ಬೆಂಗಳೂರು: ಸುಲಿಗೆ, ಮನೆಗಳವು, ಸರಗಳ್ಳತನ ಸೇರಿ 30 ಅಪರಾಧ ಪ್ರಕರಣಗಳ ಎಸಗಿ 4 ವರ್ಷಗಳಿಂದ ತಲೆಮರೆಕೊಂಡಿದ್ದ ಖತರ್ನಾಕ್ ಆರೋಪಿಯನ್ನು ಕೊನೆಗೂ ಅಶೋಕ್‌ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಸೀಫ್ ಅಲಿಯಾಸ್ ಪಿಸ್ತೂಲ್ ಬಂಧಿತ. ಆಸೀಫ್ 3 ವರ್ಷಗಳ ಹಿಂದೆ ದರೋಡೆ, ಸುಲಿಗೆ, ಮನೆ ಕಳವು, ಸರಗಳ್ಳತನ ಸೇರಿ 30ಕ್ಕೂ ಅಧಿಕ ಅಪರಾಧ ಪ್ರಕರಣ ಎಸಗಿದ್ದ. ಕೆಲ ಪ್ರಕರಣಗಳಲ್ಲಿ ಬಂಧನ ಕ್ಕೊಳಗಾಗಿ ಜಾಮೀನಿನ ಮೇಲೆ ಹೊರಬಂದಿದ್ದ. ಆದರೆ, ನಂತರ ಕೋರ್ಟ್‌ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಅಪರಾಧ ಎಸಗಿದ್ದ ಹಿನ್ನೆಲೆಯಲ್ಲಿ ಆತನಿಗಾಗಿ ವಿವಿಧೆಡೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದರು. ಆದರೆ, ಚಲಾಕಿಯಾಗಿದ್ದ ಆಸೀಫ್ ಎಲ್ಲೂ ತನ್ನ ಸಣ್ಣ ಸುಳಿವನ್ನೂ ಬಿಟ್ಟು ಕೊಡಲಿಲ್ಲ. ಆಗಾಗ ತಾನು ವಾಸಿಸುತ್ತಿದ್ದ ಮನೆಗಳನ್ನು ಬದಲಾಯಿಸುತ್ತಿದ್ದ. ಹೀಗಾಗಿ ಆತನ ಪತ್ತೆ ಸವಾಲಾಗಿತ್ತು.
ಶಾಲಾ ವಾಹನದಲ್ಲಿ ಹೋಗಿ ಸೆರೆ: ಇತ್ತೀಚೆಗೆ ಪತ್ನಿ ಜತೆ ಜಗಳ ಮಾಡಿ ಆಕೆಯಿಂದ ದೂರ ಹೋಗಿದ್ದ. ಆರೋಪಿಗೆ ಓರ್ವ ಮಗಳಿದ್ದು, ಆಕೆಯ ಮೇಲೆ ಪ್ರೀತಿಯಿದ್ದ ಕಾರಣ ನೋಡಲೆಂದು ಆಗಾಗ ಆಕೆಯ ಶಾಲೆಯ ಬಳಿ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದ. ಈ ಸಂಗತಿ ಅಶೋಕ್‌ನಗರ ಪೊಲೀಸರ ಗಮನಕ್ಕೂ ಬಂದಿತ್ತು. ಆರೋಪಿಯ ಮಗಳು ಶಾಲೆಗೆ ಹೋಗುತ್ತಿದ್ದ ಸ್ಕೂಲ್ ವ್ಯಾನ್ ಸಿಬ್ಬಂದಿಗೆ ಮಾಹಿತಿ ನೀಡಿ, ಸಿವಿಲ್ ಧಿರಿಸನಲ್ಲಿ ಸ್ಕೂಲ್ ವ್ಯಾನ್‌ನಲ್ಲಿ ಹೋಗಿದ್ದರು. ಮಗಳು ಬಸ್‌ನಿಂದ ಇಳಿಯುತ್ತಿದ್ದಂತೆ ಆಸೀಫ್ ಮಗಳನ್ನು ನೋಡಲು ಕಾತುರನಾಗಿ ಶಾಲೆ ಬಳಿ ನಿಂತಿದ್ದ. ಇದೇ ವೇಳೆ ಆತನನ್ನು ಸುತ್ತುವರಿದು ಬಂಧಿಸಿದ್ದಾರೆ.
ಪಿಸ್ತೂಲ್‌ನಂತೆ ಕೈ ಬೆರಳು :
ಆರೋಪಿ ಆಸೀಫ್ ಅಲಿಯಾಸ್ ಪಿಸ್ತೂಲ್‌ನ ಕೈ ಬೆರಳು ಗೂನವಾಗಿದ್ದು, ಕೊನೆಯ ಎರಡು ಬೆರಳನ್ನು ಸದಾ ಮಡಿಚುತ್ತಿದ್ದ. ಆತನ ಒಂದು ಕೈಯ ಬೆರಳುಗಳು ಪಿಸ್ತೂಲ್‌ನಂತೆ ಕಾಣುತ್ತಿದ್ದವು. ಇದಕ್ಕಾಗಿ ಆತನಿಗೆ ಆಸೀಫ್ ಅಲಿಯಾಸ್ ಪಿಸ್ತೂಲ್ ಎಂಬ ಹೆಸರು ಬಂದಿದೆ ಎಂದು ಮೂಲಗಳು ತಿಳಿಸಿವೆ.