Advertisement

ಸಿಮ್‌ ಕಾರ್ಡ್‌ ಕದ್ದು ಹಣ ದೋಚಿದವನ ಬಂಧನ

02:16 PM Aug 09, 2022 | Team Udayavani |

ಬೆಂಗಳೂರು: ಸಾರ್ವಜನಿಕರ ಸಿಮ್‌ಕಾರ್ಡ್‌ ಗಳನ್ನು ಕದ್ದು ಅವರ ಬ್ಯಾಂಕ್‌ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದ ಕಾರು ಚಾಲಕ ಈಶಾನ್ಯ ವಿಭಾಗದ ಸೆನ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Advertisement

ಮಂಡ್ಯ ಜಿಲ್ಲೆ ದುದ್ದ ಹೋಬಳಿ ಗುನ್ನನಾಯಕಹಳ್ಳಿ ನಿವಾಸಿ ಪ್ರಕಾಶ್‌ (31) ಬಂಧಿತ. ಆರೋಪಿಯಿಂದ 1.30 ಲಕ್ಷ ರೂ. ನಗದು, 2 ಮೊಬೈಲ್‌ಗಳು, 1 ಬೈಕ್‌ ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ದೂರುದಾರರ ವೃದ್ಧ ತಾಯಿಯ ಸಿಮ್‌ ಕಾರ್ಡ್‌ ಕದ್ದು ಮೇ 8ರಿಂದ ಮೇ 14ರ ಅವಧಿಯಲ್ಲಿ ಅವರ ಖಾತೆಯಿಂದ ತನ್ನ ಖಾತೆಗೆ 3.45 ಲಕ್ಷ ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿದ್ದ. ಈ ಕುರಿತು ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

 “ಡ್ರೈವರ್‌ ವಿವ್ಯೂ’ ಆ್ಯಪ್‌ನಲ್ಲಿ ಕೆಲಸ, ವಂಚನೆ: ಮಂಡ್ಯ ಮೂಲದ ಆರೋಪಿ ಬೆಂಗಳೂರಿನಲ್ಲಿ ಸುಮಾರು ವರ್ಷಗಳಿಂದ ಇದ್ದು, ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ “ಡ್ರೈವರ್‌ ವ್ಯೂ’ ಎಂಬ ಆ್ಯಪ್‌ನಲ್ಲಿ ಕೆಲಸ ಮಾಡುತ್ತಿದ್ದ. ಈ ಮೂಲಕ ತಾತ್ಕಾಲಿಕವಾಗಿ ದೂರುದಾರರ ಕಾರು ಚಾಲಕನಾಗಿ ಕಳೆದ ಮೇ ತಿಂಗಳಲ್ಲಿ ಹೋಗಿದ್ದ. ಈ ವೇಳೆ ದೂರುದಾರರ ವೃದ್ಧ ತಾಯಿ ನೆರೆ ಜಿಲ್ಲೆಗೆ ಹೋಗಿದ್ದರು. ಮಾರ್ಗ ಮಧ್ಯೆ ಹೋಟೆಲ್‌ಗೆ ಹೋದಾಗ ವೃದ್ಧೆ ತಮ್ಮ ಕಾರಿನಲ್ಲಿ ಮೊಬೈಲ್‌ ಬಿಟ್ಟು ಹೋಗಿದ್ದರು. ಆ ವೇಳೆ ಆರೋಪಿ ಮೊಬೈಲ್‌ನಿಂದ ಸಿಮ್‌ ಕಾರ್ಡ್‌ ತೆಗೆದು ಬ್ಲಾಕ್‌ ಆಗಿರುವ ಏರ್‌ಟೆಲ್‌ ಸಿಮ್‌ ಕಾರ್ಡ್‌ ಹಾಕಿದ್ದಾನೆ. ಸಂಜೆ ವೇಳೆಗೆ ಪರಿಚಯಸ್ಥರಿಗೆ ಕರೆ ಮಾಡಲು ಹೋದಾಗ ಯಾವದೇ ಕರೆ ಹೋಗಿಲ್ಲ.

ಹೀಗಾಗಿ ಅವರ ಪುತ್ರನಿಗೆ ಮಾಹಿತಿ ನೀಡಿದಾಗ, ಅವರು ಒಂದೆರಡು ದಿನ ಮತ್ತೂಂದು ಮೊಬೈಲ್‌ ಬಳಸುವಂತೆ ಸೂಚಿಸಿ, ಮೇ 14ರಂದು ಸಿಮ್‌ಕಾರ್ಡ್‌ ಆಕ್ಟಿವೇಶನ್‌ ಮಾಡಿಸಿದಾಗ ಬ್ಯಾಂಕ್‌ನಿಂದ ಹಣ ಕಡಿತವಾಗಿರುವುದು ಗೊತ್ತಾಗಿದೆ. ಕೂಡಲೇ ಅನುಮಾನಗೊಂಡ ಈಶಾನ್ಯ ವಿಭಾಗದ ಸೆನ್‌ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೆ, ವೃದ್ಧೆಗೆ ಯುಪಿಐ ಬಳಸುವುದು ಗೊತ್ತಿಲ್ಲ. ಜತೆಗೆ ಯಾವುದೇ ಓಟಿಪಿಯಾಗಲಿ, ಆ್ಯಪ್‌ ಇನ್‌ಸ್ಟಾಲ್‌ ಕೂಡ ಮಾಡಿಲ್ಲ. ನೆಟ್‌ ಬ್ಯಾಂಕಿಂಗ್‌ ಸೇವೆ ಬಳಕೆ ಕೂಡ ತಿಳಿದಿಲ್ಲ ಎಂದೂ ಮಾಹಿತಿ ನೀಡಿದ್ದರು. ಈ ಸಂಬಂಧ ತನಿಖೆ ಚುರುಕುಗೊಳಿಸಿದ ಈಶಾನ್ಯ ವಿಭಾಗದ ಸೆನ್‌ ಠಾಣೆ ಇನ್‌ಸ್ಪೆಕ್ಟರ್‌ ಆರ್‌. ಸಂತೋಷ್‌ ರಾಮ್‌ ನೇತೃತ್ವದ ತಂಡ ವೃದ್ಧೆಯ ಮೊಬೈಲ್‌ ನಂಬರ್‌ ತಾಂತ್ರಿಕ ತನಿಖೆ ನಡೆಸಿದರು.

Advertisement

ಜತೆಗೆ ದೂರುದಾರರ ಜತೆ ಚರ್ಚಿಸಿದಾಗ ಇತ್ತೀಚೆಗೆ ಆರೋಪಿಯನ್ನು ತಾತ್ಕಾಲಿಕವಾಗಿ ಕಾರು ಚಾಲಕ ನಾಗಿ ನೇಮಿಸಿಕೊಂಡಿರುವ ವಿಚಾರ ಗೊತ್ತಾಗಿದೆ. ಬಳಿಕ ಆರೋಪಿಯ ಮೊಬೈಲ್‌ ನಂಬರ್‌ ಪರಿಶೀಲಿಸಿದಾಗ ಕೆಲವೊಂದು ಮಾಹಿತಿ ಸಿಕ್ಕಿತ್ತು. ಬಳಿಕ ಸಾಕ್ಷ್ಯ ಸಮೇತ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಯುಪಿಐನಿಂದ ಹಣ ವರ್ಗಾವಣೆ : ಆರೋಪಿ ವೃದ್ಧೆಯ ಸಿಮ್‌ ಕಾರ್ಡ್‌ ಕಳವು ಮಾಡಿ, ಕೆಲ ಹೊತ್ತಿನಲ್ಲೇ ತನ್ನ ಮೊಬೈಲ್‌ಗೆ ಸಿಮ್‌ಕಾರ್ಡ್‌ ಹಾಕಿಕೊಂಡು, ಫೋನ್‌ ಪೇ, ಗೂಗಲ್‌ ಪೇ ಡೌನ್‌ಲೋಡ್‌ ಮಾಡಿಕೊಂಡು ಮೇ 8ರಿಂದ ಮೇ 14ರವರೆಗೆ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾನೆ. ಈತನ ವಿಚಾರಣೆ ವೇಳೆ, ತನಗೆ ಮತ್ತ ತನ್ನ ತಾಯಿಗೆ ಅನಾರೋಗ್ಯ ಸಮಸ್ಯೆ ಇತ್ತು. ಜತೆಗೆ ತಾನು ಸಾಲ ಮಾಡಿಕೊಂಡಿದ್ದರಿಂದ ಈ ರೀತಿ ಕೃತ್ಯ ಎಸಗಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರ ಸಲಹೆ :

  • ನಿಮ್ಮ ಮೊಬೈಲ್‌ ಸಿಮ್‌ಕಾರ್ಡ್‌ ಕಾರ್ಯನಿರ್ವಹಿಸುತ್ತಿಲ್ಲವೆಂದು ತಿಳಿದ ಕೂಡಲೇ ಸಮೀಪದ ಸಿಮ್‌ ಸರ್ವಿಸ್‌ ಸೆಂಟರ್‌ಗೆ ಹೋಗಿ ಹೊಸ ಸಿಮ್‌ ಪಡೆಯಿರಿ.
  • ನಿಮ್ಮ ಮೊಬೈಲ್‌ ಮತ್ತು ಅಪ್ಲಿಕೇಷನ್‌ಗಳು ಲಾಕ್‌ ಆಗಿದೆ, ಯಾರು ಏನೂ ಮಾಡುವುದಿಲ್ಲ ಎಂದು ಭಾವಿಸಿ, ಎಲ್ಲೆಂದರಲ್ಲಿ ಮೊಬೈಲ್‌ ಇಡಬೇಡಿ.
  • ಮೊಬೈಲ್‌ ಅಥವಾ ಸಿಮ್‌ಕಾರ್ಡ್‌ ಕಳುವಾದ ಕೂಡಲೇ ಪೊಲೀಸರಿಗೆ ದೂರು ನೀಡಿ, ಜತೆಗೆ ಬ್ಯಾಂಕ್‌ಗೆ ಕರೆ ಮಾಡಿ ಖಾತೆ ಬ್ಲಾಕ್‌ ಮಾಡಿಸಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next