ಬೆಂಗಳೂರು: ಸಹೋದರನ ಪುತ್ರಿಗೆ ಕಿರುಕುಳ ನೀಡುತ್ತಿದ್ದ ಯುವಕನನ್ನು ಕೊಲೆಗೈದಿದ್ದ ಮಾಜಿ ರೌಡಿಶೀಟರ್ ಸೇರಿ ಇಬ್ಬರನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬೈಯಪ್ಪನಹಳ್ಳಿ ನಿವಾಸಿ, ಮಾಜಿ ರೌಡಿಶೀಟರ್ ನಾಗೇಂದ್ರ (46) ಮತ್ತು ಆತನ ಸಹಚರ ರಂಗಸ್ವಾಮಿ (45) ಬಂಧಿತರು.
ನಾಗೇಂದ್ರ ಸಹೋದರನ ಪುತ್ರಿ ಕಾಲೇಜಿ ನಲ್ಲಿ ಓದುತ್ತಿದ್ದು, ಯುವತಿಯ ದೂರದ ಸಂಬಂಧಿ ಹಾಗೂ ಹಳೇ ಪೇಪರ್ ಆಯುವ ಕೆಲಸ ಮಾಡುವ ಪ್ರಜ್ವಲ್ ಯುವತಿಗೆ ಪ್ರೀತಿಸುವಂತೆ ಒತ್ತಾಯಿಸಿದ್ದ. ಪದೇ ಪದೆ ಕರೆ ಮತ್ತು ವಾಟ್ಸ್‌ಆ್ಯಪ್ ಸಂದೇಶದ ಮೂಲಕ ಪೀಡಿಸುತ್ತಿದ್ದ. ಈ ವಿಚಾರ ತಿಳಿದ ನಾಗೇಂದ್ರ, ಜು.15 ರಂದು ರಾತ್ರಿ ಬೈಯಪ್ಪನಹಳ್ಳಿಯ ಮೆಟ್ರೋನಿಲ್ದಾಣ ಬಳಿಯ ನಿರ್ಜನ ಪ್ರದೇಶಕ್ಕೆ ಪ್ರಜ್ವಲ್‌ನನ್ನು ಕರೆಸಿಕೊಂಡಿದ್ದರು. ಈ ವೇಳೆ ಎಚ್ಚರಿಕೆ ನೀಡುವ ಭರದಲ್ಲಿ ನಾಗೇಂದ್ರ ಮತ್ತು ರಂಗಸ್ವಾಮಿ ದೊಣ್ಣೆಯಿಂದ ಪ್ರಜ್ವಲ್ ತಲೆಗೆ ಹೊಡೆದಿದ್ದರು. ಬಳಿಕ ಪ್ರಜ್ವಲ್ ಮೃತಪಟ್ಟಿದ್ದರು.
ನಾಗೇಂದ್ರ ವಿರುದ್ಧ ಈ ಹಿಂದೆ ಕೊಲೆ ಯತ್ನ ಪ್ರಕರಣವಿದ್ದು, ರೌಡಿಪಟ್ಟಿ ತೆರೆಯಲಾಗಿತ್ತು. 2020ರಲ್ಲಿ ರೌಡಿಪಟ್ಟಿ ರದ್ದು ಪಡಿಸಿಕೊಂಡಿದ್ದಾನೆ. ಇದೀಗ ಮತ್ತೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಯುವತಿಯ ನಂಬರ್ ಕೊಟ್ಟಿದಲ್ಲದೆ, ಆರೋಪಿಗಳ ಸೂಚನೆ ಮೇರೆಗೆ ಪ್ರಜ್ವಲ್‌ನನ್ನು ಸ್ಥಳಕ್ಕೆ ಕರೆಸಿಕೊಂಡಿದ್ದ ವಿಷ್ಣು ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಜತೆಗೆ ಇತರೆ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.