ಚನ್ನಪಟ್ಟಣ: ಹಸುವನ್ನು ಕೊಂದು ಸಾಗಿಸುವ ಸಂದರ್ಭದಲ್ಲಿ ಪುರ ಪೊಲೀಸರು ಹಸುವಿನ ದೇಹವನ್ನು ವಶಪಡಿಸಿಕೊಂಡು ಐದು ಮಂದಿ ಆರೋಪಿಗಳನ್ನು ಬಂಧಿಸಿರುವ ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಾತನೂರು ಸರ್ಕಲ್ ನಲ್ಲಿರುವ ಇಂದಿರಾ ಕಾಟೇಜ್‌ನಲ್ಲಿ ನಡೆದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್‌ಬಾಬು, ತಾಲೂಕು ಪೊಲೀಸ್ ಉಪಭಾಗಾಧಿಕಾರಿ ಕೆ.ಎನ್.ರಮೇಶ್ ಹಾಗೂ ನಗರ ವೃತ್ತ ನಿರೀಕ್ಷಕ ದಿವಾಕರ್‌ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆಯಪಿ.ಎಸ್.ಐ.ಹರೀಶ್, ಎ.ಎಸ್.ಐ ಸಿದ್ದರಾಜು ಹಾಗೂಸಿಬ್ಬಂದಿ ಸುನೀಲ್, ಪವನ್‌ಕುಮಾರ್, ಕಾರ್ತಿಕ್,ಚಂದ್ರಶೇಖರ್, ರವಿಕುಮಾರ್, ಕಿರಣ್‌ಕುಮಾರ್, ಅವಿನಾಶ್, ಎ.ಎಸ್.ಬೀರಯ್ಯ, ದಯಾನಂದ್, ಸತ್ಯಪ್ಪ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದರು.
ಕೆಲ ದಿನಗಳ ಹಿಂದೆ ಇದೇ ಇಂದಿರಾ ಕಾಟೇಜ್‌ನಲ್ಲಿ ಗೋಮಾಂಸದ ಅಂಗಡಿಯನ್ನು ಚಿತ್ರೀಕರಣ ಮಾಡುತ್ತಿದ್ದ ಗೋ ರಕ್ಷಣ ಸಮಿತಿಯ ಸದಸ್ಯರ ಮೇಲೆ ಹಲ್ಲೆ ನಡೆಸಿದ ಪರಿಣಾಮ ಈ ಘಟನೆ ರಾಜ್ಯಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಗೋಮಾಂಸವನ್ನು ನಿಷೇಧಿಸುವಂತೆ ಜಿಲ್ಲಾಡಳಿತ ಆದೇಶ ನೀಡಿತ್ತು. ಅದರಲ್ಲೂ ನಗರದಲ್ಲಿ ಈ ಘಟನೆ ನಡೆದಿದ್ದರಿಂದ ನಗರ ಪೊಲೀಸರು ಭಾರಿ ಕಟ್ಟೆಚ್ಚರ ವಹಿಸಲಾಗಿತ್ತು.
ಪೊಲೀಸರು ದಿನದ 24 ತಾಸುಗಳು ಕೂಡ ನಗರದಲ್ಲಿ ನಡೆಯುತ್ತಿದ್ದ ಗೋಮಾಂಸದ ಅಂಗಡಿಗಳು ಹಾಗೂ ಹೋಟೆಲ್‌ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಮಧ್ಯರಾತ್ರಿಯ ಸಂದರ್ಭದಲ್ಲಿ ಗೋವಧೆಯ ಬಗ್ಗೆ ಮಾಹಿತಿ ಪಡೆದ ಠಾಣೆಯ ಪಿ.ಎಸ್ .ಐ.ಹರೀಶ್ ತಮ್ಮ ಸಿಬ್ಬಂದಿ ಜೊತೆ ದಾಳಿ ಮಾಡಿದ್ದರು.
250 ಕೆ.ಜಿ ತೂಗುವ ಹಸುನ ದೇಹ ವಶ: ಬಂಧಿತ ಆರೋಪಿಗಳು ಬಾಬುಸಾಹೇಬ್ ಎಂಬುವರ ಮಗ ರೆಹಮಾನ್, ಕಾಸಿಮ್ ಸಾಹೇಬ್ ಎಂಬುವರ ಮಗ ಪೈಯಾಜ್ ಅಹಮ್ಮದ್, ಸಿದ್ದಿಕ್, ಮುಮ್ತಾಜ್‌ಎಂಬುವರ ಮಗ ಫರೀದ್ ಅಹಮ್ಮದ್, ಇಬ್ರಾಂ ಎಂದು ತಿಳಿದು ಬಂದಿದ್ದು, ಇವರೆಲ್ಲಾ ಇಂದಿರಾ ಕಾಟೇಜ್‌ನವರು ಎಂದು ಹೇಳಲಾಗಿದೆ. ಇಂದಿರಾ ಕಾಟೇಜ್‌ನ ನಿವಾಸದ ಕಸಾಯಿ ಖಾನೆಯಲ್ಲಿ ಅರ್ಧ ಚರ್ಮ ಸುಲಿದ ಸುಮಾರು 250 ಕೆ.ಜಿ ತೂಗುವ ಹಸುವಿನ ದೇಹವನ್ನು ವಶಕ್ಕೆ ಪಡೆದ ಪೊಲೀಸರು, ತಮ್ಮ ಮೇಲಾಧಿಕಾರಿಗಳ ಆದೇಶದ ಅನುಗುಣವಾಗಿ ಹಸುವಿನ ದೇಹವನ್ನು ನಗರಸಭೆ ವಶಕ್ಕೆ ನೀಡಿದ್ದಾರೆ.
ಈ ಪ್ರಕರಣದ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಐದು ಮಂದಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಠಾಣಾ ವ್ಯಾಪ್ತಿಯಲ್ಲಿ ಗೋಮಾಂಸ ನಿಷೇಧದ ಬಗ್ಗೆ ಬಹಳ ಎಚ್ಚಕೆ ವಹಿಸಿ, ತಮ್ಮ ಕರ್ತವ್ಯ ಪಾಲನೆ ಮಾಡುತ್ತಿರುವ ಠಾಣೆಯ ಪಿ.ಎಸ್.ಐ ಹರೀಶ್ ಬಗ್ಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.