ಹೊಸನಗರ: ಕಳೆದ ನಾಲ್ಕು ವರ್ಷದ ಹಿಂದೆ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ಸೆಷನ್ಸ್ ನ್ಯಾಯಾಲಯದಲ್ಲಿ ಹಲ್ಲೆ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಜು.22ರೊಳಗೆ ಆರೋಪಿಯನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ನಗರ ಠಾಣೆಯ ಪ್ರಭಾರ ಪಿಎಸ್‌ಐ ಸೂರಪ್ಪ ನೇತೃತ್ವದ ಪೊಲೀಸರ ತಂಡ ಬಂಡೋಡಿಯ ದಟ್ಟಡವಿಯಲ್ಲಿ ಅಡಗಿದ್ದ ಆರೋಪಿ ಬಂಡೋಡಿ ಮೋಹನ್‌ನನ್ನು ಬಂಧಿಸಿದೆ.
ಏನಿದು ಪ್ರಕರಣ? : ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಆರೋಪಿ ಬಂಡೋಡಿ ಮೋಹನ್ ಮತ್ತು ಆತನ ಮಗ ಚಂದ್ರಶೇಖರ್, ಮೀಸೆ ನಾರಾಯಣಪ್ಪ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದರು ಎನ್ನಲಾಗಿದೆ. ಈ ಬಗ್ಗೆ 2015 ಜನವರಿ 1 ರಂದು ಪ್ರಕರಣ ದಾಖಲಾಗಿತ್ತು. ಆ ಸಂದರ್ಭದಲ್ಲಿ ನಗರ ಠಾಣೆ ಪಿಎಸ್‌ಐ ಸತೀಶ್ ನೇತೃತ್ವದ ತಂಡ ಆರೋಪಿಗಳಿಬ್ಬರನ್ನು ಬಂಧಿಸಿ ಕಸ್ಟಡಿಗೆ ನೀಡಿತ್ತು. ಆದರೆ ತೀರ್ಥಹಳ್ಳಿ ತಾಲೂಕಿನ ಹಿಷಣ ಧರ್ಮೇಗೌಡ ಎಂಬುವವರನ್ನು ಪುಸಲಾಯಿಸಿ ‘ನಿಮ್ಮ ಮನೆಯಲ್ಲಿ ಸಾಯೋತನಕ ಕೆಲಸ ಮಾಡಿ ಬದುಕು ಸಾಗಿಸುತ್ತೇವೆ ಎಂದು ಮೋಹನ್ ನಂಬಿಸಿದ್ದ. ಇದನ್ನು ನಂಬಿದ ಧರ್ಮೇಗೌಡರು ಇವರಿಬ್ಬರನ್ನು ಜಾಮೀನಿನ ಮೇಲೆ ಬಿಡಿಸಿದ್ದರು.
ಮತ್ತೆ ಪರಾರಿ! ಜಾಮೀನಿನ ಮೇಲೆ ಬಿಡುಗಡೆಗೊಂಡ ಇವರನ್ನು ಧರ್ಮೇಗೌಡರು ಮನೆಗೆ ಕರೆದುಕೊಂಡು ಹೋಗಲು ಬಸ್ ಹತ್ತುವ ವೇಳೆ ಆರೋಪಿ ಮೋಹನ್ ಮತ್ತು ಚಂದ್ರಶೇಖರ್ ಪರಾರಿಯಾಗಿ ತಮ್ಮ ಸಹಾಯಕ್ಕೆ ಬಂದ ಧರ್ಮೇಗೌಡರಿಗೂ ಚಳ್ಳೆಹಣ್ಣು ತಿನ್ನಿಸಿದ್ದರು.
ಈ ಪ್ರಕಣದ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಗೆ ಪದೇ ಪದೇ ನ್ಯಾಯಾಲಯದಿಂದ ನೋಟಿಸ್ ಬರುವಂತಾಗಿತ್ತು. ನಗರ ಠಾಣೆಯಲ್ಲಿ ಪಿಎಸ್‌ಐ ಆಗಿದ್ದ ಸತೀಶ ನೇತೃತ್ವದ ತಂಡ ಮತ್ತೆ ದಾಳಿ ನಡೆಸಿದ ವೇಳೆ ಆರೋಪಿ ಮೋಹನ್ ಕತ್ತಿ ಬೀಸಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ. ಆದರೆ ಆತನ ಮಗ ಚಂದ್ರಶೇಖರ್ ಸಿಕ್ಕಿಬಿದ್ದಿದ್ದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆತ ಕಳೆದ ಮೂರು ವರ್ಷದಿಂದ ಜೈಲಿನಲ್ಲಿದ್ದಾನೆ. ಆದರೆ ಆರೋಪಿ ಮೋಹನ್ ಮಾತ್ರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಲೇ ಇದ್ದ.
ದಟ್ಟಡವಿಯಲ್ಲಿ ಶೆಡ್ ಹಾಕಿಕೊಂಡಿದ್ದ: ಜು.22ರೊಳಗೆ ಆರೋಪಿ ಮೋಹನ್ ಬಂಧನಕ್ಕೆ ಶಿವಮೊಗ್ಗ ಸೆಷನ್ಸ್ ನ್ಯಾಯಾಲಯ ಗಡುವು ವಿಧಿಸಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ನಗರ ಠಾಣೆಯ ಪ್ರಭಾರ ಪಿಎಸ್‌ಐ ಸೂರಪ್ಪ, ಎಎಸ್‌ಐ ಶ್ರೀಪಾದ್, ಉದಯಕುಮಾರ್, ಗಂಗಪ್ಪ ಬಟೋಳಿ, ಗಂಗಪ್ಪ ತುಂಗಳ್, ರಮೇಶ ನೇತೃತ್ವದ ತಂಡ ಖಚಿತ ಮಾಹಿತಿ ಮೇಲೆ ರಾತ್ರಿ ವೇಳೆ ಬಂಡೋಡಿಯ ದಟ್ಟಡವಿಗೆ ನುಗ್ಗಿ ಶೋಧ ಕಾರ್ಯ ನಡೆಸಿದ್ದಾರೆ. ಕಾಡಿನ ಮಧ್ಯೆ ಶೆಡ್‌ವೊಂದು ಕಂಡು ಬಂದಿದ್ದು, ಅದರಲ್ಲಿದ್ದ ಆರೋಪಿ ಮೋಹನ್ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸೋಮವಾರ ಹಾಜರು ಪಡಿಸಿದ್ದಾರೆ.
ಸಾಹಸದ ಕಾರ್ಯಾಚರಣೆ!: ಕೊಡಚಾದ್ರಿ ತಪ್ಪಲಿನ ದಟ್ಟಡವಿ ಬಂಡೋಡಿಯಲ್ಲಿ ಕಾರ್ಯಾಚರಣೆ ನಡೆಸುವುದು ಅಷ್ಟು ಸುಲಭವಲ್ಲ. ವಿಪರೀತ ಮಳೆ ಬೀಳುವ ಈ ಪ್ರದೇಶದಲ್ಲಿ ಇಂಬಳದ ರಾಶಿ, ದುರ್ಗಮ ಹಾದಿ, ಒಂದು ಚೂರು ಎಚ್ಚರ ತಪ್ಪಿದರೂ ನೇರವಾಗಿ ಲಿಂಗನಮಕ್ಕಿ ಹಿನ್ನೀರಿಗೆ ಬೀಳುವ ಅಪಾಯವಿದ್ದರೂ ಸೂರಪ್ಪ ನೇತೃತ್ವದ ತಂಡ ರಾತ್ರಿ ವೇಳೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಹುಡುಕಾಡಿ ಬಂಧಿಸಿದೆ.