪುಲಕೇಶಿನಗರ ಠಾಣೆಯ ಇನ್‌ಸ್ಪೆಕ್ಟರ್ ಪಿ.ಬಿ. ಕಿರಣ್, ಪಿಎಸ್‌ಐ ರುಮಾನ್ ಪಾಷಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಲೋನ್‌ಗಿಂತ ಹೆಚ್ಚು ಮೌಲ್ಯಕ್ಕೆ ಖರೀದಿ : ಆರೋಪಿಗಳ ಪೈಕಿ ಜಾಬೀರ್ ಷರೀಫ್ ಕಾರು ಕಳ್ಳನಾಗಿದ್ದು, ದೆಹಲಿ, ಮುಂಬೈನಲ್ಲೂ ಐಷಾರಾಮಿ ಕಾರುಗಳ ಕಳವು ಮಾಡುತ್ತಿದ್ದ. ಅಲ್ಲದೆ, ಬ್ಯಾಂಕ್ ಲೋನ್ ಇರುವ ಕಾರುಗಳನ್ನೇ ಲೋನ್‌ಗಿಂತ ಸ್ವಲ್ಪ ಹೆಚ್ಚಿನ ಮೌಲ್ಯಕ್ಕೆ ಖರೀದಿಸುತ್ತಿದ್ದ. ಬಳಿಕ ಸಾಲವನ್ನು ಸರಿಯಾಗಿ ಪಾವತಿಸುತ್ತಿರಲಿಲ್ಲ. ಇನ್ನು ಇತರೆ ಇಬ್ಬರು ಆರೋಪಿಗಳು ಕಾರು ಡೀಲರ್ ಗಳಾಗಿದ್ದಾರೆ. ನಂತರ ಮೂವರು ಖರೀದಿ ಮತ್ತು ಕಳವು ಕಾರುಗಳ ನಂಬರ್ ಪ್ಲೇಟ್‌ಗಳನ್ನು ಬದಲಾಯಿಸಿ, ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು. ಆರೋಪಿಗಳ ವಿಚಾರಣೆಯಲ್ಲಿ ಬೆಂಗಳೂರು ಸೇರಿ ದೇಶದ ವಿವಿಧ ರಾಜ್ಯಗಳಿಂದ ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರುಗಳನ್ನು ಖರೀದಿಸಿ ಮತ್ತು ಕಳವು ಮಾಡಲಾದ ಕಾರುಗಳ ನಂಬರ್ ಪ್ಲೇಟ್ ಬದಲಾಯಿಸಿ ಮಾರಾಟ ಮಾಡುತ್ತಿದ್ದರು. ಅದರಿಂದ ಬಂದ ಹಣವನ್ನು ಮೋಜು-ಮಸ್ತಿಗಾಗಿ ಬಳಸಿಕೊಳ್ಳುತ್ತಿದ್ದರು ಎಂಬುದಾಗಿ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಹೇಳಿದರು