Advertisement

ರಾತ್ರಿ ವೇಳೆ ಗಾಂಜಾ ಸೇವಿಸಿ ಮನೆಗಳ್ಳತನ!

01:13 PM Oct 15, 2022 | Team Udayavani |

ಬೆಂಗಳೂರು: ಹಗಲಿನಲ್ಲಿ ಹೊತ್ತು ಬೀಗ ಹಾಕಿದ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಗಾಂಜಾ ಸೇವಿಸಿ ಮನೆ ಕಳವು ಮಾಡುತ್ತಿದ್ದ ಸಹೋದರರು ಸೇರಿ ಮೂವರನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಪರಪ್ಪನ ಅಗ್ರಹಾರದ ಭುವನೇಶ್ವರಿ ಲೇಔಟ್‌ ನಿವಾಸಿಗಳಾದ ಗುಣಶೇಖರ್‌ ಅಲಿಯಾಸ್‌ ಕೊರಂಗು (21), ಆತನ ಸಹೋದರ ಅಜಿತ್‌ (22), ತಮಿಳುನಾಡಿನ ಧರ್ಮಪುರಿಯ ಮುತ್ತುಕುಮಾರ್‌ (27) ಬಂಧಿತರು. ಆರೋಪಿಗಳಿಂದ 49.17 ಲಕ್ಷ ರೂ. ಮೌಲ್ಯದ 1 ಕೆ.ಜಿ. 92 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಇವರ ಬಂಧನದಿಂದ ಹೆಣ್ಣೂರು ಪೊಲೀಸ್‌ ಠಾಣೆ 8, ಕೊತ್ತನೂರು 3, ರಾಮಮೂರ್ತಿನಗರ, ಯಲಹಂಕ , ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪಿಳಮೇಡು ಪೊಲೀಸ್‌ ಠಾಣೆಯಲ್ಲಿ ತಲಾ 1 ಸೇರಿದಂತೆ ಒಟ್ಟು 14 ಮನೆಗಳವು ಪ್ರಕರಣಗಳು ಬೆಳಕಿಗೆ ಬಂದಿದೆ. ಆರೋಪಿಗಳು ಹಗಲಿನಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಿದ್ದರು. ನಂತರ ಬೀಗ ಮುರಿದು ಮನೆಗೆ ನುಗ್ಗಿ ನಗದು, ಚಿನ್ನಾಭರಣ ದೋಚುತ್ತಿದ್ದರು. ನಂತರ ಕದ್ದ ವಸ್ತುಗಳನ್ನು ತಮಿಳುನಾಡು ಹಾಗೂ ಕೇರಳಕ್ಕೆ ಕೊಂಡೊಯ್ದು ಗಿರಾಕಿಗಳನ್ನು ಹುಡುಕಿ, ಕಡಿಮೆ ಬಲೆಗೆ ಮಾರಾಟ ಮಾಡುತ್ತಿದ್ದರು. ಮಾರಾಟ ಮಾಡಿ ಬಂದ ಹಣದಲ್ಲಿ ಮಾದಕ ವಸ್ತು ಸೇವನೆ, ವೇಶ್ಯೆಯರ ಸಹವಾಸಕ್ಕೆ ದುಂದು ವೆಚ್ಚ ಮಾಡುತ್ತಿದ್ದರು. ಹಣ ಖಾಲಿಯಾದ ಬಳಿಕ ಮತ್ತೆ ಮನೆಗಳ್ಳತನಕ್ಕೆ ಇಳಿಯುತ್ತಿದ್ದರು.

ಕದ್ದ ಮೊಬೈಲ್‌ ಬಳಕೆ: ಪೊಲೀಸರಿಗೆ ತಮ್ಮ ಸುಳಿವು ಸಿಗಬಾರದು ಎಂಬ ಉದ್ದೇಶದಿಂದ ಆರೋಪಿಗಳು ಮನೆಗಳ್ಳತನಕ್ಕೆ ಹೋಗುತ್ತಿದ್ದಾಗ ಕದ್ದ ಮೊಬೈಲ್‌ಗ‌ಳನ್ನೇ ಬಳಕೆ ಮಾಡುತ್ತಿದ್ದರು. ಮನೆಗಳ್ಳತನಕ್ಕೂ ಮುನ್ನ ಮೂವರೂ ಗಾಂಜಾ ಸೇವಿಸುತ್ತಿದ್ದರು. ಬಂಧಿತರ ಪೈಕಿ ಪ್ರಮುಖ ಆರೋಪಿ ಗುಣಶೇಖರ್‌ ತನ್ನ 17ನೇ ವಯಸ್ಸಿನಲ್ಲೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಎರಡು ಬಾರಿ ಬಾಲಮಂದಿರಕ್ಕೆ ಸೇರಿ ಬಿಡುಗಡೆಯಾಗಿದ್ದ. ಜೈಲಿನಿಂದ ಹೊರ ಬಂದು ಮತ್ತೆ ಹಳೆ ಚಾಳಿ ಮುಂದುವರಿಸಿದ್ದ. ಆತನ ಕೃತ್ಯಗಳಿಗೆ ಸಹೋದರ ಅಜಿತ್‌ ಹಾಗೂ ಸ್ನೇಹಿತ ಮುತ್ತುಕುಮಾರ್‌ ಸಹಕಾರ ನೀಡುತ್ತಿದ್ದರು. ಹೆಣ್ಣೂರು ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next